ಫೇಲಾಗೋದ್ ತಪ್ಪಾ?

ಸಾಧನೆಯ ಪಯಣದಲ್ಲಿ ಪರೀಕ್ಷೆಗಳೆಂದರೆ ಬಹುತೇಕರು ಉದ್ಗರಿಸುವಂತೆ ಹರ್ಡಲ್ಸ್ ಅಥವಾ ಅಡೆತಡೆಗಳಲ್ಲ ಕೇವಲ ಬಾಗಿಲಷ್ಟೆ, ಆದ್ದರಿಂದ ಸಹಜವಾಗಿ ಅದನ್ನು ದಾಟಿ ಹೋಗಿ. ಅದರ ಮೂಲಕ ಹೋಗುವ ಕೆಲಸವನ್ನು ವಿದ್ಯಾರ್ಥಿಗಳೇ ಮಾಡಬೇಕು, ಯಾರೂ ಅವರ ಕೈ ಹಿಡಿದು ಮುನ್ನಡೆಸಲಾರರು.
'ಅವನನ್ನು ನೋಡಿ ಕಲಿ, ಕಳೆದ ಪರೀಕ್ಷೆಯಲ್ಲಿ ಅವನು 98 ಪರ್ಸೆಂಟ್ ಮಾರ್ಕ್ಸ್ ತಗೊಂಡಿದ್ದಾನೆ, ನೀನೂ ಇದೀಯಾ!'
ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಹೆತ್ತವರಿಂದ ಹೀಗೆ ಬೈಸಿಕೊಂಡವರೇ. ಈಗಂತೂ ಅವನಿಂದ ಅದನ್ನು ಕಲಿ, ಮತ್ತೊಬ್ಬರಿಂದ ಇನ್ನೊಂದೇನನ್ನೋ ಕಲಿ ಎಂಬ ಮಾತುಗಳು ಎಲ್ಕೆಜಿಯಿಂದಲೇ ಶುರುವಾಗಿಬಿಟ್ಟಿದೆ. ಯಾಕೆ ಹೀಗೆಂದು ಕೇಳಿದರೆ '3ಈಡಿಯಟ್ಸ್'ನ ವೀರೂ ಸಹಸ್ರಬುದ್ಧಿಯ ತರಹ ಕಾಂಪಿಟೀಷನ್ ಬಗ್ಗೆ ಲೆಕ್ಚರ್ ಕೊಡುತ್ತಾರೆ ಹೆತ್ತವರು. ಆದ್ದರಿಂದಲೇ ಈ 'ಕಲಿ'ಯುಗದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮೂಟೆ ಹೊತ್ತಂತೆ ಮಣಭಾರದ ಬ್ಯಾಗುಗಳನ್ನು ಹೊರುವುದಲ್ಲದೆ ಇತರರನ್ನು ನೋಡಿ ಕಲಿಯುವ ಜಿದ್ದಿಗೆ ಬಿದ್ದಿದ್ದಾರೆ. ಮಕ್ಕಳ ಈ ತಾಪತ್ರಯಗಳನ್ನೆಲ್ಲಾ ನೋಡಿಯೇ ಅನ್ನಿಸುತ್ತೆ ಸರ್ಕಾರ ತನ್ನ ಸರ್ವ ಶಿಕ್ಷಾ ಅಭಿಯಾನಕ್ಕೆ 'ನೋಡಿ ಕಲಿ' ಎಂದು ಹೆಸರಿಡದೇ 'ನಲಿ ಕಲಿ' ಎಂಬ ಹೆಸರನ್ನಿಟ್ಟಿರುವುದು, ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ ಹೆಸರು. ಸರಕಾರಿ ಶಾಲೆಗಳ ಗೋಡೆಗಳ ಮೇಲೆ ಬೃಹದಾಕಾರದ ಪೆನ್ಸಿಲ್ ಒಂದರ ಮೇಲೆ ಸವಾರಿ ಮಾಡುತ್ತಿರುವ ಹಸನ್ಮುಖ ಹುಡುಗ, ಹುಡುಗಿಯ ಚಿತ್ರ, ಪಕ್ಕದಲ್ಲಿ ನಲಿ ಕಲಿ ಎಂಬ ಬರಹ, ನೋಡಿದರೆ ಮನಸ್ಸಿಗೆ ಎಷ್ಟು ಖುಷಿಯಾಗುತ್ತೆ. ಮಕ್ಕಳು ನಲಿಯುತ್ತಾ ಕಲಿಯಬೇಕು, ಅದುವೇ ಪಾಠ. ಒಟ್ಟಿನಲ್ಲಿ ಹೇಳುವುದಾದರೆ ಈಗಿನ ಮಕ್ಕಳು ಮಕ್ಕಳಾಗಿ ಬೆಳೆಯುತ್ತಿಲ್ಲ. ಆಟ ಆಡಿಕೊಳ್ಳುವ ವಯಸ್ಸಿನಲ್ಲಿ ದೊಡ್ಡವರೆನಿಸಿಕೊಂಡವರು ಮಕ್ಕಳ ಕಿವಿಯಲ್ಲಿ ವಯಸ್ಸಿಗೆ ಮೀರಿದ ಸಾಧನೆಯ ಪಾಠ ಹೇಳುತ್ತಿದ್ದಾರೆ. ಆ ಮೂಲಕ ಬಾಲ್ಯವನ್ನು ಮಕ್ಕಳಿಂದ ಕಸಿದುಕೊಳ್ಳುವ ಕೆಲಸವಾಗುತ್ತಿದೆ. ಈಗಿನ ಮಕ್ಕಳಿಗೆ ಸಮಾಜದಲ್ಲಿ ನಾಲ್ಕು ಜನರ ಜೊತೆ ಬೆರೆತು ಗೊತ್ತಿಲ್ಲ, ಕಷ್ಟವೆಂದರೇನು ಎಂಬುದರ ಅನುಭವವಿಲ್ಲ, ಸಂಬಂಧಗಳ ಅರಿವಿಲ್ಲ, ಅಪ್ಪ ಅಮ್ಮನೊಂದಿಗೆ ನಾಲ್ಕು ಗೋಡೆಗಳ ನಡುವೆ ಅವರು ಜೀವಿಸುತ್ತಿದ್ದಾರೆ.
ಮಕ್ಕಳ ಭವಿಷ್ಯದಲ್ಲಿ ಹೆತ್ತವರ ಪಾತ್ರ ನಿಚ್ಚಳ. 'ನಾವೇನೇ ಮಾಡಿದರೂ.. ಎಲ್ಲಾ ನಮ್ಮ ಮಕ್ಕಳ ಒಳ್ಳೆಯದಕ್ಕಾಗಿಯೇ' ಅನ್ನುವ ನೆಪದಲ್ಲಿ ಮಕ್ಕಳ ಭವಿಷ್ಯವನ್ನು ತಾವೇ ಖುದ್ದು ರೂಪಿಸುವುದು ಎಷ್ಟರ ಮಟ್ಟಿಗೆ ಸರಿ. ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವುದರಲ್ಲಿ ನೆರವಾದರೆ ಸಾಕಲ್ಲವೇ. ಅದು ಬಿಟ್ಟು ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಮುತುವರ್ಜಿ ವಹಿಸಿಕೊಂಡು ಅವರ ಆಟ ಪಾಠಗಳನ್ನು ನಿಯಂತ್ರಿಸಿ ಒತ್ತಡ ಹಾಕುವುದು ತರವಲ್ಲ. ಮಕ್ಕಳಿಗೆ ಪರೀಕ್ಷೆ ಇದ್ದರಂತೂ ಮುಗಿದೇ ಹೋಯಿತು, ನಿಜವಾದ ಪರೀಕ್ಷೆ ಮನೆಮಂದಿಗೆಲ್ಲ. ಮನೆಯಲ್ಲಿ ಯಾರೂ ಮಾತನಾಡುವ ಹಾಗಿಲ್ಲ, ಟಿವಿ ಹಾಕುವ ಹಾಗಿಲ್ಲ, ಮನರಂಜನೆಯೆಲ್ಲ ಕಟ್, ಹೀಗೆಲ್ಲಾ ರೂಲ್ಸುಗಳು.
ಇಂಗ್ಲೀಷಿನಲ್ಲಿ ಒಂದು ಮಾತಿದೆ "Danger is very real, but fear is choice'. ಅಂದರೆ, ಅಪಾಯವಾಗುವುದನ್ನು ತಪ್ಪಿಸಲಾಗದೆ ಇರಬಹುದು, ಆದರೆ ಅದಕ್ಕಾಗಿ ಪಡುವ ಭಯ ನಿಮ್ಮ ಆಯ್ಕೆ. ಬೇಕಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದು, ಬೇಡದಿದ್ದರೆ ಬೇಡ. ನೀವು ಭಯ ಪಟ್ಟ ಮಾತ್ರಕ್ಕೆ ಅಪಾಯವೇನೂ ಕಳೆಯುವುದಿಲ್ಲವಲ್ಲ, ಮತ್ತೇಕೆ ಭಯ! ಪರೀಕ್ಷೆಗಳ ಬಗ್ಗೆಯಂತೂ ಭಯ ಬೇಡವೇ ಬೇಡ. ಭಯದಿಂದ ಅನಾಹುತವೇ ಹೆಚ್ಚು, ಲಾಭವೇನೂ ಇಲ್ಲ. ಭಯಪಟ್ಟು ಪರೀಕ್ಷೆಯನ್ನು ಪೆಡಂಭೂತವನ್ನಾಗಿಸಬೇಡಿ. ಸಮಾಧಾನ ಚಿತ್ತದಲ್ಲಿ ಯೋಚಿಸಿ, ಯೋಜಿಸಿದರೆ ಎಂತಹ ಸಮಸ್ಯೆಗಳಿಗೂ ಪರಿಹಾರ ಸಿಕ್ಕೇ ಸಿಗುತ್ತದೆ. ಇಷ್ಟಕ್ಕೂ ಮಕ್ಕಳಲ್ಲಿ ಪರೀಕ್ಷೆಗಳ ಬಗೆಗಿನ ಭಯ ಹುಟ್ಟುವುದಕ್ಕೆ ಮುಖ್ಯಕಾರಣ ಅವುಗಳಿಗೆ ಕೊಡುವ ಪ್ರಾಮುಖ್ಯತೆಯೇ ಆಗಿದೆ.
ಒಮ್ಮೆ ಕುಳಿತು ನಿಧಾನವಾಗಿ ಆವಲೋಕಿಸಿ; ಪರೀಕ್ಷೆಗಳಲ್ಲಿ ರ್ಯಾಂಕುಗಳನ್ನು ಪಡೆದವರೆಲ್ಲ ಆಕಾಶಕ್ಕೇನು ಏಣಿ ಹಾಕಿಲ್ಲ, ಅವರೂ ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಐವತ್ತರಿಂದ ಎಪ್ಪತ್ತು ಸಾವಿರ ದುಡಿಯುತ್ತಿದ್ದಾರೆ, ಶೈಕ್ಷಣಿಕವಾಗಿ ಸಾಧಾರಣ ವಿದ್ಯಾರ್ಥಿ ಎನಿಸಿಕೊಂಡವನೂ ಅದೇ ಕಂಪನಿಗೆ ಸೇರಿ ಅವರಷ್ಟೆ ದುಡಿಯುತ್ತಿದ್ದಾನೆ. ಇದು ರ್ಯಾಂಕ್ ಪಡೆಯದವರ ಪರವಾಗಿ ಮಾಡುತ್ತಿರುವ ಸಮರ್ಥನೆಯಲ್ಲ, ವಾದವಲ್ಲ. ನಮ್ಮ ಕಾಳಜಿ ವಿದ್ಯಾರ್ಜನೆಗಿಂತ ಜ್ಞಾನಾರ್ಜನೆಗೆ. ಇಂದು ತಂದೆ ತಾಯಿಯರ ಗಮನವೆಲ್ಲ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಕಡೆಗೆ, ಯಾರೂ ಮಕ್ಕಳನ್ನು ಜ್ಞಾನವಂತರನ್ನಾಗಿಸುತ್ತಿಲ್ಲ. ವಿದ್ಯೆ, ವೃತ್ತಿಗಾಗಿ. ಜ್ಞಾನ, ಬದುಕಿಗಾಗಿ. ಜೀವನ ತುಂಬಾ ದೊಡ್ಡದು. ಸಾಧನೆಯ ಪಯಣದಲ್ಲಿ ಪರೀಕ್ಷೆಗಳೆಂದರೆ ಬಹುತೇಕರು ಉದ್ಗರಿಸುವಂತೆ ಹರ್ಡಲ್ಸ್ ಅಥವಾ ಅಡೆತಡೆಗಳಲ್ಲ, ಕೇವಲ ಬಾಗಿಲಷ್ಟೆ, ಆದ್ದರಿಂದ ಸಹಜವಾಗಿ ಅದನ್ನು ದಾಟಿ ಹೋಗಿ. ಅದರ ಮೂಲಕ ಹೋಗುವ ಕೆಲಸವನ್ನು ವಿದ್ಯಾರ್ಥಿಗಳೇ ಮಾಡಬೇಕು, ಯಾರೂ ಅವರ ಕೈ ಹಿಡಿದು ಮುನ್ನಡೆಸಲಾರರು. ಕೆಲವು ದಶಕಗಳ ಹಿಂದೆ ಜಗತ್ತಿನಲ್ಲೇ ಅತಿ ಹೆಚ್ಚು ಐ್ಕ ಇದ್ದ ಗಿನ್ನೆಸ್ ರೆಕಾರ್ಡ್ ಹೊಂದಿದ್ದಾತ, ಕಿಮ್ ಅಂಗ್ ಯಾಂಗ್. ನಾಲ್ಕು ವರ್ಷ ವಯಸ್ಸಿನಲ್ಲಿಯೆ ದೊಡ್ಡ ದೊಡ್ಡ ಗಣಿತ ವಿದ್ವಾಂಸರು ಬಿಡಿಸಲಿಕ್ಕಾಗದ ಲೆಕ್ಕಗಳನ್ನು ನಿರಾಯಾಸವಾಗಿ ಬಿಡಿಸುತ್ತಿದ್ದ. 8 ವರ್ಷದವನಾಗಿದ್ದಾಗ ಅಮೆರಿಕದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆ 'ನಾಸಾ' ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತದೆ, ಹತ್ತು ಹಲವು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ನಂತರ ಆತ ಅಮೆರಿಕದ ವೈಭೋಗದ ಜೀವನ ತೊರೆದು ತನ್ನ ತಾಯ್ನಾಡು ಕೊರಿಯಾದಲ್ಲಿ ಕಾಲೇಜೊಂದರ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ನೊಬೆಲ್ ಪ್ರಶಸ್ತಿ ಗೆಲ್ಲುವ ವಿಜ್ಞಾನಿಗಳ ಸರಾಸರಿ ಐ್ಕ 145-154, ಸಾಮಾನ್ಯ ಜನರ ಐ್ಕ 90-109 ಇರುತ್ತದೆ. ಅದ್ವಿತೀಯ 200ರ ಮೇಲೆ ಐ್ಕ ಹೊಂದಿ, ನಾಸಾದಂತಹ ದೊಡ್ಡ ಸಂಸ್ಥೆಯ ಉನ್ನತ ಸ್ಥಾನ ಬಿಟ್ಟು ಮಾಮೂಲಿ ಕಾಲೇಜು ಉಪನ್ಯಾಸಕ ಹುದ್ದೆಯನ್ನು ಸ್ವೀಕರಿಸಿದ್ದಕ್ಕೆ ಜಗತ್ತಿನಾದ್ಯಂತ ಪತ್ರಿಕೆ ಮೀಡಿಯಾಗಳೆಲ್ಲ ಕಿಮ್ ಅಂಗ್ ಯಾಂಗ್ನನ್ನು 'ಫೇಲ್ಯೂರ್' ಎಂದು ಜರಿದವು. ಆಗ ಆತ ಹೇಳಿದ್ದಿಷ್ಟೇ 'ನಾನು ನಾಸಾದಲ್ಲಿದ್ದಾಗ ತುಂಬಾ ಒಂಟಿಯಾಗಿದ್ದೆ, ನನ್ನ ಬದುಕು ತೀರಾ ಯಾಂತ್ರಿಕವಾಗಿತ್ತು. ಪ್ರತಿ ದಿನ ಗಣಿತ ಸಮಸ್ಯೆಗಳನ್ನು ಬಿಡಿಸುವುದು, ಊಟ ನಿದ್ದೆ ಇವಿಷ್ಟೆ ನನ್ನ ಬದುಕಾಗಿತ್ತು. ಈಗ ನಾನು ಸಂತಸದಿಂದಿದ್ದೇನೆ. ನನ್ನ ಸಂತೋಷ ನನಗೆ ಫೇಲ್ಯೂರ್ ಆಗಲು ಹೇಗೆ ಸಾಧ್ಯ'. ಆತ ಹೇಳಿದ್ದರಲ್ಲಿ ಎಷ್ಟು ಅರ್ಥವಿದೆಯಲ್ಲವೆ? ಉನ್ನತ ಹುದ್ದೆಗೇರುವುದೇ ಬದುಕಲ್ಲ, ಹೆಚ್ಚು ಹೆಚ್ಚು ಹಣ ಸಂಪಾದಿಸುವುದೇ ಧ್ಯೇಯವಾಗಬೇಕಿಲ್ಲ. ಯಾವಾಗಲೂ ಮನಸ್ಸಿಗೆ ಖುಷಿ ಕೊಡುವುದನ್ನು ಮಾಡಬೇಕು, ಮಾಡಲು ಬಿಡಬೇಕು. ಅದು ಬಿಟ್ಟು ಹರಿಯುವ ನೀರನ್ನು ಹರಿಬಿಡದೆ ತಡೆಹಿಡಿದು ಅಣೆಕಟ್ಟು ಕಟ್ಟಿದರೆ ಒಂದಲ್ಲ ಒಂದು ದಿನ ಕಟ್ಟೆಯೊಡೆಯುವುದು, ಆಗ ಅದರ ಫಲವನ್ನು ನಾವೇ ಉಣ್ಣಬೇಕು.
ಪರೀಕ್ಷೆಗೆ ಮೊದಲಿನಿಂದಲೇ ತಯಾರಿ ನಡೆಸಿದ್ದರೆ ಅಭ್ಯಾಸದ ಸಮಯದಲ್ಲಿ ನಿರಾಳರಾಗಿ ಆತಂಕವಿಲ್ಲದೆ ಪುನರಾವರ್ತನೆ ಮುಂದುವರೆಸಬಹುದು, ಪರೀಕ್ಷೆಯ ಕೊನೆಯ ದಿನಗಳಲ್ಲಿ ಓದುವವರು ನೀವಾದರೂ ಚಿಂತೆ ಬಿಡಿ, ಒಂದು ಸರಿಯಾದ ಯೋಜನೆ ಹಾಕಿಕೊಂಡು ಅನುಸರಿಸಿ. ನಪಾಸಾಗುವ, ಇಲ್ಲವೆ ಕಡಿಮೆ ಅಂಕ ದೊರಕುವ ಭಯದ ನೆಗೆಟಿವ್ ಎನರ್ಜಿಯೊಂದಿಗೆ ಪರೀಕ್ಷೆಗೆ ತಯಾರಿ ನಡೆಸುವುದಕ್ಕಿಂತ ಧೈರ್ಯವಾಗಿ ಭಯವನ್ನು ಮೂಟೆ ಕಟ್ಟಿ ಸ್ವಲ್ಪವೇ ಓದಿದ್ದರೂ ಆತ್ಮವಿಶ್ವಾಸದಿಂದ ಪಾಸಿಟಿವ್ ಆಗಿ ತಯಾರಿ ಮುಂದುವರೆಸಿ.
ಮಕ್ಕಳಿಗೆ ಯಶಸ್ಸಿನ ಪಾಠವನ್ನು ಬೋಧಿಸುವ ಮುನ್ನ ಸೋಲಿನ ಭಯವನ್ನು ಮೆಟ್ಟಿ ನಿಲ್ಲಲು ಹೇಳಿಕೊಡಬೇಕು. ವಿದ್ಯುತ್ ಬಲ್ಬು ಕಂಡು ಹಿಡಿಯಲು ಥಾಮಸ್ ಆಲ್ವಾ ಎಡಿಸನ್ಗೆ ಸಾವಿರ ಯತ್ನಗಳು ಹಿಡಿದವಂತೆ. ಪ್ರತಿ ಸಲ ಸೋತಾಗಲೂ ಪ್ರಯೋಗದ ಖರ್ಚು, ಸಮಯ ಎಲ್ಲವನ್ನು ಆತನೇ ಭರಿಸಬೇಕಾಗಿದ್ದಿತು, ಆದರೂ ಧೃತಿಗೆಡದೆ ಆತ ತನ್ನ ಪ್ರಯತ್ನಗಳನ್ನು ಮುಂದುವರೆಸದಿದ್ದರೆ ಇಂದು ನಾವೆಲ್ಲಾ ಕತ್ತಲಲ್ಲೇ ಇರಬೇಕಾಗುತ್ತಿತ್ತೋ ಏನೋ! ಪತ್ರಕರ್ತನೊಬ್ಬ ಥಾಮಸ್ ಆಲ್ವಾ ಎಡಿಸನ್ರನ್ನು 999 ಪ್ರಯತ್ನಗಳ ಸೋಲಿನ ಕುರಿತು ಕೇಳಿದಾಗ ಎಡಿಸನ್ ಹೇಳಿದ ಮಾತು ಎಂಥವರಿಗೂ ಸ್ಫೂರ್ತಿಯಾಗುವಂಥದ್ದು. ಆತ ಹೇಳಿದ್ದು 'ನನಗೀಗ ವಿದ್ಯುತ್ ಬಲ್ಬ್ ತಯಾರಿಕೆಯಲ್ಲಿ ಎದುರಾಗಬಹುದಾದ 999 ತಪ್ಪುಗಳ ಬಗ್ಗೆ ತಿಳಿದಿದೆ, ಅದು ಒಂದು ಸರಿಯಾದ ವಿಧಾನಕ್ಕಿಂತ ಮಿಗಿಲಾದ ತಿಳಿವಳಿಕೆ. ಅದಕ್ಕೆ ಬೆಲೆ ಕಟ್ಟಲಾಗದು'. ಇಂತಿಪ್ಪ ಥಾಮಸ್ ಆಲ್ವಾ ಎಡಿಸನ್ ಮುಂದೆ ಸಾವಿರಕ್ಕೂ ಹೆಚ್ಚು ಸಂಶೋಧನೆಗಳನ್ನು ಮಾಡಿದರು.
ಈಗ ಹೇಳಿ ಸೋಲಿನ ಭಯವಿದ್ದಿದ್ದರೆ ಎಡಿಸನ್ಗೆ ಇಷ್ಟೊಂದು ಸಾಧನೆ ಮಾಡಲಾಗುತ್ತಿತ್ತೇ?ಟಿ
-ಡಾ. ಸಾಯಿಪ್ರಸಾದ್ ಟಿ. ಆರ್.
ಪೀಡಿಯಾಟ್ರಿಕ್ ಸರ್ಜನ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//43097 ಗೆ ಭೇಟಿನೀಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


