ಅಮರನಾಥ ಯಾತ್ರೆ: ಬದಲಾದ ಮಾರ್ಗ

ಜಮ್ಮು: ಪೆಹಲ್ಗಾಮ್ ಮತ್ತು ಚಂದನ್ವಾರಿ ಮಾರ್ಗದಲ್ಲಿ ಹೆಚ್ಚಾಗಿ ಮಂಜು ಬೀಳುತ್ತಿರುವುದರಿಂದ ಅಮರನಾಥ ಯಾತ್ರೆ ಮಾರ್ಗವನ್ನು ಬಾಲ್ಟಾಲ್ಗೆ ಬದಲಿಸಲಾಗಿದೆ.
ಪೆಹಲ್ಗಾಮ್ ಮತ್ತು ಚಂದನ್ವಾರಿ ಪ್ರದೇಶದಲ್ಲಿ ಮಂಜು ಬೀಳುವಿಕೆ ತೀವ್ರಗೊಂಡಿದ್ದು, ವಿಮಾನ ಹಾರಾಟ ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾತ್ರಿಕರು ಬದಲಿ ಮಾರ್ಗವನ್ನು ಅನುಸರಿಸುವಂತೆ ಜಮ್ಮು ಮತ್ತು ಕಾಶ್ಮೀರ ಪ್ರವಾಸೋಧ್ಯಮ ಇಲಾಖೆ ಹೇಳಿದೆ. ಅಮರನಾಥ ಯಾತ್ರೆ ಎರಡು ಪ್ರಮುಖ ಮಾರ್ಗಗಳಾಗಿರುವ ಪೆಹಲ್ಗಾಮ್ ಮತ್ತು ಬಾಲ್ಟಾಲ್ಗಳ ಪೈಕಿ ಪೆಹಲ್ಗಾಮ್ ಮಾರ್ಗ ಅಸಾಧ್ಯವಾಗಿದ್ದು, ಉಳಿದಿರುವ ಬಾಲ್ಟಾಲ್ ಮಾರ್ಗವನ್ನೇ ಯಾತ್ರಿಕರು ಬಳಸಬೇಕಿದೆ.
ಈ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋಧ್ಯಮ ಸಚಿವ ಗುಲಾಂ ಅಹಮ್ಮದ್ ಮಿರ್ ಅವರು, ಪ್ರಸ್ತುತ ಪೆಹಲ್ಗಾಮ್ ಮಾರ್ಗ ಯಾತ್ರಿಕರಿಗೆ ದುರ್ಗಮವಾಗಿದ್ದು, ಬಾಲ್ಟಾಲ್ ಮಾರ್ಗವನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಯಾತ್ರೆ ಕೈಗೊಂಡಿರುವ ಯಾತ್ರಿಕರು ವಾಪಾಸಾದ ಬಳಿಕ ಹವಾಮಾನ ವರದಿಯ ಆಧಾರದ ಮೇಲೆ ಮುಂದಿನ ಯಾತ್ರೆಯ ಮಾರ್ಗದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಉತ್ತರಾಖಂಡ ಪ್ರವಾಹದ ಬಳಿಕ ಅಮರನಾಥ ಯಾತ್ರಿಕರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದ್ದು, ಪ್ರಸ್ತುತ ಯಾತ್ರೆಯಲ್ಲಿ 900 ಪ್ರವಾಸಿಗರು ಮಾತ್ರ ಯಾತ್ರೆ ಕೈಗೊಂಡಿದ್ದಾರೆ. ಆದರೆ ಈ ವರ್ಷ ಪೆಹಲ್ಗಾಮ್ ಮತ್ತು ಚಂದನ್ವಾರಿ ಪ್ರಾಂತ್ಯದಲ್ಲಿ ಬೀಳುತ್ತಿರುವ ಮಂಜಿನಿಂದಾಗಿ ಯಾತ್ರಿಕರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಪೆಹಲ್ಗಾಮ್ನಲ್ಲಿ ಹೆಚ್ಚಾಗಿರುವ ಮಂಜಿನಿಂದಾಗಿ ಜಮ್ಮು ಮತ್ತು ಕಾಶ್ಮೀರ ಪ್ರವಾಸೋಧ್ಯಮ ಇಲಾಖೆ ಬಾಲ್ಟಾಲ್ಗೆ ಮಾರ್ಗ ಬದಲಾವಣೆ ಮಾಡಿದ್ದು, ಬಾಲ್ಟಾಲ್ನಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯರ ಪ್ರಕಾರ ಬಾಲ್ಟಾಲ್ನಲ್ಲಿ ಯಾತ್ರಿಕರು ತಂಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


