'ಧವನಂ' ವಂಚನೆ: ಗ್ರಾಹಕರ ವಿರುದ್ಧವೇ ಸಂಸ್ಥೆಯ ದೂರು

ಬೆಂಗಳೂರು: ಕಳೆದ 26ರಂದು ಧವನಂ ಗ್ರಾಹಕರೆಂದು ಗಲಾಟೆ ನಡೆಸಿದವರು ನಮ್ಮ ಗ್ರಾಹಕರೇ ಅಲ್ಲ, ಈ ವರೆಗೂ ಅವರನ್ನು ನಮ್ಮ ಮಳಿಗೆಯಲ್ಲಿ ನೋಡಿಯೇ ಇಲ್ಲ ಎಂದು ಧವನಂ ಜ್ಯುವೆಲರ್ಸ್ ಸಂಸ್ಥೆ ಹೇಳಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಧವನಂ ಆಭರಣ ಸಂಸ್ಥೆ, ಈ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಮಾತನಾಡಿದ ಧವನಂ ಸಂಸ್ಥೆಯ ನಿರ್ದೇಶಕ ಡಿ.ವಿ.ಅರವಿಂದ್ ಅವರು, 'ಗ್ರಾಹಕರ ಹೆಸರು ಹೇಳಿಕೊಂಡು ಧವನಂ ವಿರುದ್ದ ಸುಳ್ಳು ದಾಖಲೆಗಳನ್ನು ಒದಗಿಸಲಾಗಿದೆ. ಅಂದು ದಾಂಧಲೆ ನಡೆಸಿದವರು ನಮ್ಮ ಗ್ರಾಹಕರೇ ಅಲ್ಲ' ಎಂದು ಅವರು ಹೇಳಿದ್ದಾರೆ.
'ಕಾಮರಾಜ ರಸ್ತೆಯಲ್ಲಿರುವ ನಮ್ಮ ಆಭರಣ ಮಳಿಗೆಗೆ ಅನಾಮಿಕ ಜನರು ನುಗ್ಗಿ 65 ಲಕ್ಷ ಮೋಸ ಮಾಡಿದ್ದಾರೆಂದು ದಾಂಧಲೆ ನಡೆಸಿದರು. ಅಸಲಿಗೆ ಗ್ರಾಹಕರೆಂದು ಹೇಳಿ ಬಂದವರು ನಮ್ಮ ಗ್ರಾಹಕರೇ ಅಲ್ಲ. ನಮ್ಮ ಮಳಿಗೆಗೆ ದಿನನಿತ್ಯ ಗ್ರಾಹಕರಾದ ಸುಭಾಷ್ ಬಾಲಾಜಿ ಎಂಬುವವರ ಜೊತೆಗೆ ಶೀಕಾ ಮಿಶ್ರಾ ಎಂಬುವವರು ಬಂದು ಚಿನ್ನಾಭರಣ ಖರೀದಿಸುವುದಾಗಿ ಈ ಹಿಂದೆ 65 ಲಕ್ಷ ಕೊಟ್ಟಿದ್ದರು. ಕಾರಣಾಂತರಗಳಿಂದ ಅವರು ಚಿನ್ನ ಬೇಡ ಹಣವನ್ನು ವಾಪಸ್ಸು ಮಾಡಲು ತಿಳಿಸಿದಾಗ ಆರ್ಡರ್ನ್ನು ವಜಾ ಮಾಡಿ ಹಣವನ್ನು ಹಿಂತಿರುಗಿಸಿದ್ದೆವು. ಈ ಬಗ್ಗೆ ನಮ್ಮಲ್ಲಿ ಸಿಸಿ ಟಿವಿ ದಾಖಲೆಗಳಿವೆ. ಆಭರಣ ಮಳಿಗೆಗೆ ಕೆಟ್ಟ ಹೆಸರನ್ನು ತರಬೇಕೆಂಬ ಕೆಟ್ಟ ಉದ್ದೇಶದಿಂದ ನಮ್ಮ ಸಂಸ್ಥೆಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರವಿಂದ್ ಆರೋಪಿಸಿದ್ದಾರೆ.
'ಗ್ರಾಹಕರ ಹೆಸರಿನಲ್ಲಿ ಅನಾಮಿಕರು ತೋರಿಸುತ್ತಿರುವ ದಾಖಲೆಗಳು ನಮ್ಮ ಮಳಿಗೆಯದ್ದೇ ಅಲ್ಲ, ಚಿಹ್ನೆ ಹಾಗೂ ಸಹಿ ಇಲ್ಲದೇ ಯಾವುದೇ ರಶೀದಿಯನ್ನು ನಮ್ಮ ಮಳಿಗೆ ನೀಡುವುದೇ ಇಲ್ಲ. 100 ರೂ ಮೌಲ್ಯವುಳ್ಳ ವಸ್ತುಗಳನ್ನು ಕೊಳ್ಳಬೇಕಾದರೆ ಗ್ರಾಹಕರು ಅನೇಕ ರೀತಿಯಲ್ಲಿ ರಶೀದಿಯನ್ನು ಪರೀಶೀಲಿಸುತ್ತಾರೆ. ಹೀಗಿರುವಾಗ 65 ಲಕ್ಷ ಮೌಲ್ಯದ ರಶೀದಿಯನ್ನು ತೆಗೆದುಕೊಳ್ಳುವಾಗ ಸಹಿ, ಚಿಹ್ನೆ ಇಲ್ಲದೇ ಇರುವ ರಶೀದಿಯನ್ನು ಹೇಗೆ ತೆಗೆದುಕೊಂಡರು. ಇದರಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಬಹುದು. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಕೆಲವು ಸಮಾಜ ಘಾತುಕ ಸಂಸ್ಥೆಗಳು ಸಂಸ್ಥೆಗೆ ಮಸಿ ಬಳಿಯಲು ಯತ್ನಿಸುತ್ತಿದೆ. ಆದರೆ ಅದಕ್ಕೆ ನಮ್ಮ ಸಂಸ್ಥೆ ಆಸ್ಪದ ನೀಡುವುದಿಲ್ಲ ಪ್ರಕರಣ ಸಂಬಂಧ ಇಂದು ಡಿಸಿಪಿ ಹರ್ಷಾರವರ ಅವರಲ್ಲಿ ಎಫ್ಐಆರ್ ದಾಖಲು ಮಾಡಲಾಗುತ್ತದೆ' ಎಂದು ಅವರು ತಿಳಿಸಿದರು.
ಏನಿದು ಪ್ರಕರಣ: ಕನಕಪುರ ರಸ್ತೆ, ಮೈಸೂರು ರಸ್ತೆ, ಆರ್ ಟಿ ನಗರ ಹಾಗೂ ವಿವಿಧ ಬಡಾವಣೆ ನಿವಾಸಿಗಳಾದ ಮಹೇಂದ್ರ, ಮುನಿಯಪ್ಪ, ರಫೀಕ್ ಬರ್ಬಾರ್, ಮಂಗಳ, ಗೌರಮ್ಮ, ಹೇಮಲತಾ, ಸುಶೀಲಾ ದೇವರಾಜ್, ನಾರಾಯಣಮ್ಮ, ಮೋಹನ್ ಇತರರು ಸಂಘಸಂಸ್ಥೆ ನಡೆಸುತ್ತಿದ್ದರು. ಸಂಸ್ಥೆಗೆ ಬೇಕಿರುವ ಹಣ ಒದಗಿಸಲು ಸಂಘದ 11 ಮಂದಿ ತಮ್ಮ ಬಳಿ ಇದ್ದ ರು. 65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮಲ್ಲೇಶ್ವರದಲ್ಲಿರುವ ಧವನಂ ಜ್ಯುವೆಲರ್ಸ್ನಲ್ಲಿ ಮಾರಾಟ ಮಾಡಿದ್ದರು. ಚಿನ್ನ ಖರೀದಿಸಿದ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಅವರು, ಚಿನ್ನವನ್ನು ಪರೀಕ್ಷಿಸಬೇಕಿದೆ. ಕೆಲ ದಿನಗಳ ನಂತರ ಬಂದು ಹಣ ಪಡೆಯಿರಿ ಎಂದು ಸೂಚಿಸಿದ್ದರು.
ಕೆಲ ದಿನಗಳ ನಂತರ ಸಂಘದ ಸದಸ್ಯರು ಬಂದಾಗ ರು. 1.5 ಲಕ್ಷದಂತೆ 2 ಬಾರಿ ರು. 3 ಲಕ್ಷ ಬಡ್ಡಿ ಹಣ ನೀಡಿದ್ದಾರೆ. ಉಳಿದ ಹಣವನ್ನು ಮತ್ತೆ ಕೊಡುವುದಾಗಿ ತಿಳಿಸಿದ್ದರು. ಆದರೆ ಕೊಟ್ಟಿರಲಿಲ್ಲ. ಎಂದು ಗ್ರಾಹಕರು ಎಂದು ಹೇಳಿಕೊಂಡಿದ್ದವರು ಆರೋಪಿಸಿದ್ದರು. ಪ್ರಕರಣ ಸಂಬಂಧ ಅಂದು ಧವನಂ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವಿರುದ್ಧ 11 ಮಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


