ಈಗಿನ ಸುದ್ದಿ

ಅಂಬಿ ವಿರುದ್ಧ ಹೈಕಮಾಂಡ್‌ಗೆ ರಮ್ಯಾ ದೂರು..!

ಅಂಬಿ ವಿರುದ್ಧ ಹೈಕಮಾಂಡ್‌ಗೆ ರಮ್ಯಾ ದೂರು..!
Published On :

ನವದೆಹಲಿ: ವಸತಿ ಸಚಿವ ಮತ್ತು ನಟ ಅಂಬರೀಶ್ ವಿರುದ್ಧ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಟಿ ರಮ್ಯಾ ಅವರು ಜೆಡಿಎಸ್‌ನ ಸಿಎಸ್ ಪುಟ್ಟರಾಜು ಅವರ ವಿರುದ್ಧ ಸೋಲುಕಂಡಿದ್ದರು. ಇದೀಗ ತಮ್ಮ ಸೋಲಿನ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವರದಿ ನೀಡಿದ್ದಾರೆ. ಇದೇ ಮೇ 19ರಂದು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ರಮ್ಯಾ ಅವರು ತಮ್ಮ ಸೋಲಿಗೆ ಕಾರಣವಾದ ಅಂಶಗಳ ಕುರಿತು ವರದಿ ನೀಡಿದ್ದಾರೆ.

ರಮ್ಯಾ ಅವರು ನೀಡಿರುವ ವಿವರಣೆಯಲ್ಲಿ ಮಂಡ್ಯ ಕಾಂಗ್ರೆಸ್ ಘಟದ ಹಲವು ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಸತಿ ಸಚಿವ ನಟ ಅಂಬರೀಶ್ ಅವರ ಬೆಂಬಲಿಗರ ಕುರಿತು ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪ್ರತಿಷ್ಟೆಯೇ ತಮ್ಮ ಸೋಲಿಗೆ ಕಾರಣ ಎಂದು ದೂರಿದ್ದಾರೆ.

ಈ ಇಬ್ಬರು ನಾಯಕರ ಪ್ರತಿಷ್ಟೆಯಿಂದಾಗಿ ಪ್ರಚಾರದ ವೇಳೆ ಅನಗತ್ಯವಾಗಿ ಗೊಂದಲ ಸೃಷ್ಟಿಯಾಗಿತ್ತು. ಬೆಂಬಲಿಗರು ಗೊಂದಲ ಸೃಷ್ಟಿಯಲ್ಲಿಯೇ ನಿರತರಾಗಿದ್ದರು. ನನ್ನನ್ನು ಸೋಲಿಸಲು ಪದೇ ಪದೇ ಗೊಂದಲ ಸೃಷ್ಟಿ ಮಾಡಿದ್ದರು. ಅಲ್ಲದೆ ನಾಯಕರನ್ನು ಒಗ್ಗೂಡಿಸುವಲ್ಲಿ ಸಚಿವ ಅಂಬರೀಶ್ ಅವರು ವಿಫಲರಾಗಿದ್ದೇ ತಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ರಮ್ಯಾ ಹೇಳಿದ್ದಾರೆ.

ಅಲ್ಲದೆ ತಮ್ಮ ಸೋಲಿನ ಕುರಿತು ಹೈಕಮಾಂಡ್ ಗೆ ದೂರು ನೀಡಿರುವ ರಮ್ಯಾ ಅವರು, ತಮ್ಮ ದೂರಿನಲ್ಲಿ ಮಂಡ್ಯ ಕಾಂಗ್ರೆಸ್ ಘಟಕದ ವಿವಿಧ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಪ್ರಮುಖವಾಗಿ ರಮ್ಯಾ ಅವರು ಸಚಿವ ಅಂಬರೀಷ್ ಬೆಂಬಲಿಗರ ಹೆಸರನ್ನು ಉಲ್ಲೇಖಿಸಿದ್ದು, ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು, ನಗರಸಭಾ ಹಾಲಿ ಸದಸ್ಯ ಸಿದ್ಧರಾಜು, ಎಂ.ಡಿ.ರಮೇಶ್ ರಾಜು, ವಿವೇಕಾನಂದ, ಮಾಜಿ ಎಂ.ಎಲ್.ಸಿ ಮಧು ಮಾದೇಗೌಡ ಮತ್ತು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ತಮ್ಮ ಸೋಲಿನ ಕುರಿತು ತನಿಖೆ ನಡೆಸುವಂತೆಯೂ ರಾಹುಲ್ ಗಾಂಧಿ ಅವರನ್ನು ರಮ್ಯಾ ಅವರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಎಐಸಿಸಿ ವಿಶೇಷ ತನಿಖಾ ತಂಡವನ್ನು ಮಂಡ್ಯಕ್ಕೆ ಕಳುಹಿಸಿ ಸೋಲಿನ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಮ್ಯಾ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ಒಟ್ಟಾರೆ ತಮ್ಮ ಸೋಲಿನಿಂದಾಗಿ ತೀವ್ರ ಅಸಮಾಧಾನಕ್ಕೊಳಗಾಗಿರುವ ರಮ್ಯಾ ಅವರು ಇತ್ತೀಚೆಗಷ್ಟೇ ಮಂಡ್ಯದಲ್ಲಿದ್ದ ನಿವಾಸವನ್ನು ಖಾಲಿ ಮಾಡುವ ಮೂಲಕ ತಮ್ಮ ಕೋಪವನ್ನು ಪರೋಕ್ಷವಾಗಿ ಹೊರಹಾಕಿದ್ದರು. ಇದೀಗ ಸಚಿವ ಅಂಬರೀಶ್ ವಿರುದ್ಧ ದೂರು ಸಲ್ಲಿಸುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.