ಬೋಕೋ 'ಹರಾಮಿ'ಗೆ ವಿಶ್ವಾದ್ಯಂತ ಖಂಡನೆ

ನವದೆಹಲಿ: ಹೆಣ್ಣು ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುವ ಬೆದರಿಕೆ ಹಾಕಿರುವ ನೈಜಿರಿಯಾದ ನಿಷೇಧಿತ ಸಂಘಟನೆ 'ಬೋಕೋಹರಾಮ್' ವಿರುದ್ಧ ವಿಶ್ವಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕ್ಷುಲ್ಲಕ ಕಾರಣವೊಡ್ಡಿ ಬಲವಂತವಾಗಿ ನೂರಾರು ಹೆಣ್ಣುಮಕ್ಕಳನ್ನು ಅಪಹರಿಸಿರುವ ಬೋಕೋಹರಾಮ್ ಸಂಘಟನೆ ವಿರುದ್ಧ ಅಂತಾರಾಷ್ಟ್ರೀಯವಾಗಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ತಮ್ಮ ಮಕ್ಕಳನ್ನು ವಾಪಸ್ ಕರೆಕತರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪೋಷಕರ ಹೋರಾಟಕ್ಕೆ ಇದೀಗ ಅಂತಾರಾಷ್ಟ್ರೀಯ ಬೆಂಬಲ ದೊರೆತಿದೆ. ನೈಜಿರಿಯಾದ ನಿಷೇಧಿತ ಇಸ್ಲಾಮಿಕ್ ಉಗ್ರ ಸಂಘಟನೆ ಬೋಕೋ ಹರಾಮ್ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಧ್ವನಿಎತ್ತಿದೆ. ಸಮಾಜ ಸಂಘಟನೆಗಳು ಮಕ್ಕಳನ್ನು ಅಪಹರಿಸಿ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿರುವ ಬೋಕೋ ಹರಾಮ್ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿವೆ. ಅಲ್ಲದೆ ಅಪಹರಣಕ್ಕೀಡಾಗಿರುವ ನೂರಾರು ಮಕ್ಕಳನ್ನು ಅವರ ಪೋಷಕರಿಗೆ ಮರಳಿಸುವಂತೆ ಮನವಿ ಮಾಡಿವೆ.
ಈ ಹಿಂದೆ ಕ್ರಿಶ್ಚಿಯನ್ ಶಿಕ್ಷಣ ಪದ್ಧತಿಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದ ನೈಜಿರಿಯಾದ ಉಗ್ರ ಸಂಘಟನೆ ಬೋಕೋ ಹರಾಮ್, ಚಿಬೋಕ್ ಮತ್ತು ಬೋರ್ನೋ ರಾಜ್ಯಗಳ ಸ್ಥಳೀಯ ಗ್ರಾಮಗಳ ಮೇಲೆ ದಾಳಿ ನಡೆಸಿ ಸುಮಾರು 700 ಅಧಿಕ ಹೆಣ್ಣು ಮಕ್ಕಳನ್ನು ಅಪಹರಿಸಿತ್ತು. ಅಲ್ಲದೆ ಸಂಘಟನೆಯ ನಾಯಕ ಅಬೂಬಕರ್ ಶೇಖ್ ಮಾಧ್ಯಮಗಳೊಂದಿಗೆ ಮಾತನಾಡಿ, ಕ್ರಿಶ್ಚಿಯನ್ ಶಿಕ್ಷಣ ಪದ್ದತಿಯನ್ನು ಕೂಡಲೇ ಸರ್ಕಾರ ನಿಷೇಧಿಸುಬೇಕು. ಇಲ್ಲವಾದರೆ ಎಲ್ಲ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು.
ಈ ನಡುವೆ ಉಗ್ರರಿಂದ ತಪ್ಪಿಸಿಕೊಂಡ ಸುಮಾರು 250ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸ್ಥಳೀಯರ ನೆರವಿನಿಂದ ತಮ್ಮ ಪೋಷಕರನ್ನು ಸೇರಿಕೊಂಡವಾದರೂ, 350ಕ್ಕೂ ಅಧಿಕ ಮಕ್ಕಳು ಉಗ್ರರಿಂದ ಬಂಧನಕ್ಕೊಳಗಾಗಿದ್ದಾರೆ. ಇತ್ತ ತಮ್ಮ ಮಕ್ಕಳನ್ನು ವಾಪಸ್ ಕರೆಸುವಂತೆ ಆಗ್ರಹಿಸಿ ಪೋಷಕರು ನೈಜಿರಿಯಾ ಸರ್ಕಾರವನ್ನು ಆಗ್ರಹಿಸುತ್ತಿದ್ದರು.
ಪ್ರಕರಣವು ಬೆಳಕಿಗೆ ಬಂದರೂ ಏನೂ ಮಾಡಲಾಗದೆ ಅಸಹಾಯಕವಾಗಿದ್ದ ನೈಜಿರಿಯಾ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದ ಮೊರೆ ಹೋಗಿತ್ತು. ಇದೀಗ ಪೋಷಕರ ಆಕ್ರಂದನ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೇಳಿದ್ದು, ಅಮೆರಿಕ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳು ನೈಜಿರಿಯಾಗೆ ಬೆಂಬಲ ನೀಡಲು ಮುಂದಾಗಿವೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮ ಅವರು, 'ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಉಗ್ರರ ಕೃತ್ಯ ಖಂಡನೀಯ' ಎಂದು ಹೇಳಿದ್ದಾರೆ. ಅಲ್ಲದೆ ಬೋಕೋ ಹರಾಮ್ ವಿರುದ್ಧ ದ.ಆಫ್ರಿಕಾ, ಬ್ರಿಟನ್, ರಷ್ಯಾದೇಶದ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಜಿರಿಯಾ ಸರ್ಕಾರಕ್ಕೆ ತಾವು ಬೆಂಬಲ ನೀಡುವುದಾಗಿ, ಅಗತ್ಯ ಬಿದ್ದರೆ ಸೈನಿಕ ಬೆಂಬಲವನ್ನು ಕೂಡ ನೀಡುವುದಾಗಿ ಘೋಷಿಸಿವೆ.
ಈ ನಡುವೆ ಬೋಕೋ ಹರಾಮ್ ಉಗ್ರ ಸಂಘಟನೆಯ ವಿರುದ್ಧದ ಕಾರ್ಯಾಚರಣೆಗೆ ಅಮೆರಿಕ ಕಳೆದ ಶುಕ್ರವಾರವೇ ಚಾಲನೆ ನೀಡಿದೆ. ಶುಕ್ರವಾರ ನೈಜಿರಿಯಾಗೆ ಬಂದಿಳಿದಿರುವ ಅಮೆರಿಕದ ರಕ್ಷಣಾ ಅಧಿಕಾರಿಗಳು ಬೋಕೋ ಹರಾಮ್ ವಿರುದ್ಧದ ಕಾರ್ಯಾಚರಣೆಗೆ ಧುಮುಕಿದ್ದಾರೆ. ಇವರಿಗೆ ಬ್ರಿಟನ್ ದೇಶದ ಸೈನಿಕರು ಸಾಥ್ ನೀಡುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಈಗಾಗಲೇ ಓರ್ವ ಉಗ್ರ ನಾಯಕನನ್ನು ಬಂಧಿಸಿರುವ ಸೈನಿಕರು, ಸುಮಾರು 150ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


