ಪಿಎಸ್ಎಲ್ವಿ ಯಶಸ್ವಿ ಉಡಾವಣೆ: ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ಸಾಕ್ಷಿ

ಹೈದರಾಬಾದ್: ವಿವಿಧ 4 ರಾಷ್ಟ್ರಗಳ ಐದು ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ ನಿರ್ಮಿತ ಪಿಎಸ್ಎಲ್ವಿ ಸಿ-23 ಉಪಗ್ರಹ ವಾಹಕವನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ದೇಶದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಧಾನಿ ನರೇಂದ್ರ ಮೋದಿ ಅವರು, ವಿಜ್ಞಾನಿಗಳ ಸಾಧನೆಯನ್ನು ಹೊಗಳಿ ಅವರಿಗೆ ಶುಭಾಶಯ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಾಥ್ ನೀಡಿದರು.
ಇಂದು ಬೆಳಗ್ಗೆ ಸರಿಯಾಗಿ 9.52ಕ್ಕೆ ಪಿಎಸ್ಎಲ್ವಿ ಉಪಗ್ರಹ ವಾಹಕವನ್ನು ಉಡಾವಣೆ ಮಾಡಲಾಗಿದೆ. ಒಟ್ಟು ನಾಲ್ಕು ರಾಷ್ಟ್ರಗಳ 714 ಕೆಜಿ ತೂಕದ ಐದು ಉಪಗ್ರಹಗಳನ್ನು ಹೊತ್ತು ಸಾಗಿರುವ ಪಿಎಸ್ಎಲ್ವಿ ಸಿ3 ರಾಕೆಟ್ ನಿಗದಿತ ಪಥದಲ್ಲಿ ಸಾಗಿದೆ. ಆಕಾಶಕ್ಕೆ ಹಾರಿದ 20 ನಿಮಿಷಗಳಲ್ಲೇ ಪಿಎಸ್ಎಲ್ವಿ ವಾಹಕದಲ್ಲಿರುವ ಉಪಗ್ರಹಗಳು ಒಂದಾದ ಮೇಲೊಂದರಂತೆ ಕಳಚಿಕೊಂಡು ತಮ್ಮ ನಿಗದಿತ ಕಕ್ಷೆ ಸೇರಲಿವೆ.
ಫ್ರಾನ್ಸ್ (ಭೂ ಪರಿವೀಕ್ಷಣೆ ಮಾಡಲಿರುವ 'ಸ್ಪಾಟ್ 7' ಉಪಗ್ರಹ), ಜರ್ಮನಿ (14 ಕೆಜಿ ತೂಕದ 'ಐಸ್ಯಾಟ್'), ಕೆನಡಾ (ತಲಾ 15 ಕೆಜಿ ತೂಕದ 'ಕಾಂಗ್ಸ್ 4' ಮತ್ತು 'ಕಾಂಗ್ಸ್ 5') ಮತ್ತು ಸಿಂಗಾಪುರದ (7 ಕೆಜಿ ತೂಕದ 'ವೆಲಾಕ್ಸ್ 1') ಉಪಗ್ರಹಗಳನ್ನು ವಿಎಸ್ಎಲ್ವಿ ಹೊತ್ತು ಸಾಗಿದೆ. ಇದಕ್ಕೂ ಮೊದಲು ಉಡಾವಣೆ ಸಮಯವನ್ನು ಇಂದು ಬೆಳಗ್ಗೆ 9.49ಕ್ಕೆ ನಿಗದಿ ಪಡಿಸಲಾಗಿತ್ತು.
ಆದರೆ ಬಾಹ್ಯಾಕಾಶ ತ್ಯಾಜಗಳ ಘರ್ಷಣೆ ಸಂಭವಿಸುವ ಸಾಧ್ಯತೆ ಇರುವುದರಿಂದ, ಉಡಾವಣಾ ಸಮಯವನ್ನು 3 ನಿಮಿಷ ಮುಂದೂಡಲಾಗಿತ್ತು. ಪಿಎಸ್ಎಲ್ವಿ ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯೇ ಆಂಧ್ರ ಪ್ರದೇಶಕ್ಕೆ ಬಂದಿಳಿದಿದ್ದರು.
ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ಇದೇ ವೇಳೆ ಪಿಎಸ್ಎಲ್ವಿ ಉಪಗ್ರಹ ಉಡಾವಣೆ ಯಶಸ್ವಿಯಾದ ಬಳಿಕ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಮೊದಲಿಗೆ ನಾನು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಅರ್ಪಿಸುತ್ತೇನೆ. ಜನರ ಜೀವನ ಮಟ್ಟ ಸುಧಾರಣೆಗೆ ತಂತ್ರಜ್ಞಾನದ ಸಮರ್ಥ ಬಳಕೆ ಅತ್ಯಾವಶ್ಯಕವಾಗಿದೆ. ಇಸ್ರೋದ ಈ ಮಹತ್ವದ ಉಡಾವಣೆಗೆ ಸಾಕ್ಷಿಯಾಗಲು ನನಗೆ ಅವಕಾಶ ನೀಡಿದ್ದಕ್ಕಾಗಿ ಬಾಹ್ಯಾಕಾಶ ಇಲಾಖೆಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವು ವೇಗ, ಉನ್ನತ ಮತ್ತು ಕೌಶಲ್ಯತೆಯುಳ್ಳದ್ದು ಎಂಬ ನನ್ನ ನಂಬಿಕೆಗೆ ಪ್ರಸ್ತುತ ಉಡಾವಣೆ ಒಂದು ಉದಾಹರಣೆಯಾಗಿದೆ' ಎಂದು ಹೇಳಿದರು.
ಅಲ್ಲದೆ 'ತಂತ್ರಜ್ಞಾನವೇ ಅಭಿವೃದ್ಧಿಯ ಕೇಂದ್ರ. ಅದು ದೇಶದ ಪ್ರತಿಯೊಬ್ಬ ನಾಗರೀಕನಿಗೂ ತಲುಪಬೇಕು. ನಮ್ಮ ರಾಷ್ಟ್ರೀಯ ಪ್ರಗತಿಗೆ ಇದೊಂದು ಮಹತ್ವದ ಸಾಧನವಾಗಲಿದೆ. ಇಸ್ರೋದ ಯುವ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ. ಉಪಗ್ರಹ ಉಡಾವಣೆಯ ವಾಣಿಜ್ಯ ಸೇವೆಗಳನ್ನು ಒದಗಿಸುವ ಜಗತ್ತಿನ ಕೆಲವೇ ದೇಶಗಳ ಪೈಕಿ ಭಾರತ ಕೂಡ ಒಂದು. ಇದನ್ನು ಇನ್ನುಷ್ಟು ಸಮರ್ಥವಾಗಿ ನಾವು ಬಳಸಿಕೊಳ್ಳಬೇಕಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


