ಮಲೇಷ್ಯಾ ವಿಮಾನ ನಾಪತ್ತೆ: ಪೈಲಟ್ನಿಂದಲೇ ವಿಮಾನ ಹೈಜಾಕ್?

ಕೌಲಲಾಂಪುರ: ಕಳೆದ ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ಏರ್ಲೈನ್ಸ್ ವಿಮಾನ ಪತನವಾಗಿರುವ ಸಾಧ್ಯತೆಯನ್ನು ಮಲೇಷ್ಯಾ ತನಿಖಾ ಅಧಿಕಾರಿಗಳು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಅಲ್ಲದೆ ಪೈಲಟ್ನಿಂದಲೇ ವಿಮಾನ ಹೈಜಾಕ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಮಲೇಷ್ಯಾ ಅಧಿಕಾರಿಗಳು ವಿಮಾನ ನಾಪತ್ತೆ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಿ ಇಂದು ವರದಿ ನೀಡಿದ್ದು, ವಿಮಾನ ಪತನವಾಗಿರುವ ಸಾಧ್ಯತೆ ಇಲ್ಲ. ಆದರೆ ಒಂದಕ್ಕಿಂತ ಹೆಚ್ಚು ಅನುಭವಿ ಪೈಲಟ್ಗಳಿಂದ ವಿಮಾನವನ್ನು ಹೈಜಾಕ್ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ವಿಮಾನ ಹೈಜಾಕ್ ಮಾಡಿದ ನಂತರ ವಿಮಾನದ ಸಂಪರ್ಕ ಸಾಧನವನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಒಂದು ವಾರದ ಬಳಿಕ ವಿಮಾನ ನಾಪತ್ತೆ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿದ ಮಲೇಷ್ಯಾ ಪ್ರಧಾನಿ ನಜಿಬ್ ರಜಾಕ್ ಅವರು, ವಿಮಾನ ಪತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಯಾರೋ ಉದ್ದೇಶ ಪೂರ್ವಕವಾಗಿ ವಿಮಾನದ ಸಂಪರ್ಕ ಸಾಧನವನ್ನು ಬಂದ್ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೆ ಕಜಕಿಸ್ತಾನ ಮತ್ತು ಉಜ್ಬೇಕಿಸ್ತಾನ್ ಗಡಿಯಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.
ಮಾರ್ಚ್ 8ರಂದು 239 ಪ್ರಯಾಣಿಕರನ್ನು ಹೊತ್ತ ಮಲೇಷ್ಯಾ ಏರ್ಲೈನ್ಸ್ಗೆ ಸೇರಿದ ವಿಮಾನ ಚೀನಾದ ಬೀಜಿಂಗ್ಗೆ ತೆರಳುತ್ತಿದ್ದ ವೇಳೆ ನಾಪತ್ತೆಯಾಗಿತ್ತು. ಅದು ಸಮುದ್ರದ ಮಧ್ಯೆ ಪತನಗೊಂಡು ಅದರಲ್ಲಿದ್ದ ಎಲ್ಲರೂ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೆ ಘಟನೆ ನಡೆದು ಒಂದು ವಾರ ಕಳೆದರೂ ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ. ಭಾರತ, ಅಮೆರಿಕ, ಚೀನಾ, ಸಿಂಗಾಪುರ ಹಾಗೂ ಮಲೇಷ್ಯಾ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳು ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ. ಆದರೂ ವಿಮಾನದ ಬಗ್ಗೆ ಒಂದೇ ಒಂದು ಸುಳಿವು ಕೂಡ ಲಭ್ಯವಾಗಿಲ್ಲ. ಇದೀಗ ವಿಮಾನ ಹೈಜಾಕ್ ಮಾಡಲಾಗಿದೆ ಎಂದು ಮಲೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


