ಈಗಿನ ಸುದ್ದಿ

ಐಪಿಎಲ್-7ರ ಮೇಲೂ ಬೆಟ್ಟಿಂಗ್ ಕಾರ್ಮೋಡ

ಐಪಿಎಲ್-7ರ ಮೇಲೂ ಬೆಟ್ಟಿಂಗ್ ಕಾರ್ಮೋಡ
Published On :

ನವದಹೆಲಿ: ಪ್ರಸಕ್ತ ಐಪಿಎಲ್-7ರ ಮೇಲೂ ಬುಕ್ಕಿಗಳ ಕಾಟ ಶುರುವಾಗಿದ್ದು, ಇಬ್ಬರು ಆಟಗಾರರನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದ ಸುದ್ದಿ ಬಹಿರಂಗಗೊಂಡಿದೆ.

ಐಪಿಎಲ್‌ಗೆ ಬೆಟ್ಟಿಂಗ್ ಭೂತ ಇನ್ನಿಲ್ಲದಂತೆ ಕಾಡುತ್ತಿದ್ದು, ಬುಕ್ಕಿಗಳ ಕಾಟ ಮಿತಿಮೀರಿದೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ ಸುನಿಲ್ ಗವಾಸ್ಕರ್ ಅವರು ಐಪಿಎಲ್ ಸಾರಥ್ಯ ವಹಿಸಿಕೊಂಡರೂ, ಬುಕ್ಕಿಗಳ ಕಾಟ ತಪ್ಪಿಲ್ಲ. ಅವರೇ ತಿಳಿಸಿರುವಂತೆ ಪ್ರಸಕ್ತ ಐಪಿಎಲ್ ಸೀಸನ್ 7ರಲ್ಲಿ ಪಾಲ್ಗೊಂಡಿರುವ ಇಬ್ಬರು ಆಟಗಾರರನ್ನು ಬುಕ್ಕಿಯೋರ್ವ ಸಂಪರ್ಕಿಸಿದ್ದಾನೆ ಎಂದು ತಿಳಿದುಬಂದಿದೆ.

ಹೀಗಾಗಿ ಸುನಿಲ್ ಗವಾಸ್ಕರ್ ಅವರು ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳಿಗೆ ಮತ್ತು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಬೆಟ್ಟಿಂಗ್ ವಿಚಾರ ಮಾಧ್ಯಮಗಳಿಗೆ ಲೀಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಜಿಲೆಂಡ್ ದೇಶದ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಅವರ ಪ್ರಕರಣದ ತನಿಖೆ ವೇಳೆ ಬುಕ್ಕಿಯೋರ್ವ ಇಬ್ಬರು ಆಟಗಾರರಿಗೆ ಹಣದ ಆಮಿಷ ತೋರಿದ ವಿಚಾರ ಬಹಿರಂಗಗೊಂಡಿದೆ. ಆದರೆ ಬುಕ್ಕಿ ಸಂಪರ್ಕಿಸಿದ್ದ ಆಟಗಾರರ ಬಗೆಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ವಿಚಾರ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಯಾವುದೇ ತಂಡದ ಆಟಗಾರನಿಂದ ಬಹಿರಂಗಗೊಂಡಿಲ್ಲ ಎಂದು ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ.

'ನಮ್ಮಲ್ಲಿ ಆಂತರಿಕ ತನಿಖಾಧಿಕಾರಿಗಳಿದ್ದು, ಈ ಸಮಯದಲ್ಲಿ ಎಲ್ಲ ತಂಡಗಳೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಅಕ್ರಮದ ಕುರಿತು ಯಾವುದೇ ವಿಚಾರವನ್ನು ಆಟಗಾರರು ಈ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು ಮತ್ತು ಅವರ ಮಾಹಿತಿಯನ್ನು ಅಧಿಕಾರಿಗಳು ಗೌಪ್ಯವಾಗಿಡುತ್ತಾರೆ. ಹೀಗಾಗಿ ಆಟಗಾರರು ಯಾವುದೇ ಸಂಕೋಚವಿಲ್ಲದೆ, ಮುಜುಗರವಿಲ್ಲದೆ ಮಾಹಿತಿ ಹಂಚಿಕೊಳ್ಳಬಹುದು' ಎಂದು ಹೇಳಿದರು.

ಒಟ್ಟಾರೆ ಕಳೆದ 6 ಸೀಸನ್‌ಗಳಿಂದಲೂ ಬುಕ್ಕಿಗಳ ಕಾಟದಿಂದಾಗಿ ಹೈರಾಣಾಗಿದ್ದ ಐಪಿಎಲ್ ಅನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಐಪಿಎಲ್ ಹಂಗಾಮಿ ಅಧ್ಯಕ್ಷರಾಗಿ ಗಾವಸ್ಕರ್ ಅವರು ನೇಮಕಗೊಂಡು ಅವರ ಅಧ್ಯಕ್ಷತೆಯಲ್ಲಿ ಐಪಿಎಲ್ ಸೀಸನ್ 7 ನಡೆಯುತ್ತಿದ್ದು, ಇದರ ಮೇಲೂ ಬುಕ್ಕಿಗಳ ಕೆಂಗಣ್ಣು ಬಿದ್ದಿರುವುದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.