ಮಗನನ್ನೇ ತರಾಟೆಗೆ ತೆಗೆದುಕೊಂಡ ಮುಲಾಯಂ

ಲಖನೌ: ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹೀನಾಯ ಸೋಲುಕಂಡಿರುವ ಹಿನ್ನಲೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮಗ ಅಖಿಲೇಶ್ ಯಾದವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಸ್ತುತ ಸಮಾಜವಾದಿ ಪಕ್ಷ ಕೇವಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಈ ಪೈಕಿ ತಮ್ಮನ್ನು ಹೊರತು ಪಡಿಸಿದರೆ ಕೇಂದ್ರ ಸರ್ಕಾರದ ವಿರುದ್ಧ ಧನಿ ಎತ್ತುವ ಸಮರ್ಥ ನಾಯಕರಾರೂ ಇಲ್ಲ ಎಂದು ಮುಲಾಯಂಸಿಂಗ್ ಹೇಳಿದ್ದಾರೆ. 'ಸಂಸದೆಯಾಗಿರುವ ತಮ್ಮ ಸೊಸೆ ಡಿಂಪಲ್ ಯಾದವ್ ಮಾತನಾಡುವುದಿಲ್ಲ. ಪಕ್ಷದ ಮುಖಂಡ ರಾಮಗೋಪಾಲ್ ಅವರ ಮಗ ಅಕ್ಷಯ್ ಯಾದವ್ ಕೂಡ ಮಾತನಾಡುವುದಿಲ್ಲ ಏಕೆಂದರೆ ಆತ ಇನ್ನೂ ಸಂಸತ್ಗೆ ಹೊಸಬ. ಪಕ್ಷದ ಮತ್ತೋರ್ವ ಮುಖಂಡರಾಗಿರುವ ಧಮೇಂದ್ರ ಯಾದವ್ ಮತ್ತು ನಾನು ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಬಲ್ಲೆವು ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.
ಅಲ್ಲದೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹಿನಾಯ ಸೋಲಿಗೆ ಪರೋಕ್ಷವಾಗಿ ಅಖಿಲೇಶ್ ಯಾದವ್ ಅವರನ್ನು ದೂಷಿಸಿರುವ ಮುಲಾಯಂ ಸಿಂಗ್ ಯಾದವ್, 'ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ್ದನ್ನು ಅಖಿಲೇಶ್ ಏಕೆ ಮಾಡಲಾಗಲಿಲ್ಲ' ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಇದೇ ಲೋಕಸಭಾ ಚುನಾವಣಾ ಸೋಲಿನ ಕುರಿತು ಕಳೆದ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುಲಾಯಂ ಸಿಂಗ್ ಯಾದವ್ ಅವರು, 'ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್ಪಿ 36 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅಖಿಲೇಶ್ ಮುಖ್ಯಮಂತ್ರಿಯಾಗಿರುವಾಗ ಅದು ಕೇವಲ 5 ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲು ಮುಲಾಯಂ ಸಿಂಗ್ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷರು ಕೂಡ ಆಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಸಂಪುಟದ 36 ಮಂದಿ ಸಚಿವರನ್ನು ವಜಾಗೊಳಿಸಿದ್ದರು.
ಒಟ್ಟಾರೆ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷವನ್ನು ಸೋಲಿಸಿ ಭಾರಿ ಬಹುಮತದೊಂದಿಗೆ ಉತ್ತರ ಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ದಿನಗಳೆದಂತೆ ತನ್ನ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ದುರಾಡಳಿತ, ಅಪರಾಧಗಳನ್ನು ತಡೆಯುವಲ್ಲಿನ ಸರ್ಕಾರದ ವೈಫಲ್ಯ, ಮುಜಾಫರ ನಗರ ಕೋಮುಗಲಭೆಯಂತಹ ಪ್ರಮುಖ ಘಟನಾವಳಿಗಳ ಕುರಿತು ಸರ್ಕಾರ ಕೈಗೊಂಡ ನಿರ್ಲಕ್ಷ್ಯ ಧೋರಣೆಯಿಂದಾಗಿ ಉತ್ತರ ಪ್ರದೇಶದ ಜನತೆ ಸಮಾಜವಾದಿ ಪಕ್ಷದಿಂದ ವಿಮುಖರಾಗುತ್ತಿದ್ದಾರೆ.
ಆದರೂ ಸಂಸತ್ತಿನಲ್ಲಿ ಧನಿ ಎತ್ತದ ಮಂದಿಯನ್ನು ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಆದಾವ ಪುರುಷಾರ್ಥಕ್ಕಾಗಿ ಸಂಸತ್ತಿಗೆ ಆಯ್ಕೆ ಮಾಡಿತು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


