ಈಗಿನ ಸುದ್ದಿ

ಮೋದಿ ಸತ್ಯತೆ ಬಗ್ಗೆ ವರದಿ ಮಾಡಲು ಮಾಧ್ಯಮಗಳಿಗೆ ಧೈರ್ಯವಿಲ್ಲವೇ?: ಕೇಜ್ರಿವಾಲ್

ಮೋದಿ ಸತ್ಯತೆ ಬಗ್ಗೆ ವರದಿ ಮಾಡಲು ಮಾಧ್ಯಮಗಳಿಗೆ ಧೈರ್ಯವಿಲ್ಲವೇ?: ಕೇಜ್ರಿವಾಲ್
Published On :

ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಸತ್ಯ ಕಥೆಯ ಬಗ್ಗೆ ಪ್ರಸಾರ ಮಾಡಲು ಮಾಧ್ಯಮಗಳಿಗೆ ಧೈರ್ಯವಿಲ್ಲವೇ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಪ್ರಶ್ನಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇಂದು ನಗರಕ್ಕೆ ಆಗಮಿಸಿದ್ದು, ರೋಡ್ ಶೋ ಮೂಲಕ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳದ ಗಂಗಾನಗರದವರೆಗೆ ಕಾರಿನಲ್ಲಿ ಆಗಮಿಸಿ, ಅಲ್ಲಿಂದ ತೆರೆದ ಜೇಪಿನಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಕೇಜ್ರಿವಾಲ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿಜಾಯಿತಿ ಬಗ್ಗೆ ಮಾದ್ಯಮಗಳು ಪ್ರಸಾರಮಾಡುತ್ತಿಲ್ಲ ಎಂದು ಆಪಾದಿಸಿದ್ದಾರೆ.

ದೇಶದ ಜನತೆಗೆ ಮೋದಿ ಸತ್ಯತೆ ಬಗ್ಗೆ ಪರಿಚಯಿಸಲು ಮಾದ್ಯಮಗಳಿಗೆ ಎದೆಗಾರಿಕೆ ಇಲ್ಲವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಮಾಧ್ಯಮಗಳು ಹಣಕ್ಕಾಗಿ ಬಿಜೆಪಿ ನಾಯಕ ಮೋದಿಗೆ ಮಾರಿಕೊಂಡಿವೆ ಎಂದು ನಿನ್ನೆ ಕೇಜ್ರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮೋದಿ ಪರವಾಗಿ ಪ್ರಚಾರ ಮಾಡಲು, ಅವರಿಂದ ಹಣ ಪಡೆದಿವೆ ಎಂದು ಆರೋಪಿಸಿದ್ದ ಕೇಜ್ರಿವಾಲ್, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಂಥವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಕಿಡಿಕಾರಿದ್ದರು.

ಇದರ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ಪರೋಕ್ಷವಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, ಮಾಧ್ಯಮಗಳಿಗೆ ಎದೆಗಾರಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೋದಿ ಪ್ರಚಾರದ ವೇಳೆ ಜನತೆಯನ್ನು ಮೋಸಗೊಳಿಸುತ್ತಾರೆ. ಇದನ್ನೇ ಜನತೆಯು ಹೇಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೇ ಮಾಧ್ಯಮಗಳು ಇದನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಕೇಜ್ರಿವಾಲ್ ವಿಷಾಧಿಸಿದ್ದಾರೆ.

ರೈತರ ಪಾಲಿಗೆ ಮೋದಿ ಸಂರಕ್ಷಕ ಎಂದು ಹೇಳಲಾಗುತ್ತಿದೆ. ಆದರೆ ಮೋದಿ ಸಂರಕ್ಷಕನ್ನಲ್ಲ, ಬಹುಶಃ ದೇಶದ ರೈತರು ಸುಳ್ಳು ಹೇಳಿರಬೇಕು. ಜಮೀನನ್ನು ಕಸೀದುಕೊಂಡಿರುವುದರಿಂದ ರೈತರಿಗೆ ಬೇರೆ ಮಾರ್ಗವಿಲ್ಲದೇ ಈ ರೀತಿ ಹೇಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಗುಜರಾತ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ಬಿತ್ತರಿಸಬೇಕು. ಗುಜರಾತ್‌ನ ನಿಜ ಸ್ಥಿತಿಯನ್ನು ಜನರಿಗೆ ಮಾಧ್ಯಮಗಳು ಪರಿಚಯಿಸಬೇಕು. ಮಾಧ್ಯಮಗಳು ನಮ್ಮ ಬಗ್ಗೆ ಕುಟುಕು ಕಾರ್ಯಾಚರಣೆ ಮಾಡಿದೆ ಆದರೆ, ಮೋದಿಯ ಬಗ್ಗೆ ಕುಟುಕು ಕಾರ್ಯಾಚರಣೆ ಮಾಡದೇ ಸುಮ್ಮನೇ ಏಕೆ ಕುಳಿತಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

ಮಧ್ಯಾಹ್ನ ಜಯನಗರ 4ನೇ ಹಂತದಿಂದ ಸೌತ್ ಎಂಡ್ ಸರ್ಕಲ್, ಡಿವಿಜಿ ರಸ್ತೆ ಮೂಲಕ ಗಾಂಧಿ ಬಜಾರ್, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮೈಸೂರು ವೃತ್ತದ ಮೂಲಕ ವಿಜಯನಗರ, ಬಳಿಕ ರಾಮಮಂದಿರ, ಶಿವನಹಳ್ಳಿ, ಮಂಜುನಾಥ್ ನಗರ ಮೂಲಕ ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ ಮೂಲಕ ನವರಂಗ್, ಕೆ.ಜಿ.ಜನರಲ್ ಆಸ್ಪತ್ರೆ, ಸಂಪಿಗೆ ರಸ್ತೆ ಮೂಲಕ ಮಲ್ಲೇಶ್ವರಂ 8ನೇ ಕ್ರಾಸ್ ತಲುಪಲಿದೆ. ಅಲ್ಲಿಂದ ಸಂಜೆ 7.30ಕ್ಕೆ ಸ್ಯಾಂಕಿಟ್ಯಾಂಕ್ ರಸ್ತೆ, ಕಾವೇರಿ ಜಂಕ್ಷನ್ ಮೂಲಕ ರಾಷ್ಟ್ರೀಯ ಸೈನಿಕ ಸ್ಮಾರಕ ತಲುಪಲಿದ್ದಾರೆ. ಅಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಕೇಜ್ರಿವಾಲ್ ಭಾಷಣ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.