ಮೋದಿ ಸರ್ಕಾರದಲ್ಲಿ ಸುಷ್ಮಾ, ಅಡ್ವಾಣಿಗೆ ಯಾವ ಪಾತ್ರ?

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯಲ್ಲಿನ ಆಂತರಿಕ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುವಂತೆ ಮಾಡಿದೆ.
ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯ ಹಿರಿಯ ನಾಯಕರ ನಿದ್ದೆಗೆಡಿಸಿದ್ದು, ಕಳೆದ 2 ದಿನದಿಂದ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರ ಮ್ಯಾರಥಾನ್ ಸಭೆಗಳು, ಒಂದು ವೇಳೆ ಎನ್ಡಿಎ ಅಧಿಕಾರಕ್ಕೆ ಬಂದರೆ ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದರ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ.
ನರೇಂದ್ರ ಮೋದಿ ನಾಯಕತ್ವವನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಪಕ್ಷದ ಹಿರಿಯ ನಾಯಕರಾದ ಸುಷ್ಮ ಸ್ವರಾಜ್ ಮತ್ತು ಎಲ್.ಕೆ.ಅಡ್ವಾಣಿ ಅವರು ಮೋದಿ ಸರ್ಕಾರದಲ್ಲಿ ಪಾಲ್ಗೊಳ್ಳುತ್ತಾರೆಯೇ..? ಪಾಲ್ಗೊಂಡರೂ ಯಾವ ಜವಾಬ್ದಾರಿ ನಿಭಾಯಿಸುತ್ತಾರೆ..? ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ಆಂತರಿಕ ಚರ್ಚೆಗಳು ತೀವ್ರಗೊಂಡಿದ್ದು, ನಿನ್ನೆಯಷ್ಟೇ ಪಕ್ಷದ ಮಾಜಿ ಅಧ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮುಂದಿನ ರಣತಂತ್ರಗಳ ಕುರಿತು ಚರ್ಚಿಸಿದ್ದಾರೆ. ಅಂತೆಯೇ ಇದಕ್ಕೂ ಮೊದಲು ಅಂದರೆ ಕಳೆದ ಸೋಮವಾರ 9ನೇ ಮತ್ತು ಕೊನೆಯ ಹಂತದ ಚುನಾವಣೆಯ ಮತದಾನದ ಬಳಿಕ ಇದೇ ನಿತಿನ್ ಗಡ್ಕರಿ ಅವರು ಗುಜರಾತ್ನ ಗಾಂಧಿನಗರಕ್ಕೆ ಆಗಮಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ನರೇಂದ್ರ ಮೋದಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗುವುದನ್ನು ವಿರೋಧಿಸಿದ್ದ ಆಡ್ವಾಣಿ ಬಣ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಸರ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೇ ಊಹಿಸಲಾಗಿತ್ತು. ಅದರಲ್ಲಿಯೂ ಸುಷ್ಮಾ ಸ್ವರಾಜ್ ಮತ್ತು ಎಲ್.ಅಡ್ವಾಣಿ ಅವರು, ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ ಪಕ್ಷದ ತೀರ್ಮಾನವನ್ನು ಬಹಿರಂಗವಾಗಿಯೇ ಖಂಡಿಸಿದ್ದರು. ಬಿಜೆಪಿ ಪಕ್ಷ ಪ್ರಧಾನಿ ಅಭ್ಯರ್ಥಿ ಆಯ್ಕೆಗಾಗಿ ಸೇರಲಾಗಿದ್ದ ಸಭೆಯಿಂದ ಅಡ್ವಾಣಿ ಅವರು ಅರ್ಧದರಲ್ಲಿಯೇ ಎದ್ದುಹೋಗುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಇನ್ನು ಸುಷ್ಮಾ ಸ್ವರಾಜ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕ ಸಭೆಯೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಹೀಗಾಗಿ ಈ ಇಬ್ಬರು ನಾಯಕರು ನರೇಂದ್ರ ಮೋದಿ ಸರ್ಕಾರದಲ್ಲಿ ಶತಾಯಗತಾಯ ಪಾಲ್ಗೊಳ್ಳುವುದಿಲ್ಲ ಎಂದು ರಾಜಕೀಯ ಪಂಡಿತರ ಲೆಕ್ಕಚಾರ ಹಾಕಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ವಿರೋಧ ಪಕ್ಷಗಳ ಟೀಕೆಯಿಂದ ತಪ್ಪಿಸಿಕೊಳ್ಳಲು ಮೋದಿ ಸಂಪುಟದಲ್ಲಿ ಸುಷ್ಮಾ ಮತ್ತು ಆಡ್ವಾಣಿ ಅವರನ್ನು ಸೇರಿಸಿಕೊಳ್ಳುವ ಚಿಂತನೆಯಲ್ಲಿ ಬಿಜೆಪಿ ತೊಡಗಿದೆ.
ಇದಕ್ಕಾಗಿ ಬಿಜೆಪಿ ಪಕ್ಷದ ತ್ರಿವಳಿ ನಾಯಕರಾದ ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮತ್ತು ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಈ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ವಿದೇಶಾಂಗ ಖಾತೆಯ ಜವಾಬ್ದಾರಿ ನೀಡಿ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಈಗಾಗಲೇ ಎನ್ಡಿಎ ಮೈತ್ರಿಕೂಟದ ಅಧ್ಯಕ್ಷರಾಗಿರುವ ಎಲ್.ಕೆ.ಅಡ್ವಾಣಿ ಅವರಿಗೆ ಹೆಚ್ಚುವರಿಯಾಗಿ ಲೋಕಸಭೆಯ ಸ್ಪೀಕರ್ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದಕ್ಕಾಗಿಯೇ ಇಂದು ಬಿಜೆಪಿ ಪಕ್ಷದ 'ತ್ರಿವಳಿಗಳು' ಅಹ್ಮದಾಬಾದ್ಗೆ ತೆರೆಳಲಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಿತಿನ್ ಗಡ್ಕರಿ ಅವರು, 'ಅಡ್ವಾಣಿ ಅವರು ಪಕ್ಷ ಸಂಸ್ಥಾಪಕ ಹಿರಿಯ ಮುಖಂಡರು. ಅವರನ್ನು ಹೊರತುಪಡಿಸಿ ಬಿಜೆಪಿ ಇಲ್ಲ. ಅಂತೆಯೇ ಸರ್ಕಾರದಲ್ಲಿ ಅಡ್ವಾಣಿ ಅವರ ಪಾತ್ರದ ಕುರಿತು ಪಕ್ಷವೇ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ' ಎಂದು ಹೇಳಿದ್ದಾರೆ.
ಒಟ್ಟಾರೆ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನಾಯಕರ ನಿದ್ದೆ ಕಸಿದಿದ್ದು, ದೇಶದ ಪ್ರಜೆಗಳ ಗಮನವನ್ನು ಮುಂದಿನ ಸರ್ಕಾರದ ರೂಪುರೇಷೆಯತ್ತ ಕೇಂದ್ರೀಕರಿಸುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


