ಈಗಿನ ಸುದ್ದಿ

ವಾರಣಾಸಿಯಲ್ಲಿ 'ನಮೋ ನಮೋ'

ವಾರಣಾಸಿಯಲ್ಲಿ 'ನಮೋ ನಮೋ'
Published On :

ವಾರಣಾಸಿ: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ವಾರಣಾಸಿಗೆ ಆಗಮಿಸಿದ್ದು, ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಸಂಜೆ 5.30ಕ್ಕೆ ವಾರಣಾಸಿಗೆ ಆಗಮಿಸಿದ ನರೇಂದ್ರ ಮೋದಿ ಅವರು, ಮೊದಲು ಕಾಶಿವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿ ಪವಿತ್ರ ಆತ್ಮಲಿಂಗದ ದರ್ಶನ ಪಡೆದರು. ನಂತರ ಆತ್ಮಲಿಂಗಕ್ಕೆ ವಿಶೇಷ ರುದ್ರಾಭಿಷೇಕ ಪೂಜೆ ಸಲ್ಲಿಸಿದರು. ದೇಗುಲದ 11 ಪ್ರಧಾನ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿದರು. ಮೋದಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಗುಜರಾತ್ ಮಾಜಿ ಸಚಿವ ಅಮಿತ್ ಶಾ ಅವರು ಸಾಥ್ ನೀಡಿದರು.

ನಂತರ ದಶಾಶ್ವಮೇಧ ಘಾಟ್ ಗೆ ತೆರಳಿದ ನರೇಂದ್ರ ಮೋದಿ ಅವರು, ಪವಿತ್ರ ಗಂಗೆಗೆ ವಿಶೇಷ 'ಗಂಗಾ ಆರತಿ' ಪೂಜೆ ಸಲ್ಲಿಸಿದರು. ಬಳಿಕ ರೋಡ್ ಶೋದಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ನೆರೆದಿದ್ದ ಲಕ್ಷಾಂತರ ಜನರತ್ತ ಕೈ ಬೀಸಿ ತಮ್ಮ ಕೃತಜ್ಞತೆ ಸಲ್ಲಿಸಿದರು.

ನರೇಂದ್ರ ಮೋದಿ ಅವರ ಈ ರೋಡ್ ಶೋನಲ್ಲಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಂಡಿದ್ದು, ರೋಡ್ ಶೋ ನಡೆಯುವ ಬೀದಿ ಬೀದಿಗಳಲ್ಲಿ ಸಾವಿರಾರು ಜನರು ನೆರೆದು ಭಾವಿ ಪ್ರಧಾನಿಯನ್ನು ಕಣ್ತುಂಬಿಕೊಂಡರು. ರೋಡ್ ಶೋಗೆ ಉತ್ತರ ಪ್ರದೇಶ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದು, ಇದಕ್ಕೆ ಗುಜರಾತ್ ಪೊಲೀಸರ ಒಂದು ವಿಶೇಷ ತಂಡ ಕೂಡ ಸಾಥ್ ನೀಡಿತ್ತು. ರೋಡ್ ಶೋ ನಡೆಯುವ ದಾರಿಯುದ್ದಕ್ಕೂ ಶಸ್ತ್ರ ಸಜ್ಜಿತ ಭದ್ರತಾ ಪಡೆಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಎಸ್‌ಪಿಜಿ ಶ್ರೇಣಿಯ ಭಾರಿ ಭದ್ರತೆಯ ನಡುವೆ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದರು.

ಇದಕ್ಕೂ ಮೊದಲು ನವದೆಹಲಿಯಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜನಾಥ್ ಸಿಂಗ್ ಅವರು, ಮೇ20ರಂದು ಬಿಜೆಪಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮೊದಲು ಇದೇ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ್ದ ನರೇಂದ್ರ ಮೋದಿ ಅವರು ಗಂಗೆಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದರು. ಆದರೆ ಭದ್ರತಾ ಕಾರಣಗಳಿಂದಾಗಿ ಅಂದು ಚುನಾವಣಾ ಆಯೋಗ ಪೂಜೆಗೆ ಅನುಮತಿ ನೀಡಿರಲಿಲ್ಲ. ಇಂದು ಮತ್ತೆ ವಾರಣಾಸಿಗೆ ಆಗಮಿಸಿದ ನರೇಂದ್ರ ಮೋದಿ ಅವರು ಪವಿತ್ರಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.