ಬಿಹಾರ ಸಿಎಂ ನಿತೀಶ್ ಕುಮಾರ್ ರಾಜಿನಾಮೆ

ಪಾಟ್ನಾ: ಲೋಕಸಭಾ ಚುನಾವಣೆಯಲ್ಲಿ ಹಿನಾಯ ಸೋಲು ಕಂಡ ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಳಪೆ ಸಾಧನೆ ತೋರಿದ ಹಿನ್ನಲೆಯಲ್ಲಿ, ಸೋಲಿನ ನೈತಿಕ ಹೊಣೆಹೊತ್ತಿರುವ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಈಗಾಗಲೇ ನಿತೀಶ್ ಕುಮಾರ್ ತಮ್ಮ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು, ಪಾಟ್ನಾದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ರಾಜಿನಾಮೆಯನ್ನು ಘೋಷಿಸಿದ್ದಾರೆ.
'ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಳಪೆ ಮಾಡಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಂತೆಯೇ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ. ಹೀಗಾಗಿ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ಈಗಾಗಲೇ ನನ್ನ ರಾಜಿನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದೇನೆ ಅಲ್ಲದೆ ನನ್ನ ಸಚಿವ ಸಂಪುಟವನ್ನು ವಿಸರ್ಜಿಸಿದ್ದೇನೆ' ಎಂದು ನಿತೀಶ್ ಕುಮಾರ್ ಹೇಳಿದರು.
ಅಲ್ಲದೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ನಿತೀಶ್ ಕುಮಾರ್ ಅವರು, 'ನಾವು ಹೊಸದಾಗಿ ಜನಾದೇಶ ಪಡೆಯಲು ನಾವು ಬಯಸಿದ್ದೇವೆ. ಪ್ರಸಕ್ತ ಚುನಾವಣೆಯ ತೀರ್ಪು ನಮಗೆ ಸಮಾಧಾನ ತಂದಿಲ್ಲ. ಆದರೆ ಜನಾದೇಶಕ್ಕೆ ನಾವು ತಲೆಬಾಗಲೇ ಬೇಕಿದೆ. ಪರಸ್ಪರ ವೈಯುಕ್ತಿಕ ನಿಂದನೆಯಲ್ಲಿ ತೊಡಗಿ ನಾವು ಕಾಲಹರಣ ಮಾಡಿದ್ದು, ಚುನಾವಣೆಯಲ್ಲಿ ವಿಷಯಾಧರಿತ ಚರ್ಚೆಯಾಗಲಿಲ್ಲ. ಇದು ಚುನಾವಣಾ ಸೋಲಿಗೆ ಪ್ರಮುಖ ಕಾರಣ' ಎಂದು ನಿತೀಶ್ ಹೇಳಿದ್ದಾರೆ.
'ಆದರೆ ದೇಶದ ಜನತೆಗೆ ಬಿಜೆಪಿ ನೀಡಿರುವ ವಾಗ್ದಾನಗಳನ್ನು ಈಡೇರಿಸಲಿ. ದೇಶಕ್ಕೆ ಒಳ್ಳೆ ದಿನಗಳು ಬಂದಿವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆ ಅನುಭವ ಎಲ್ಲರಿಗೂ ಆಗಲಿ. ನನ್ನ ವಿರುದ್ಧ ವಿರೋಧಿಗಳು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ನನ್ನ ಜೀವನದಲ್ಲಿ ಇಂತಹ ಚುನಾವಣೆ ಕಂಡಿರಲಿಲ್ಲ' ಎಂದೂ ನಿತೀಶ್ ಹೇಳಿದರು.
'ಅಂತೆಯೇ ತಮ್ಮ ಪಕ್ಷಕ್ಕೆ ಬಹುಮತವಿದ್ದು, ನಮಗೆ ವಿಧಾನಸಭೆಯಲ್ಲಿ ನಮಗೆ ಸಂಖ್ಯಾ ಬಲವಿದೆ. ಪರ್ಯಾಯ ಸರ್ಕಾರಕ್ಕೆ ಮುಕ್ತ ಆಹ್ವಾನವಿದೆ. ನಾಳೆ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಮುಂದಿನ ತೀರ್ಮಾನವನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ' ನಿತೀಶ್ ಕುಮಾರ್ ತಿಳಿಸಿದರು.
ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಜೆಡಿಯು ಪಕ್ಷ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದೂ ಕಳಪೆ ಸಾಧನೆ ತೋರಿದ ಹಿನ್ನಲೆಯಲ್ಲಿ ಸೋಲಿನ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಹಿಂದೆ ಎನ್ಡಿಎ ಮೈತ್ರಿಕೂಟದ ಅಂಗ ಪಕ್ಷವಾಗಿದ್ದ ಜೆಡಿಯು, ಪಕ್ಷ ಕಳೆದ ವರ್ಷ ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿತ್ತು. ಗೋದ್ರಾ ಹತ್ಯಾಕಾಂಡವನ್ನು ಹಿನ್ನಲೆಯಾಗಿ ಬಳಸಿಕೊಂಡ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಎನ್ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದರು.
ಆಮೂಲಕ ಬಿಹಾರದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಯು ಅಲ್ಪಮತಕ್ಕೆ ಕುಸಿದಿತ್ತು. ಅನಿವಾರ್ಯವಾಗಿ ಜೆಡಿಯು ವಿಶ್ವಾಸಮತ ಯಾಚನೆ ಮಾಡಬೇಕಾಯಿತು. ಆಗ ಕಾಂಗ್ರೆಸ್ ಪಕ್ಷ ಜೆಡಿಯುಗೆ ಬೆಂಬಲ ನೀಡಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಳಪೆ ಸಾಧನೆ ತೋರಿರುವ ಹಿನ್ನಲೆಯಲ್ಲಿ ಇದೀಗ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೇ, ವಿಧಾನಸಭೆಯನ್ನು ವಿಸರ್ಜಿಸುವಂತೆ ಶಿಫಾರಸ್ಸು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


