ಈಗಿನ ಸುದ್ದಿ

'ಕಾಸಿಗಾಗಿ ಸುದ್ದಿ' ಅಶೋಕ್ ಚವ್ಹಾಣ್ ಅರ್ಜಿ ವಜಾ

'ಕಾಸಿಗಾಗಿ ಸುದ್ದಿ' ಅಶೋಕ್ ಚವ್ಹಾಣ್ ಅರ್ಜಿ ವಜಾ
Published On :

ನವದೆಹಲಿ: 'ಕಾಸಿಗಾಗಿ ಸುದ್ದಿ' ಸಂಬಂಧ ಚುನಾವಣಾ ಆಯೋಗದ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ತಮ್ಮ ವಿರುದ್ಧದ 'ಕಾಸಿಗಾಗಿ ಸುದ್ದಿ' ಪ್ರಕರಣದ ತನಿಖೆಗೆ ತಡೆ ಕೋರಿ ಅಶೋಕ್ ಚವ್ಹಾಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸುರೀಂದರ್ ಸಿಂಗ್ ನಿಜ್ಜಾರ್ ಮತ್ತು ನ್ಯಾ. ಫಕ್ಕಿರ್ ಮೊಹ್ಮದ್ ಇಬ್ರಾಹಿಂ ಕಲಿಫುಲ್ಲಾ ಅವರನ್ನೊಳಗೊಂಡ ಸುಪ್ರೀಂ ಪೀಠ ವಜಾಗೊಳಿಸಿದೆ. ಅಲ್ಲದೆ 'ಕಾಸಿಗಾಗಿ ಸುದ್ದಿ' ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಈ ಹಿಂದೆ ದೆಹಲಿ ಹೈಕೋರ್ಟ್ ಸಹ ಚವ್ಹಾಣ್ ಅವರ ಅರ್ಜಿಯನ್ನು ವಜಾಗೊಳಿಸಿ, 'ಕಾಸಿಗಾಗಿ ಸುದ್ದಿ' ಆರೋಪದ ಬಗ್ಗೆ ಆಯೋಗ ತನಿಖೆ ನಡೆಸಬಹುದು ಎಂದು ಆದೇಶಿಸಿತ್ತು. ಚವ್ಹಾಣ್ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

ಚವ್ಹಾಣ್ ಅವರು 2009ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭೊಕಾರ್ ಕ್ಷೇತ್ರದಿಂದ ಜಯಗಳಿಸಿದ್ದರು. ಆದರೆ ಅವರ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಮಾಧವ್ ಕಿನ್ಹಾಳಕರ್ ಅವರು 'ಕಾಸಿಗಾಗಿ ಸುದ್ದಿ' ಸಂಬಂಧ ಚವ್ಹಾಣ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಮಹಾರಾಷ್ಟ್ರದ ಪ್ರಮುಖ ದಿನಪತ್ರಿಕೆಯೊಂದರಲ್ಲಿ 'ಅಶೋಕ್ ಪರ್ವ' ಎಂಬ ಪುರವಣಿ ಪ್ರಕಟವಾಗಿತ್ತು. ಇದು ಕಾಸಿಗಾಗಿ ಸುದ್ದಿಯಾಗಿದ್ದು, ಇದಕ್ಕೆ ಅಶೋಕ್ ಚವ್ಹಾಣ್ ಅವರು ಹಣ ನೀಡಿದ್ದಾರೆ ಎಂದು ಕಿನ್ಹಾಳಕರ್ ಆರೋಪಿಸಿದ್ದರು. ಆರೋಪದ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.