ವೈವಾಹಿಕ ಜೀವನಕ್ಕೆ ಕಾಲಿಟ್ಟ 'ರಾವಲ್ಪಿಂಡಿ ಎಕ್ಸ್ ಪ್ರೆಸ್'

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮುಸ್ಲಿಂ ಧಾರ್ಮಿಕ ಸಂಪ್ರದಾಯದಂತೆ ರುಬಾಬ್ ಅವರನ್ನು ಅಖ್ತರ್ ವಿವಾಹವಾಗಿದ್ದಾರೆ.
ಇಸ್ಲಾಮಾಬಾದಿನಿಂದ 65 ಕಿ.ಮೀ ದೂರದಲ್ಲಿರುವ ಹರಿಪುರದಲ್ಲಿ ಶೋಯೆಬ್ ಮತ್ತು ರುಬಾಬ್ ಅವರ ವಿವಾಹ ಕಾರ್ಯಕ್ರಮ ನಿನ್ನೆ ನೆರವೇರಿದೆ ಎಂದು ತಿಳಿದುಬಂದಿದೆ. ಕೆಲವೇ ಆಪ್ತರ ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ಶೋಯೆಬ್ ಮತ್ತು ರುಬಾಬ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರುಬಾಬ್ ಅವರ ತಂದೆ ಮುಷ್ತಾಕ್ ಖಾನ್ ಅವರು ಹರಿಪುದಲ್ಲಿ ದೊಡ್ಡ ಉಧ್ಯಮಿಯಾಗಿದ್ದು, ಶೋಯೆಬ್ ಅವರ ಪೋಷಕರು ಮೆಕ್ಕಾಗೆ ತೆರಳಿದ್ದ ವೇಳೆ ಈ ಇಬ್ಬರಿಗೂ ಪರಿಚಯ ಉಂಟಾಗಿ ವಿವಾಹದ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿತ್ತು.
ವಿವಾದಕ್ಕೀಡಾಗಿದ್ದ ರುಬಾಬ್ ವಯಸ್ಸು
ಈ ಹಿಂದೆ ಪಾಕ್ ಮಾಧ್ಯಮಗಳು ವರದಿ ಮಾಡಿದಂತೆ ರುಬಾಬ್ ಅವರ ವಯಸ್ಸು ಕೇವಲ 17 ಆಗಿದ್ದು, ಆಕೆ ಇನ್ನೂ ಅಪ್ರಾಪ್ತೆಯಾಗಿದ್ದಳು. ಹೀಗಿದ್ದೂ ವೇಗಿ ಶೋಯೆಬ್ ಅವರನ್ನು ವರಿಸಲು ಹೇಗೆ ಮುಂದಾದರು ಎಂದು ಮಾಧ್ಯಮಗಳು ಪ್ರಶ್ನಿಸಿದ್ದವು. ಆದರೆ ಈ ಬಗ್ಗೆ ಸಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶೊಯೆಬ್ ಅಖ್ತರ್ ರುಬಾಬ್ ಅವರ ವಯಸ್ಸು 17 ಅಲ್ಲ. ಅವರ ವಯಸ್ಸು 20 ಎಂದು ಹೇಳಿದ್ದರು.
ಈ ಹಿಂದೆ ಜೂನ್ 19ರಂದು ಮೆಹಂದಿ ಕಾರ್ಯಕ್ರಮ, ಜೂನ್ 20ರಂದು ರುಖ್ಸಾತಿ ಕಾರ್ಯಕ್ರಮ ಮತ್ತು ರಾವಲ್ಪಿಂಡಿಯ ಹರಿಪುರದಲ್ಲಿರುವ ಬಿಲಾವಲ್ ಹಾಲ್ ನಲ್ಲಿ ಜೂನ್ 22ರಂದು ವಲೀಮಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ರುಬಾಬ್ ಅವರ ವಯಸ್ಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೇಳುತ್ತಿದ್ದಂತೆಯೇ ವಿವಾಹವನ್ನು ಮುಂದೂಡಲಾಗಿತ್ತು.
ನಿನ್ನೆ ಶೋಯೆಬ್ ಅವರ ವಿವಾಹ ಕಾರ್ಯಕ್ರಮ ಜರುಗಿದೆ. ಆದರೆ ಈ ಬಗ್ಗೆ ಟ್ವೀಟ್ ಸಮರಗಳು ಮುಂದುವರೆದಿದ್ದು, ಶೊಯೆಬ್ ಅವರು ಅದೇ ಹುಡುಗಿಯನ್ನು ಮದುವೆಯಾಗಿದ್ದರೆ ಅವರ ವಯಸ್ಸು ಅದು ಹೇಗೆ 20 ಆಯಿತು ಎಂಬುದರ ಕುರಿತಾಗಿ ಸಾವಿರಾರು ಟ್ವೀಟ್ ಗಳು ಹರಿದಾಡುತ್ತಿವೆ.
ಒಟ್ಟಾರೆ ತಮ್ಮ ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಶೋಯೆಬ್ ಅಖ್ತರ್ ಅವರು ತಮ್ಮ 38ನೇ ವಯಸ್ಸಿನಲ್ಲಿ 20 ವರ್ಷದ (ಶೊಯೆಬ್ ಹೇಳಿಕೆ ಪ್ರಕಾರ) ರುಬಾಬ್ ಅವರನ್ನು ವಿವಾಹವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


