ಪ. ಬಂಗಾಳ ರಾಜ್ಯಪಾಲ ನಾರಾಯಣನ್ ರಾಜಿನಾಮೆ

ಕೊಲ್ಕತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ.ನಾರಾಯಣನ್ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜಿನಾಮೆ ನೀಡಿದ್ದಾರೆ.
ಇನ್ನೂ ಒಂದು ವರ್ಷದ ಅಧಿಕಾರಾವಧಿ ಇರುವಂತೆಯೇ ನಾರಾಯಣನ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. 80 ವರ್ಷದ ನಾರಾಯಣನ್ ಅವರು ಈ ಹಿಂದೆ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ಪೈಕಿ ಸಿಬಿಐ ವಿಚಾರಣೆ ಎದುರಿಸಿದ್ದರು. ಪ್ರಕರಣ ಸಂಬಂಧ ನಾರಾಯಣನ್ ಅವರ ವಿರುದ್ಧ ಕೇಳಿಬಂದ ಆರೋಪಗಳ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದಲ್ಲಿ ನಾರಾಯಣನ್ ಅವರುನ್ನು ಸಿಬಿಐ ಅಧಿಕಾರಿಗಳು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ್ದು, ಇದೇ ವಿಚಾರವಾಗಿ ಈ ಹಿಂದೆ ಅವರ ಅಧಿಕೃತ ನಿವಾಸದಲ್ಲಿ ವಿಚಾರಣೆ ನಡೆಸಿದ್ದರು. ನಾರಾಯಣನ್ ಅವರು, ಕಾಪ್ಟರ್ ಹಗರಣದ ವೇಳೆ ಅಂದರೆ 2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರರಾಗಿದ್ದರು. ಅಲ್ಲದೆ ಕಾಪ್ಟರ್ ಖರೀದಿ ಸಂಬಂಧ 2005ರಲ್ಲಿ ನಡೆದಿದ್ದ ತಾಂತ್ರಿಕ ಸಭೆಯಲ್ಲಿ ನಾರಾಯಣನ್ ಅವರು ಪಾಲ್ಗೊಂಡಿದ್ದರು. ಕಾಪ್ಟರ್ ಹಗರಣ ಬೆಳಕಿಗೆ ಬಂದ ಬಳಿಕ ಒಪ್ಪಂದವನ್ನು ಕೇಂದ್ರ ಸರ್ಕಾರ ಅಮಾನತು ಮಾಡಿದ್ದು, ಈಗಾಗಲೇ ಈ ಸಂಬಂಧ ಇಟಲಿಯಲ್ಲಿ ಕೂಡ ಅಲ್ಲಿನ ಸರ್ಕಾರ ತನಿಖೆ ನಡೆಸುತ್ತಿದೆ.
ನಾರಾಯಣನ್ ರಾಜಿನಾಮೆ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರ..?
ಇದೇ ವೇಳೆ ನಾರಾಯಣನ್ ಅವರ ದಿಢೀರ್ ರಾಜಿನಾಮೆ ನಿರ್ಧಾರದ ಹಿಂದೆ ಕೇಂದ್ರದ ಎನ್ಡಿಎ ಸರ್ಕಾರದ ಒತ್ತಡವಿತ್ತೆ ಎಂಬ ಅನುಮಾನ ಮೂಡುತ್ತಿದೆ. ಈ ಹಿಂದೆ ನೂತನ ಕೇಂದ್ರ ಸರ್ಕಾರ ಯುಪಿಎ ಅವಧಿಯ ರಾಜ್ಯಪಾಲರನ್ನು ಬದಲಾಯಿಸಿಸಲು ಮುಂದಾಗಿತ್ತು. ಹೀಗಾಗಿ ರಾಜ್ಯಪಾಲರು ಸ್ವಯಂ ಪ್ರೇರಿತರಾಗಿ ರಾಜಿನಾಮೆ ನೀಡುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿತ್ತು ಎಂದು ಹೇಳಲಾಗುತ್ತಿದೆ. ಇದೇ ಹಿನ್ನಲೆಯಲ್ಲಿಯೇ ಈ ಹಿಂದೆ ನಾಗಾಲ್ಯಾಂಡ್ ರಾಜ್ಯಪಾಲ ಅಶ್ವಿನಿ ಕುಮಾರ್, ಉತ್ತರ ಪ್ರದೇಶ ರಾಜ್ಯಪಾಲ ಬಿ.ಎಲ್. ಜೋಷಿ ಮತ್ತು ರಾಜಸ್ತಾನದ ರಾಜ್ಯಪಾಲರಾಗಿದ್ದ ಮಾರ್ಗರೇಟ್ ಆಳ್ವ ಅವರು ರಾಜಿನಾಮೆ ನೀಡಿದ್ದರು.
ಇತ್ತೀಚೆಗೆ ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೂಡ ತಮ್ಮ ಅಧಿಕಾರಾವಧಿ ಕೊನೆಗೊಂಡ ಹಿನ್ನಲೆಯಲ್ಲಿ ಅವರು ದೆಹಲಿಗೆ ವಾಪಸಾಗಿದ್ದರು. ಹೀಗಾಗಿಯೇ ರಾಜಕೀಯ ವಲಯದಲ್ಲಿ ನಾರಾಯಣನ್ ಅವರ ದಿಢೀರ್ ರಾಜಿನಾಮೆ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


