ಮಾಯಾ ಲೋಕ

ತಾಯಿಯ ಮಡಿಲಲ್ಲಿ ಏಳನೇ ಆತ್ಮಕಥೆ
ಅಮೆರಿಕನ್ ಲೇಖಕಿ, ಕವಯತ್ರಿ ಮಾಯಾ ಏಂಜೆಲೋ ಅವರ ಜೀವನದ ಬಗ್ಗೆ ಎಲ್ಲಾ ತಿಳಿದುಕೊಂಡಾಗಿದೆ ಎಂದು ನೀವು ಭಾವಿಸಿದ್ದರೆ, ಒಂದು ನಿಮಿಷ ತಾಳಿ. 2002ರಲ್ಲಿ ಹೊರಬಂದ ಆಕೆಯ ಆರನೆಯ ಆತ್ಮಕಥೆ 'ಎ ಸಾಂಗ್ ಫ್ಲಂಗ್ ಅಪ್ ಟು ಹೆವನ್' ಕೊನೆಯದಿರಬಹುದೆಂದುಕೊಂಡಿದ್ದರೆ ನಾವು ಈ ಮಹಾನ್ ಲೇಖಕಿಯನ್ನು ಸರಿಯಾಗಿ ಗ್ರಹಿಸಿಲ್ಲವೆಂದೇ ಅರ್ಥ. ಆಕೆ ಎಷ್ಟು ವಿಸ್ತಾರವಾದ ಮತ್ತು ಅಸಾಮಾನ್ಯವಾದ ಜೀವನ ನಡೆಸಿದ್ದಾರೆಂದರೆ ಆರು ಆತ್ಮಚರಿತ್ರೆಗಳಲ್ಲಿ ಬರೆದರೂ ಹೇಳಿ ಮುಗಿಸಲಾಗದಿರುವುದು ಇನ್ನೂ ಏನೋ ಇದೇ ಎಂಬುದು ನಮಗರಿವಾದಾಗ. ಇದಕ್ಕೆ ಸಾಕ್ಷಿಯಾಗಿ ಹೊರಬಂದಿರುವುದು ಆಕೆಯ ಏಳನೆಯ ಆತ್ಮಚರಿತ್ರೆ 'ಮಾಮ್ ಅಂಡ್ ಮಿ ಅಂಡ್ ಮಾಮ್' (2013). ಈ ಹೊಸ ಕೃತಿ ಮಾಯಾಳ ಸಂಬಂಧ ಆಕೆಯ ತಾಯಿ ವಿವಿಯನ್ ಬಾಕ್ಸ್ಟರ್ ಜೊತೆ ಹೇಗಿತ್ತು ಎಂಬುದನ್ನು ಓದುಗರಿಗೆ ಪರಿಚಯ ಮಾಡಿಕೊಡುತ್ತದೆ.
ಮಾಯಾ ಕೇವಲ ಮೂರು ವರ್ಷದವಳಾಗಿದ್ದಾಗ ಆಕೆಯ ತಾಯಿ ವಿವಿಯನ್ ಆಕೆಯನ್ನು ಅಜ್ಜಿಯ ಮನೆಗೆ ಕಳುಹಿಸಿಬಿಡುತ್ತಾಳೆ. ಅದರ ಪರಿಣಾಮ, ನಂತರ ತಾಯಿಯೊಂದಿಗಿನ ಮಿಲನವನ್ನು ಇಲ್ಲಿ ವಿವರಿಸಲಾಗಿದೆ. ತಾಯಿಯ ಮೇಲಿನ ಬೇಸರ, ಕೋಪ, ಹೇಗೆ ಪ್ರೇಮಕ್ಕೆ, ವಿಶ್ವಾಸಕ್ಕೆ ಬದಲಾಯಿತು ಎನ್ನುವುದೇ ಇಲ್ಲಿನ ಪ್ರಮುಖ ಅಂಶ. ತನ್ನ ಪಾರಿವಾರಿಕ ಸಂಬಂಧಗಳು ಹೇಗೆ ತನ್ನನ್ನು ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಮಾರ್ಪಾಡು ಮಾಡಿದವೆಂಬುದನ್ನು ಮಾಯಾ ಸದಾ ನೆನೆಸಿಕೊಳ್ಳುವುದನ್ನು ಈ ಹಿಂದೆಯೂ ನೋಡಿದ್ದೇವೆ. 'ನಾನು ಮಾಯಾ ಏಂಜೆಲೋ... ಯಾರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಹಾಗೆ. ಏಕೆಂದರೆ ನನ್ನ ತಾಯಿ ನನ್ನನ್ನು ಪ್ರೀತಿಸುತ್ತಿದ್ದಳು, ನನ್ನ ಅಜ್ಜಿ ನನ್ನನ್ನು ಪ್ರೀತಿಸುತ್ತಿದ್ದಳು ಮತ್ತು ನನ್ನ ಅಣ್ಣ ನನ್ನನ್ನು ಪ್ರೀತಿಸುತ್ತಿದ್ದನು' ಎಂದು ಬರೆಯುವ ಮಾಯಾ, 'ಅವರೆಲ್ಲಾ ನನಗೆ ಸರಿಯೆನಿಸಿದ್ದನ್ನು ನಾನು ಯಾವುದೇ ಅಡೆತಡೆಯಿಲ್ಲದೆ ಮಾಡಬಹುದೆಂದು ಹೇಳುತ್ತಿದ್ದರು' ಎಂದು ಅವರ ಮೇಲೆ ತನ್ನ ಅಭಿಮಾನವನ್ನೂ, ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾರೆ.
ಮಾಯಾ ಕೌಟುಂಬಿಕ ಬಂಧಗಳ ಕೊಂಡಿಯನ್ನು ಮುಂದುವರೆಸಿಕೊಂಡು ಬಂದಿರುವುದು ಆಕೆಯ ಸಾಲುಗಳಲ್ಲೇ ಸ್ಪಷ್ಟವಾಗಿ ತಿಳಿಯುತ್ತದೆ. 'ಅತ್ಯಂತ ಧೃರ್ಯಶಾಲಿಯೂ, ಅತ್ಯಂತ ಉದಾರಶಾಲಿಯೂ ಆದ ನನ್ನ ಮಗ ಗೈ ಬೈಲಿ ಜಾನ್ಸನ್ಗೆ ಈ ಪುಸ್ತಕವನ್ನು ಅರ್ಪಿಸುತ್ತೇನೆ.'
ಮಾಯಾ ಬರೆದ ಈ ಆತ್ಮಕಥೆಯಲ್ಲಿ ಹಿಂಸೆ, ದುಃಖ ಮತ್ತು ನೋವು ತುಂಬಿ ತುಳುಕುತ್ತಿವೆ. ಆದರೆ ಎಲ್ಲದಕ್ಕೂ ಮುಖ್ಯವಾಗಿ ಪ್ರೀತಿಯ ಸಿಂಚನವಿದೆ. ತಾಯಿ ಮಗಳ ನಡುವಿನ ಬಂಧ, ಬಹು ನಿಧಾನವಾಗಿ ಬೆಳೆದ ನಂಬಿಕೆ, ಭರವಸೆ ಇದನ್ನು ಇತರ ಆತ್ಮಕಥೆಗಳಿಗಿಂತಲೂ ಭಿನ್ನ ಮಾಡಿವೆ. ಆದರೆ ಇಲ್ಲಿ ಬರುವ ಅನೇಕ ಘಟನೆಗಳು, ಸಾಲುಗಳು ಓದುಗರಿಗೆ ಆಕೆಯ ಹಳೆಯ ಆತ್ಮಕಥೆಗಳನ್ನು ನೆನಪಿಗೆ ತರದೇ ಇರುವುದಿಲ್ಲ.
ವಿವಿಯನ್ ಬಾಕ್ಸ್ಟರ್ಳ ಮಗಳಾಗಿ ತಾನು ನಡೆಸಿದ ಹೋರಾಟ ಮತ್ತು ಗೆಲವುಗಳ ಬಗ್ಗೆ ಮಾಯಾ ಇಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. ಆ ಪುಟ್ಟ ಗಾತ್ರದ ಹಿಂದಿದ್ದ ಒಂದು ಅದಮ್ಯ ಚೇತನ ಮಾಯಾಗೆ ತನ್ನ ಬಾಲ್ಯದಲ್ಲಿ ದೊರೆಯದೇ ಹೋಗಿದ್ದು ಎಂಥಾ ನೋವನ್ನು ನೀಡಿತ್ತು ಎಂಬುದು ಇಲ್ಲಿ ವ್ಯಕ್ತವಾಗಿದೆ. ವಿವಿಯನ್ಳ ಮದುವೆ ಮುರಿದು ಬಿದ್ದಾಗ ಮಾಯಾಗೆ ಕೇವಲ ಮೂರು ವರ್ಷ, ಆಕೆಯ ಅಣ್ಣ ಬೈಲಿಗೆ ಐದು ವರ್ಷ. ಪತಿ, ಪತ್ನಿ ಇಬ್ಬರಿಗೂ ಮಕ್ಕಳು ಬೇಡವಾಗಿ ಮಕ್ಕಳನ್ನು ವಿವಿಯನ್ ತನ್ನ ಮಾಜಿ ಪತಿಯ ತಾಯಿಯ ಮನೆಗೆ ಕಳುಹಿಸಿಬಿಡುತ್ತಾಳೆ. ಅರ್ಕಾನ್ಸಾಸ್ನ ಸ್ಟಾಂಪ್ಸ್ಗೆ ತೆರಳಿದ ಮೇಲೆ ಮಾಯಾ ಅನುಭವಿಸಿದ ಏಕಾಂತತೆ, ನೋವು, ಸಂಕಟ ಅಪಾರ. ಒಂದು ದಶಕದ ಬಳಿಕ ತಾಯಿಯ ಜೊತೆಗೆ ವಾಸಿಸಲು ಮರಳಿ ಹೋದಾಗ ಏನು ನಡೆಯಿತೆಂಬುದನ್ನು ಮೊದಲ ಬಾರಿಗೆ ಲೇಖಕಿ ಇಲ್ಲಿ ತೆರೆದಿಟ್ಟಿದ್ದಾರೆ.
ವಿವಿಯನ್ ಬಾಕ್ಸ್ಟರ್ಳ ಮದುವೆ
ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಮಿಸ್ಸೌರಿಯ ಸೇಂಟ್ ಲೂಯಿಸ್ನಲ್ಲಿ ಕಪ್ಪು ಮತ್ತು ಬಡವರಾಗಿ, ಅದರಲ್ಲೂ ಸ್ತ್ರೀಯಾಗಿ ಜನಿಸುವುದು ಹೇಳಿಕೊಳ್ಳುವಂಥಾ ಮಹಾನ್ ವಿಷಯಆಗಿರಲಿಲ್ಲ. 'ಆದರೂ, ಈ ಸಮಯದಲ್ಲಿ ವಿವಿಯನ್ ಬಾಕ್ಸ್ಟರ್ ಎಂಬ ಹುಡುಗಿ ಕಪ್ಪು ಮತ್ತು ಬಡ ಪೋಷಕರಿಗೆ ಜನಿಸಿದಳು. ನಂತರ ಬೆಳೆಯುತ್ತಾ ಸುಂದರಿಯಾದಳು' ಎಂದು ಮಾಯಾ ತನ್ನ ತಾಯಿಯ ಬಗ್ಗೆ ಬರೆಯುತ್ತಾಳೆ. 'ಚಕಿತಗೊಳಿಸುವ ಸೌಂದರ್ಯ ಪಡೆದ ನನ್ನ ತಾಯಿ, 1924ರಲ್ಲಿ ಮೊದಲ ವಿಶ್ವಸಮರದಿಂದ ಮರಳಿದ ಒಬ್ಬ ಸುಂದರ ಯೋಧನನ್ನು ಭೇಟಿಮಾಡಿದಳು. ಸಹೋದರರ ವಿರೋಧವನ್ನೆದುರಿಸಿ ಬೈಲಿ ಜಾನ್ಸನ್ ಎನ್ನುವ ಆ ಅಧಿಕಾರಿಯನ್ನು ವಿವಿಯನ್ ಪ್ರೀತಿಸಲು ಪ್ರಾರಂಭಿಸಿದಳು.' ದಕ್ಷಿಣದಿಂದ ಬಂದಿದ್ದ ಆತ ಅದೇ ತಾನೆ ಯುದ್ಧದಿಂದ ಮರಳಿದ್ದ. ವಿವಿಯನ್ ಪೋಷಕರಿಗೆ ಅವಳ ಪ್ರೀತಿ ಸರಿಬರಲಿಲ್ಲ. 'ದಕ್ಷಿಣದಿಂದ ಬಂದ ಒಬ್ಬ ನೀಗ್ರೋ, ಮೇಲಾಗಿ ವೃದ್ಯನೂ ಅಲ್ಲ, ವಕೀಲನೂ ಅಲ್ಲ, ಅಂಥಾ ಪುರುಷನನ್ನು ತಮ್ಮ ಮಗಳು ಮದುವೆಯಾಗಲುಬಯಸುತ್ತಿರುವುದು ಇರಿಸುಮುರಿಸುಮಾಡಿತು. ಆದರೂ ಇವೆಲ್ಲವನ್ನೂ ಎದುರಿಸಿ ಇಬ್ಬರೂ ಮದುವೆಯಾದರು.
ಅವರಿಗೆ ಇಬ್ಬರು ಮಕ್ಕಳು ಹುಟ್ಟಿದರು. ಆದರೆ ಅವರ ಮದುವೆ ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಅವರಿಬ್ಬರೂ ಪೆಟ್ರೋಲು ಮತ್ತು ಬೆಂಕಿಕಡ್ಡಿಯಿದ್ದ ಹಾಗೆ' ಎಂದು ಬರೆಯುವ ಮಾಯಾ 'ಇಬ್ಬರ ಸಂಬಂಧ ಹೇಗೆ ಮುರಿದುಕೊಳ್ಳುವುದು ಎನ್ನುವುದರ ಬಗ್ಗೆಯೂ ವಾದಿಸುತ್ತಿದ್ದರು' ಎಂದು ನಿಟ್ಟುಸಿರು ಬಿಡುತ್ತಾಳೆ.
ಮಾಯಾಳ ಮೊದಲ ಗುರು
ಮಾಯಾಳ ತಂದೆಯ ತಾಯಿ, ಅಂದರೆ ಅಜ್ಜಿ, ಅನ್ನಿ ಹೆಂಡರ್ಸನ್ ಅರ್ಕಾನ್ಸಾಸ್ನ ಸ್ಟಾಂಪ್ನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದ ಧಾರ್ಮಿಕ ಮಹಿಳೆ. ಮಾಯಾ ತನ್ನ ಬಹುತೇಕ ಬಾಲ್ಯವನ್ನು ಆಕೆಯ ಬಳಿಯಲ್ಲೇ ಕಳೆದಳು. 'ನಾನು ಆಕೆಯನ್ನು ಪ್ರೀತಿಸುತ್ತಿದ್ದೆ, ಆಕೆಯೂ ನನ್ನನ್ನು ಬಹುವಾಗಿ ಪ್ರೀತಿಸುತ್ತಿದ್ದಳು. ಆಕೆಯ ಪ್ರೀತಿಯ ಆಶ್ರಯದಲ್ಲಿ ನಾನು ಬಹಳ ಸುರಕ್ಷಿತವಾಗಿದ್ದೆ,' ಎಂದು ಅಜ್ಜಿಯ ಬಗ್ಗೆ ಅಭಿಮಾನದಿಂದ ಮಾಯಾ ಹೇಳುತ್ತಾಳೆ. 'ಆಕೆ ನನ್ನನ್ನು ಎಂದೂ ತಬ್ಬಿಕೊಳ್ಳುತ್ತಿರಲಿಲ್ಲ ಅಥವಾ ಚುಂಬಿಸುತ್ತಿರಲಿಲ್ಲ, ಆದರೂ ನನಗೆ ಗೊತ್ತು, ಅಜ್ಜಿ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ನನ್ನ ಬಗ್ಗೆ ಆಕೆಗೆ ಹೆಮ್ಮೆಯಿತ್ತು. ನಾನು ಮೂಕಿಯಂತೆ ಇದ್ದುದ್ದನ್ನು ಕಂಡು 'ನೀನು ಬಹಳ ನೊಂದಿದ್ದೀಯೆ' ಎಂದು ಮರಗುತ್ತಿರಲಿಲ್ಲ. ಬದಲಾಗಿ 'ನೀನು ಒಂದು ದಿನ ಶಿಕ್ಷಕಿಆಗಿತ್ತೀಯೆ ಮಗಳೆ... ಜಗತ್ತಿಗೇ ನೀನು ಪಾಠ ಹೇಳುತ್ತೀಯೆ' ಎಂದು ಆತ್ಮವಿಶ್ವಾಸ ತುಂಬುತ್ತಿದ್ದಳು. ವಿಜಯಿಯಾಗುವುದು ಹೇಗೆಂದು ಕಲಿಸಿದ ನನ್ನ ಮೊದಲ ಗುರು ಆಕೆ' ಎಂದು ಮಾಯಾ ಅಭಿಮಾನದಿಂದ ಬರೆಯುತ್ತಾಳೆ.
'ನನ್ನ ಅಣ್ಣ ಬೈಲಿ 14 ವರ್ಷದವನಿದ್ದಾಗ, ದಕ್ಷಿಣದಲ್ಲಿ ಕಪ್ಪು ಹುಡುಗರು ಎದುರಿಸುವ ಅಪಾಯಕಾರಿ ವಯಸ್ಸು ತಲುಪಿದ.' ಆ ಸಮಯದಲ್ಲಿ ಬಿಳಿಯ ವ್ಯಕ್ತಿ ಪಟ್ಟಣದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ರಸ್ತೆ ಮೇಲೆ ಯಾವುದೇ ನೀಗ್ರೋ ನಡೆಯುವ ಹಾಗಿರಲಿಲ್ಲ. ಬಿಳಿಯ ವ್ಯಕ್ತಿ ಕಂಡರೆ, ತಕ್ಷಣವೇ ಪಕ್ಕಕ್ಕೆ ಹೆಜ್ಜೆಯಿಟ್ಟು ಗಟಾರದಲ್ಲಿ ನಡೆದುಕೊಂಡು ಹೋಗಬೇಕಾಗಿತ್ತು. ಬೈಲಿ ಈ ಆದೇಶವನ್ನು ಮರುಮಾತನಾಡದೆ ಪಾಲಿಸುತ್ತಿದ್ದನಾದರೂ, ಕೆಲವೊಮ್ಮೆ ನಾಟಕೀಯವಾಗಿ ಕೈ ತೋರಿಸಿಕೊಂಡು ತಿರಸ್ಕಾರ ಭಾವನೆಯಿಂದ 'ಹೌದು ಸರ್, ನೀವೇ ಮುಖ್ಯಸ್ಥ, ನೀವೇ ಮುಖ್ಯಸ್ಥ' ಎಂದು ಜೋರಾಗಿ ಹೇಳುತ್ತಿದ್ದ. ಇದನ್ನು ಕಂಡ ಕೆಲವು ನೆರೆಹೊರೆಯವರು ಬೈಲಿ ಹೇಗೆ ಬಿಳಿ ಜನರ ಮುಂದೆ ವರ್ತಿಸುತ್ತಾನೆಂದು ಅಜ್ಜಿಗೆ ವರದಿ ಮಾಡಿದರು. 'ಜೂನಿಯರ್ (ಇದು ಆಕೆ ಅಣ್ಣನಿಗೆ ಇಟ್ಟಿದ್ದ ಅಡ್ಡ ಹೆಸರು) ಬಾ ಇಲ್ಲಿ. ಈ ಬಿಳಿ ಜನರನ್ನು ಕಂಡು ನೀನು ಹೀಗೆ ವಿನೋದ ಮಾಡಿದರೆ, ಅವರು ನಿನ್ನನ್ನು ಕೊಲ್ಲುತ್ತಾರೆ ಎಂದು ಅರಿವಿಲ್ಲವೇ?' ಎಂದು ಕೇಳಿದಳು. 'ಅಮ್ಮ, ಅವರು ರಸ್ತೆಯಲ್ಲಿ ಹೋಗುವಾಗ ನಾನು ಪಕ್ಕಕ್ಕೆ ಸರಿಯಬೇಕೆಂಬುದಲ್ಲವೇ ಅವರ ಅಪೇಕ್ಷೆ? ನಾನು ಅದನ್ನೇ ಮಾಡುತ್ತಿದ್ದೇನೆ' ಎಂದು ಉತ್ತರಿಸಿದ. 'ಜೂನಿಯರ್, ನನ್ನೆದುರಿಗೆ ಜಾಣತನ ತೋರಿಸಬೇಡ. ಈ ದಕ್ಷಿಣ ಭಾಗಕ್ಕೆ ಅಪಾಯವಾಗುವ ವಯಸ್ಸು ನಿನಗೆ ಬರುತ್ತದೆಂಬ ಆತಂಕ ನನಗಿತ್ತು, ಆದರೆ ಆ ಕಾಲ ಇಷ್ಟು ಬೇಗ ಬರುತ್ತದೆಂಬ ಕಲ್ಪನೆಯಿರಲಿಲ್ಲ. ಇರಲಿ, ನಿನ್ನ ತಾಯಿ-ತಂದೆಗೆ ನಿಮ್ಮನ್ನು ಕರೆದುಕೊಂಡು ಹೋಗುವಂತೆ ಪತ್ರ ಬರೆಯುತ್ತೇನೆ' ಎಂದು ಹೇಳಿ ಗದರಿಸಿದಳು.
'ಚಿತ್ರನಟಿಯಂಥಾ' ಚೆಲುವೆ
ಅದರಂತೆ, ಅಜ್ಜಿ ಮತ್ತು ಮಾಯಾ ಕ್ಯಾಲಿಫೋರ್ನಿಯಾಕ್ಕೆ ಮೊದಲು ಹೋಗುವುದೆಂದೂ, ನಂತರ ಕೆಲವು ದಿನಗಳಲ್ಲಿ ಬೈಲಿ ಹೋಗುವುದೆಂದು ನಿರ್ಧರಿಸಲಾಯಿತು. ರೈಲು ಕ್ಯಾಲಿಫೋರ್ನಿಯಾ ತಲುಪುವ ವೇಳೆಗೆ, 'ನಾನು ನನ್ನ ತಾಯಿಯನ್ನು ಭೇಟಿ ಮಾಡಬೇಕಾದ ವಿಷಯವನ್ನು ನೆನೆಸಿಕೊಂಡು ಬಹಳ ಹೆದರಿದ್ದೆ' ಎಂದು ಮಾಯಾ ಬರೆಯುತ್ತಾಳೆ. 'ರೈಲು ನಿಲ್ದಾಣ ತಲುಪಿದ ಮೇಲೆ ನನ್ನ ತಾಯಿ ಯಾರಿರಬಹುದೆಂದು ಆಲೋಚಿಸುತ್ತಿರುವಾಗಲೇ ಅಜ್ಜಿ ನನ್ನ ತಾಯಿಯನ್ನು ಕರೆದಳು. ಆಕೆಯ ಧ್ವನಿ ಹೋದ ಕಡೆಗೆ ನೋಡಿದರೆ ನನಗೆ ಅಚ್ಚರಿ. ಅಜ್ಜಿಗೆ ಕಣ್ಣು ಕಾಣಿಸದೆ ಬೇರೆ ಯಾರನ್ನೋ ನನ್ನ ತಾಯಿಯೆಂದು ತಿಳಿದಿರುವ ಹಾಗಿದೆ ಎಂದೆನಿಸಿತು. ಕೆಂಪು ತುಟಿಬಣ್ಣ ಹಚ್ಚಿದ್ದ ಸುಂದರಿಯೊಬ್ಬಳು ಹೈ ಹೀಲ್ಡ್ ಚಪ್ಪಲಿಗಳಲ್ಲಿ ನನ್ನ ಅಜ್ಜಿಯೆಡೆಗೆ ಓಡಿ ಬರುತ್ತಿದ್ದಳು'.
ಅಜ್ಜಿಯನ್ನು ಬಾಚಿ ತಬ್ಬಿಕೊಂಡ ಆ ಮಹಿಳೆ 'ನನ್ನ ಮಗು ಎಲ್ಲಿ?' ಎಂದು ಕೇಳಿದಳು. ಆಕೆಯ ಮುಂದೆ ತನ್ನ ಸೌಂದರ್ಯ ಏನೇನೂ ಅಲ್ಲವೆಂದು ಅನಿಸಿ 'ತಾನು ಆಕೆಯ ಮಗಳು ಹೌದೇ' ಎನ್ನುವ ಅನುಮಾನವೂ ಮಾಯಾಳಿಗೆ ಬರುತ್ತದೆ. 'ಚಲನಚಿತ್ರ ನಟಿಯಂತೆ ಸುಂದರಿಯಾಗಿದ್ದ ಆ ಮಹಿಳೆಗೆ ನನಗಿಂತಲೂ ಉತ್ತಮವಾಗಿ ಕಾಣುವ ಮಗಳು ಹುಟ್ಟಬೇಕಿತ್ತು,' ಎಂದು ಮಾಯಾ ಹೇಳಿಕೊಳ್ಳುತ್ತಾಳೆ.
'ಮಾಯಾ, ಮಾರ್ಗರೇಟ್, ನನ್ನ ಮಗು' ಎಂದು ಆಕೆ ನನ್ನನ್ನು ಬಾಚಿ ತಬ್ಬಿಕೊಂಡಳು. ಆಕೆಯ ಸುಗಂಧ ದ್ರವ್ಯ ನನ್ನನ್ನು ಆವರಿಸಿಕೊಂಡಿತು. 'ಓಹ್, ನೀನು ಬಹಳ ಸುಂದರವಾಗಿರುವೆ. ಎಂಥಾ ಎತ್ತರದ ನಿಲುವು? ನನ್ನನ್ನು ಮತ್ತು ನಿನ್ನ ಅಪ್ಪನನ್ನು ಹೋಲುವ ನಿನ್ನನ್ನು ನೋಡಲು ಎರಡು ಕಣ್ಣೂ ಸಾಲದು' ಎಂದಾಗ ಮಾಯಾಳಿಗೆ ಕಸಿವಿಸಿಯಾಗುತ್ತದೆ. ಅಜ್ಜಿ ಕೆಲವು ದಿನಗಳ ಕಾಲ ಕ್ಯಾಲಿಫೋರ್ನಿಯಾದಲ್ಲಿ ಉಳಿದುಕೊಳ್ಳುತ್ತಾಳೆ. ಎರಡು ವಾರಗಳ ಬಳಿಕ ವಿವಿಯನ್ ಮಗಳ ಜೊತೆ ಮಾತುಕತೆಗೆ ಕೂರುತ್ತಾಳೆ. 'ಮಾಯಾ, ನನಗೆ ಗೊತ್ತು. ನೀನು ಅಜ್ಜಿಯಷ್ಟು ನನ್ನನ್ನು ಇಷ್ಟಪಡುವುದಿಲ್ಲ. ಆದರೆ ನಾನು ನಿನ್ನ ತಾಯಿ. ನಿಮ್ಮ ತಲೆಯ ಮೇಲಿನ ಈ ಛಾವಣಿಗೆ ಪಾವತಿಸಲು ದುಡಿಯುತ್ತಿದ್ದೇನೆ. ನೀನು ಶಾಲೆಗೆ ಹೋದಾಗ ನಿನ್ನ ಶಿಕ್ಷಕಿ ಕಿರುನಗೆ ಬೀರಿದರೆ, ನೀನು ಕಿರುನಗೆ ನೀಡುವೆ ಅಲ್ಲವೇ? ನಿನ್ನ ಸಹಪಾಠಿಗಳು ನಕ್ಕರೆ, ಅವರು ಯಾರೆಂದು ಅರಿವಿಲ್ಲದಿದ್ದರೂ, ನೀನೂ ನಗುವೆ ಅಲ್ಲವೇ? ನಾನು ನಿನ್ನ ತಾಯಿ. ನನಗಾಗಿ ಬಲವಂತದಿಂದ ಆದರೂ ಸರಿ, ನಿನ್ನ ಮುಖದ ಮೇಲೆ ಒಂದು ಮುಗುಳ್ನಗೆ ಬರಲಾರದೆ? ಅಪರಿಚಿತರನ್ನು ಕಂಡಾಗ ಬರುವ ಆ ಕಿರುನಗೆಯನ್ನೇ ನನ್ನನ್ನು ಕಂಡಾಗಲೂ ಬರಿಸಿಕೋ, ನನಗೆ ಸಂತಸವಾಗುತ್ತದೆ. ನಿನಗೂ ಇದರಿಂದ ಸಂತಸವಾಗುತ್ತದೆಂದು ನಾನು ಭರವಸೆ ನೀಡುತ್ತೇನೆ' ಎಂದು ವಿವಿಯನ್ ಮಗಳಲ್ಲಿ ಕೋರುತ್ತಾಳೆ.
'ನನ್ನ ಕೆನ್ನೆ ಸವರಿ, 'ಅಮ್ಮನಿಗಾಗಿ ಒಮ್ಮೆ ನಗು. ನನಗಾಗಿ ಸ್ವಲ್ಪ ಉದಾರಿಯಾಗು,' ಎಂದು ಅವಳು ಹೇಳಿದಾಗ, ಮನಸ್ಸಿಲ್ಲದ ಮನಸ್ಸಿನಿಂದ ನಾನು ಮುಗುಳ್ನಕ್ಕೆ. ಅದನ್ನು ಕಂಡು ಅವಳಿಗೆ ಅಪರಿಮಿತ ಆನಂದಆಯಿತು' ಎಂದು ಮಾಯಾ ಹೇಳುವಾಗ ಓದುಗರ ಮನಸ್ಸು ಚುರ್ರೆನ್ನುತ್ತದೆ.
ಅಮ್ಮ ಅಲ್ಲ, 'ಲೇಡಿ'
ಅಜ್ಜಿಯನ್ನು 'ಅಮ್ಮ' ಎಂದು ಕರೆಯುತ್ತಿದ್ದ ಮಾಯಾ ತಾಯಿಯ ಮೇಲಿನ ಕೋಪದಿಂದ ಆಕೆಯನ್ನು 'ಅಮ್ಮ' ಎಂದು ಕರೆಯಲು ನಿರಾಕರಿಸಿ 'ಮೇಡಂ' ಎಂದು ಕರೆಯತೊಡಗುತ್ತಾಳೆ. ಇಷ್ಟರ ಬಳಿಕವೂ, ಮಾಯಾಳ ಮತ್ತು ವಿವಿಯನ್ಳ ನಡುವೆ ಸಂಬಂಧ ಹೇಳಿಕೊಳ್ಳುವಂಥಾದ್ದೇನೂ ಆಗಿರಲಿಲ್ಲ. ತಾಯಿಯ ಪ್ರಶ್ನೆಗಳಿಗೆ ಮೊಟಕಾಗಿ ಉತ್ತರಿಸುತ್ತಿದ್ದ ಮಾಯಾಳನ್ನು ಒಂದು ದಿನ ವಿವಿಯನ್ ಕರೆದು 'ಮಾಯಾ, ನಾನು ನಿನ್ನ ತಾಯಿ. ಇಷ್ಟು ವರ್ಷಗಳ ಕಾಲ ನಾನು ನಿನ್ನನ್ನು ದೂರವಿತ್ತಿರಬಹುದು, ಆದರೂ ನಾನು ನಿನ್ನ ತಾಯಿ. ಇದು ನಿನಗೆ ಗೊತ್ತು ಅಲ್ಲವೇ?' ಎಂದು ಕೇಳುತ್ತಾಳೆ. ನಾನು 'ಹೌದು, ಮೇಡಂ' ಎಂದು ಸಂಕ್ಷಿಪ್ತವಾಗಿ ಉತ್ತರಿಸಿದೆ. 'ನೀನು ನನ್ನನ್ನು ಮೇಡಂ ಎಂದು ಕರೆಯಬೇಡ, ನೀನು ಈಗ ಅರ್ಕಾನ್ಸಾಸ್ನಲ್ಲಿಲ್ಲ, ನನ್ನ ಜೊತೆ ಕ್ಯಾಲಿಫೋರ್ನಿಯಾದಲ್ಲಿದ್ದೀಯೆ'.
'ಇಲ್ಲ, ಮೇಡಂ, ಅದು ಹಾಗಲ್ಲ' ಎಂದು ಮಾಯಾ ಮಾರುತ್ತರ. 'ನೀನು ನನ್ನನ್ನು ಅಮ್ಮ ಎಂದು ಕರೆಯಲು ಬಯಸುವುದಿಲ್ಲವೆಂದು ನನಗೆ ಗೊತ್ತು. ನಿನಗೆ ಹೇಗೆ ಬೇಕೋ ಹಾಗೆ ಕರೆ. ಆದರೆ ಜೀವನ ಪೂರ್ತಿ ನನ್ನನ್ನು ಮೇಡಂ ಎಂದು ಕರೆಯಲು ಸಾಧ್ಯವಿಲ್ಲ' ಎಂದು ಆಕೆ ಹೇಳಿದಾಗ, ಮಾಯಾ ಕ್ಷಣ ಕಾಲವೂ ಆಲೋಚಿಸದೆ ಆಕೆಯನ್ನು 'ಲೇಡಿ' ಎಂದು ಕರೆಯುವುದಾಗಿ ಹೇಳುತ್ತಾಳೆ. ಅದನ್ನು ಕೇಳಿ ಅಚ್ಚರಿಗೊಂಡ ವಿವಿಯನ್ ಕಾರಣ ಕೇಳಿದಾಗ, ಮಾಯಾ 'ನೀನು ಬಹಳ ಸುಂದರವಾಗಿದ್ದೀಯೆ, ಲೇಡಿಯ ಹಾಗೆ' ಎಂದು ಹೇಳಿದಾಗ ಆ ತಾಯಿಯ ಮನಸಿಗೆ ಹೇಗಾಗಿರಬಹುದು ಅರಿವಿಲ್ಲ. ಆದರೆ ಅದಕ್ಕೆ ಮರುಮಾತನಾಡದೆ, 'ಸರಿ, ಇನ್ನೂ ಮುಂದೆ ನನ್ನನ್ನು ಎಲ್ಲರೂ 'ಲೇಡಿ' ಎಂದೇ ಕರೆಯಬೇಕೆಂದು ತಾಕೀತು ಮಾಡುತ್ತಾಳೆ. 'ನಾನು ಲೇಡಿ. ಸರಿ, ಆದರೂ ನಾನು ನಿನ್ನ ತಾಯಿ' ಎಂದೂ ಸ್ಪಷ್ಟಪಡಿಸುತ್ತಾಳೆ.
ಕ್ಯಾಲಿಫೋರ್ನಿಯಾಕ್ಕೆ ಬೈಲಿ ಬಂದ ಬಳಿಕ ವಿವಿಯನ್ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು, 'ಮಾಯಾ ನನ್ನನ್ನು ಅಮ್ಮ ಎಂದು ಕರೆಯಲು ಇಷ್ಟಪಡುತ್ತಿಲ್ಲ. ಕಾರಣ ನಾನು ಆಕೆಗೆ ಅಮ್ಮನ ಹಾಗೆ ಕಾಣುವುದಿಲ್ಲ, ಅವಳು ನನ್ನನ್ನು ಲೇಡಿ ಎಂದು ಕರೆಯಲು ಬಯಸುತ್ತಾಳೆ. ನನಗೂ ಅದು ಇಷ್ಟಆಗಿದೆ. ಜೂನಿಯರ್, ಇನ್ನು ಮುಂದೆ ನೀನೂ ನನ್ನನ್ನು ಲೇಡಿ ಎಂದು ಕರೆಯಬಹುದು. ವಾಸ್ತವವಾಗಿ, ಇನ್ನೂ ಮುಂದೆ ಜನರಿಗೆ ನನ್ನನ್ನು ನಾನು ಲೇಡಿ ಜಾಕ್ಸನ್ ಎಂದೇ ಪರಿಚಯ ಮಾಡಿಕೊಳ್ಳುತ್ತೇನೆ. ನೀವೆಲ್ಲಾ ನನ್ನನ್ನು ಲೇಡಿ ಎಂದು ಕರೆಯಲು ಹಿಂಜರಿಯಬೇಡಿ. ಎಲ್ಲರಿಗೂ ಹೇಗೆ ಬೇಕೋ ಹಾಗೆ ಕರೆಸಿಕೊಳ್ಳುವ ಸ್ವಾತಂತ್ರವಿದೆ' ಎಂದು ಹೇಳಿದಾಗ, ಬೈಲಿ 'ಹಾಗಾದರೆ ನನ್ನನ್ನು ಇನ್ನು ಮುಂದೆ ಯಾರೂ ಜೂನಿಯರ್ ಎಂದು ಕರೆಯಬೇಡಿ. ನನ್ನ ಹೆಸರು ಬೈಲಿ, ನನ್ನ ಹೆಸರು ಹಿಡಿದು ಕರೆಯಿರಿ' ಎಂಬ ಅಹವಾಲು ಮುಂದೊಡ್ಡುತ್ತಾನೆ. ಅದಕ್ಕೆ ವಿವಿಯನ್ ಸಮ್ಮತಿಸುತ್ತಾಳೆ.
ನಿರ್ಭಯ ಮಹಿಳೆ
ನಿಧಾನವಾಗಿ ಆಕೆಯ ಮೋಡಿ ಮಾಯಾಳ ಮೇಲಾಗತೊಡಗುತ್ತದೆ. 'ನನ್ನ ಮಗ ಎರಡು ತಿಂಗಳ ಮಗುವಾಗಿದ್ದಾಗ ನನಗೆ ಕೆಲಸ ಸಿಕ್ಕಿತು. 'ಅಮ್ಮ, ನಾನು ಮನೆಯಿಂದ ಹೋಗುತ್ತಿದ್ದೇನೆ' ಎಂದು ಹೇಳಿದೆ. ಅದಕ್ಕೆ ಆಕೆಯೂ ಒಪ್ಪಿದಳು. 'ಸರಿ, ನೀನು ನನ್ನ ಮನೆಯ ಬಾಗಿಲನ್ನು ದಾಟುವ ಮುನ್ನ ಒಂದು ವಿಷಯ ನೆನಪಿಟ್ಟುಕೊ... ನೀನು ಅಜ್ಜಿಯಿಂದ, ನನ್ನಿಂದ ಕಲಿತ ಒಳ್ಳೆಯ ವಿಷಯಗಳನ್ನು ಎಂದಿಗೂ ಗಾಳಿಗೆ ತೋರಬೇಡ... ಯಾವುದೇ ಕೆಲಸವಿರಲಿ, ಗೆಳೆಯರಿರಲಿ, ಸಂಬಂಧಗಳಿರಲಿ, ರೂಪಾಂತರ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಕೊ. ಯಾರೇ ಇರಲಿ ನಿನ್ನ ಮನಸ್ಸನ್ನು ಬದಲಾಯಿಸಲು ಅವಕಾಶ ಕೊಡಬೇಡ. ಎಲ್ಲದಕ್ಕೂ ಮುಖ್ಯವಾಗಿ ನೀನು ಯಾವಾಗ ಬೇಕಾದರೂ ಮರಳಿ ನಿನ್ನ ತಾಯಿಯ ಮನೆಗೆ ಬರಬಹುದು ಎನ್ನುವ ಸತ್ಯವನ್ನು ಮರೆಯಬೇಡ.'
ಅಲ್ಲಿಂದ ಹೊರಟ ಮೇಲೆ 'ನನ್ನ ವಾಕ್ಯಗಳು ನನ್ನ ಕಿವಿಯಲ್ಲಿ' ಪ್ರತಿಧ್ವನಿಸುತ್ತಿದ್ದವು. 'ಮೊದಲ ಬಾರಿಗೆ ನಾನು ಆಕೆಯನ್ನು ಲೇಡಿ ಎನ್ನುವ ಬದಲು ಅಮ್ಮ ಎಂದು ಕರೆದಿದ್ದೆ. ಆಕೆ ಅದನ್ನು ಗಮನಿಸಿರಬಹುದೆಂದು ನನಗೆ ಅರಿವಾಯಿತು. ಆದರೆ ಅದರ ಬಗ್ಗೆ ನಾವೆಂದೂ ಚರ್ಚೆ ಮಾಡಲಿಲ್ಲ. ವ್ಯಾಪಾರಿ ಹಡಗುಗಳು ಕೇಂದ್ರದಲ್ಲಿದ್ದ ಪ್ರಥಮ ನೀಗ್ರೊ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ವಿವಿಯನ್ ಕ್ಯಾಲಿಫೋರ್ನಿಯಾದ ಜೂಜಿನ ತಾಣಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ನಿರ್ಭಯ ಮತ್ತು ನಿಷ್ಠಾವಂತ ಮಹಿಳೆಆಗಿದ್ದ ಆಕೆಗೆ ತನ್ನ ಮಗಳ ಮೇಲೆ ಅಪಾರ ಪ್ರೀತಿಯಿತ್ತು. ಒಮ್ಮೆ ಮಾಯಾಳ ಗೆಳೆಯ ಆಕೆಯ ಮೇಲೆ ದಾಳಿ ಮಾಡಿದನೆಂದು ತಿಳಿದಾಗ, ವಿವಿಯನ್ ಮಗಳಿಗೆ ಬಂದೂಕು ನೀಡಿ ಆಕೆಯ ಆಕ್ರಮಣಕಾರ ಹೋಟೆಲ್ ಒಂದರಲ್ಲಿ ಕುಡಿಯುತ್ತಾ ಕುಳಿತಿರುವುದಾಗಿಯೂ, ಹೋಗಿ ಅವನನ್ನು ಕೊಂದು ಬರಬೇಕೆಂದೂ ಹೇಳಿಕಳುಹಿಸುತ್ತಾಳೆ. ಆದರೆ ಹೋಟೆಲ್ ತಲುಪಿದ ಮಾಯಾಗೆ ಕೋಪ ತಣ್ಣಗಾಗಿ ಅವನಿಗೆ ಏನೂ ಅಪಾಯ ಉಂಟುಮಾಡದೇ ಮನೆಗೆ ಮರಳಿದಾಗ, ವಿವಿಯನ್, 'ನೀನು ನನಗಿಂತಲೂ ಉತ್ತಮ ಮಹಿಳೆ. ನಾನೇನಾದರೂ ಆಗಿದ್ದರೆ ಅವನನ್ನು ನಡು ರಸ್ತೆಯಲ್ಲಿ ನಾಯಿಯನ್ನು ಕೊಲ್ಲುವಂತೆ ಕೊಲ್ಲುತ್ತಿದ್ದೆ,' ಎಂದು ಹೇಳುತ್ತಾಳೆ.
ವಿವಿಯನ್ ಜನರನ್ನು ಕಂಡು ಹೀಯಾಳಿಸಿ ನಗುತ್ತಿರಲಿಲ್ಲ. ಬಡ ಮತ್ತು ದುರ್ಬಲ ಜನರನ್ನು ಕಂಡರೆ ಆಕೆಯ ಹೃದಯ ಮರುಗುತ್ತಿತ್ತು. 'ಆಕೆಯ ಬಳಿ ಎಲ್ಲವೂ ಇತ್ತು, ಆಕೆ ಸುಂದರಿಯಾಗಿದ್ದಳು, ಆಕೆಯಲ್ಲಿ ಯೌವನವಿತ್ತು, ಹಣವಿತ್ತು. ಎಲ್ಲದಕ್ಕೂ ಮೇಲಾಗಿ ಆಕೆಯನ್ನು ಕಂಡರೆ ಜನ ಗೌರವಿಸುತ್ತಿದ್ದರು'.
ವಿವಿಯನ್ಳ ಸಾವು
ಹಲವು ವರ್ಷಗಳ ಬಳಿಕ ತಾಯಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದು ಹೆಚ್ಚೆಂದರೆ ಮೂರು ತಿಂಗಳ ಕಾಲ ಬದುಕಬಹುದೆಂದು ವೈದ್ಯರು ಅಂದಾಜಿಸುತ್ತಾರೆ. ಆಗ ಮಾಯಾಳಿಗೆ ವಿಶೇಷ ಅತಿಥಿ ಪ್ರಾಧ್ಯಾಪಕಿಯಾಗಿ ಮೂರು ವಾರಗಳ ಕಾಲ ಬಂದು ಹೋಗುವಂತೆ ಎಕ್ಸೆಟರ್ ವಿಶ್ವವಿದ್ಯಾಲಯ ಆಹ್ವಾನ ನೀಡುತ್ತದೆ. ತಾಯಿಯನ್ನು ಬಿಟ್ಟು ಹೋಗಲು ಮಾಯಾ ನಿರಾಕರಿಸಿದಾಗ, 'ಹೋಗಿ ಬಾ, ನಿನಗಾಗಿ ನಾನು ಕಾದಿರುತ್ತೇನೆ' ಎಂದು ವಿವಿಯನ್ ಪಿಸುಗುಟ್ಟುತ್ತಾಳೆ. ಮಾಯಾ ಮೂರು ವಾರಗಳ ನಂತರ ಮರಳಿದಾಗ ತಾಯಿ ಕೋಮಾದಲ್ಲಿರುತ್ತಾಳೆ.
ಮೂರನೆಯ ದಿನ ತಾಯಿಯ ಕೈಯನ್ನು ಹಿಡಿದುಕೊಂಡು, 'ಕೆಲವು ಜನರಿಗೆ ಈ ಲೋಕದಿಂದ ತೆರಳಲು ಅನುಮತಿ ಬೇಕಾಗುತ್ತದೆಂದು ಜನರು ಹೇಳುವುದನ್ನು ನಾನು ಸಾಕಷ್ಟು ಬಾರಿ ಕೇಳಿದ್ದೇನೆ. ನೀನು ಅಂಥಾ ಅನುಮತಿಗಾಗಿ ಕಾಯುತ್ತಿರುವೆಯೋ ಏನೋ ನನಗೆ ಗೊತ್ತಿಲ್ಲ, ಆದರೆ ನೀನು ಮಾಡಬೇಕಾದ ಎಲ್ಲಾ ಕಾರ್ಯಗಳನ್ನೂ ನೀನು ಇಲ್ಲಿ ಮಾಡಿ ಮುಗಿಸಿದ್ದೀಯೆ...'
'ನೀನು ಶ್ರಮಿಕಳು. ನಿನ್ನಿಂದ ಇಂದು ಬಿಳಿ, ಕಪ್ಪು, ಏಷ್ಯನ್ ಮತ್ತು ಲ್ಯಾಟಿನೋ ಮಹಿಳೆಯರು ಸ್ಯಾನ್ ಫ್ರಾನ್ಸಿಸ್ಕೋ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನೀನು ಹಡಗು ರಿಪೇರಿ ಮಾಡಿದೆ, ನರ್ಸ್ ಆಗಿದ್ದೆ, ರಿಯಲ್ ಎಸ್ಟೇಟ್ ದಲ್ಲಾಳಿ ಆಗಿದ್ದೆ, ಕ್ಷೌರಿಕಳಾಗಿದ್ದೆ. ಎಲ್ಲಾ ನಿನ್ನನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಸಣ್ಣ ಮಕ್ಕಳ ಪಾಲಿಗೆ ಭಯಾನಕ ತಾಯಿಯಾಗಿದ್ದೆ. ಆದರೆ ವಯಸ್ಕ ಮಕ್ಕಳಿಗೆ ನಿನಗಿಂತ ಉತ್ತಮ ತಾಯಿ ಬೇರೆ ಯಾರೂ ದೊರೆಯುತ್ತಿರಲಿಲ್ಲವೇನೋ' ಎಂದು ಕಣ್ಣೀರಿಟ್ಟು ಹೇಳಿದಾಗ, ಆ ತಾಯಿ ಮಾಯಾಳ ಕೈಯನ್ನು ಮೆಲ್ಲಗೆ ಎರಡು ಸಲ ಅದುಮುತ್ತಾಳೆ. ತಾಯಿಯ ಬೆರಳುಗಳಿಗೆ ಚುಂಬಿಸಿ ಮನೆಗೆ ತೆರಳಿದ ಮಾಯಾಗೆ ಬೆಳಗ್ಗೆ ಧಕ್ಕನೆ ಎಚ್ಚರವಾಗುತ್ತದೆ. ಗಡಬಡನೆ ಆಸ್ಪತ್ರೆಗೆ ತೆರಳಿದಾಗ, ಅಲ್ಲಿ ನರ್ಸ್ 'ಈಗ ತಾನೇ ಆಕೆ ಹೋಗಿಬಿಟ್ಟಳು' ಎಂಬ ಸುದ್ದಿ ನೀಡುತ್ತಾಳೆ. ತಾಯಿಯ ನಿರ್ಜೀವ ದೇಹವನ್ನು ಕಂಡು 'ಅವಳನ್ನು ಅತಿಯಾಗಿ ಪ್ರೀತಿಸುವ, ಅತಿಯಾಗಿ ನೆನಪು ಮಾಡಿಕೊಳ್ಳುವ ಮಗಳು ಸಿಗಬೇಕಿತ್ತು, ಆ ವಿಷಯದಲ್ಲಿ ಅವಳು ಅದೃಷ್ಟ ಮಾಡಿದ್ದಳು' ಎಂದು ಮಾಯಾ ಅಂದುಕೊಳ್ಳುತ್ತಾಳೆ. ವಾಸ್ತವವಾಗಿ ಇದು ವಿವಿಯನ್ ಬಾಕ್ಸ್ಟರ್ಳ ಆತ್ಮಕಥೆಯೋ ಅಥವಾ ಮಾಯಾಳ ಆತ್ಮಕಥೆಯೋ ಎಂದು ನಿರ್ಧರಿಸಲು ಸ್ವಲ್ಪ ಕಷ್ಟವಾಗುವುದು ಸಹಜವೇ.
ತಂದೆಯ ಪರಿಚಯ
ಇಲ್ಲಿ ತಾನು ಹದಿಹರೆಯಕ್ಕೆ ಬರುವವರೆಗೂ ತನ್ನ ತಂದೆಯ ಬಗ್ಗೆ ಏನೂ ಅರಿವಿರಲಿಲ್ಲವೆಂದು ಬರೆಯುವ ಮಾಯಾ 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್'ನಲ್ಲಿ ಆಕೆ ಏಳು ವರ್ಷದವಳಾಗಿದ್ದಾಗ ಆತ ನೀಡಿದ ಮೂರು ವಾರದ ಭೇಟಿಗೆ, ಆ ಸಮಯದಲ್ಲಿ ಆತ ಬೀರಿದ ಪ್ರಭಾವದ ಮೇಲೆ ಒಂದು ಸಂಪೂರ್ಣ ಅಧ್ಯಾಯವನ್ನೇ ಮೀಸಲಿಡಲಾಗಿದೆ. ಹದಿನೈದು ವರ್ಷದವಳಾಗಿದ್ದಾಗ ತನ್ನ ತಂದೆಯ ಜೊತೆಯಲ್ಲಿ ಮೆಕ್ಸಿಕೋಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಎರಡು ವಿವಿಧ ಆವೃತ್ತಿಗಳನ್ನು ನೀಡಲಾಗಿದೆ. 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್'ನಲ್ಲಿ ತನ್ನ ತಂದೆಯನ್ನು 'ಸೂರ್ಯದೇವನಂತೆ, ಹಿತಕರವಾಗಿ ಬೆಚ್ಚಗಿದ್ದು, ಅಂಧಕಾರದಲ್ಲಿರುವ ತನ್ನ ಪ್ರಜೆಗಳಿಗೆಲ್ಲಾ ಬೆಳಕು ನೀಡುವ ವ್ಯಕ್ತಿ' ಎಂದು ಬಣ್ಣಿಸುತ್ತಾರೆ. ಎರಡೂ ಪುಸ್ತಕಗಳಲ್ಲಿ, 'ಕುಡಿದ ಅಮಲಿನಲ್ಲಿರುವ ತಂದೆಯನ್ನು ಮೆಕ್ಸಿಕನ್ ಗಡಿಯ ಪರ್ವತದ ರಸ್ತೆಗಳನ್ನು ದಾಟಿ ದಕ್ಷಿಣ ಕ್ಯಾಲಿಫೋರ್ನಿಯಾಕ್ಕೆ ಸುಮಾರು 30 ಮೈಲಿ ಹಿಂದೆಂದೂ ಕಾರು ಚಲಾಯಿಸದಿದ್ದರೂ, ತಾನೇ ಡ್ರೈವ್ ಮಾಡಿಕೊಂಡು ಕರೆತಂದೆ' ಎಂದು ಹೇಳಿಕೊಳ್ಳುವ ಮಾಯಾಳ ವಿಚಾರ ಎಂಥವರಿಗೂ ಅಚ್ಚರಿ ತರಿಸುತ್ತದೆ. ಮನೆ ತಲುಪಿದ ನಂತರ ತಂದೆಯ ಗೆಳತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೊರಟುಹೋಗುತ್ತಾಳೆ. ಆದರೆ 'ಮಾಮ್ ಅಂಡ್ ಮಿ ಅಂಡ್ ಮಾಮ್'ನಲ್ಲಿ ಆಕೆ ಕೊಡುವ ಕಾರಣವೇ ಬೇರೆ. 'ಆತ ನನ್ನನು ತಬ್ಬಿಕೊಂಡ ರೀತಿ ಸರಿಯಾಗಿರಲಿಲ್ಲ' ಎಂದು ಇಲ್ಲಿ ಹೇಳಿಕೊಳ್ಳುವ ಮಾಯಾ, 'ಅವನು ನನ್ನನ್ನು ಆರೈಕೆ ಮಾಡಬೇಕಾದ ರೀತಿಯಲ್ಲಿ ಆರೈಕೆ ಮಾಡಲು ಸಿದ್ಧನಿರಲಿಲ್ಲ' ಎಂದು ಬರೆಯುತ್ತಾರೆ. ಮೊದಲ ಪುಸ್ತಕದಲ್ಲಿ ಸೂರ್ಯದೇವನಾಗಿದ್ದ ತಂದೆ, ಈಗಶಿಶುಕಾಮಿಯಾಗಿಬಿಟ್ಟನೆ? ಎಂದು ಸಂಶಯಆಗುತ್ತದೆ.
ತಾಯಿಯ ಗೆಳೆಯನಿಂದ ಅತ್ಯಾಚಾರ
ಇಲ್ಲಿ ಮಾಯಾ ತಾನು ಮೂರು ವರ್ಷದಿಂದ ಹದಿಮೂರು ವರ್ಷದವೆರೆಗೆ ತನ್ನ ಅಜ್ಜಿಯ ಮನೆಯಲ್ಲಿದ್ದುದ್ದಾಗಿಯೂ, 'ಒಮ್ಮೆ ಸೇಂಟ್ ಲೂಯಿಸ್ಗೆ ಹೋದಾಗ' ತನ್ನ ಅತ್ಯಾಚಾರವಾಯಿತೆಂದೂ, ಅತ್ಯಾಚಾರಿ ನಂತರ ಕೊಲ್ಲಲ್ಪಟ್ಟನೆಂದೂ ಹೇಳುತ್ತಾರೆ. 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್' ಓದಿದವರಿಗೆ ಒಂದು ಕ್ಷಣ ಇದರಿಂದ ತಬ್ಬಿಬ್ಬಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಆ ಪುಸ್ತಕದಲ್ಲಿ ಹೇಳಿರುವಂತೆ ಮಾಯಾ ಮರಳಿ ತನ್ನ ತಾಯಿಯೊಂದಿಗೆ ವಾಸಿಸಲು ಸೇಂಟ್ ಲೂಯಿಸ್ಗೆ ತೆರಳುವುದು ಹದಿಮೂರು ವರ್ಷವಾದಾಗ. ಮಾತ್ರವಲ್ಲ, ಆ ಅತ್ಯಾಚಾರಿ ಬೇರೆ ಯಾರೂ ಆಗಿರದೆ ಅವಳ 'ತಾಯಿ ವಿವಿಯನ್ಳ ಬಾಯ್ಫ್ರೆಂಡ್' ಆಗಿದ್ದ. ಹಿಂದಿನ ನೆನಪುಗಳನ್ನು ಪುನಃ ಪುನಃ ನೆನೆಸಿಕೊಂಡು ಬರೆಯುತ್ತಾ ಹೋದರೆ ಬಹುಶಃ ಎದುರಾಗುವ ಸಮಸ್ಯೆಯೆಂದರೆ ಇದೇ ಇರಬಹುದು. ಒಂದೋ ಪುನರಾವರ್ತನೆ, ಇಲ್ಲವೇ ಕೆಲವು ಲೋಪಗಳು ಅಥವಾ ಕೆಲವು ಅಸಂಗತ ವಿಚಾರಗಳು.
ಅದಿರಲಿ, ಅತ್ಯಾಚಾರದ ವಿಷಯದ ಬಗ್ಗೆ ಮಾಯಾ ತನ್ನ ಅಣ್ಣ ಬೈಲಿ ಜೊತೆಯಲ್ಲಿ ಹಂಚಿಕೊಂಡಾಗ, ಅದನ್ನು ಆತ ಹಿರಿಯರಿಗೆ ತಿಳಿಸುತ್ತಾನೆ. ನಂತರ ಆ ಅತ್ಯಾಚಾರಿಯನ್ನು ಬಂಧಿಸಲಾಗುತ್ತದೆ, ಅಪರಾಧ ಸಾಬೀತಾಗಿ ಶಿಕ್ಷೆಗೊಳಪಡಿಸಲಾಗುತ್ತದೆ, ನಂತರ ಆತನ ಬಿಡುಗಡೆಯಾಗುತ್ತದೆ, ಹೊರಬಂದ ಕೆಲವೇ ದಿನಗಳಲ್ಲಿ ಆತ ಶವವಾಗಿಬಿಡುತ್ತಾನೆ. ಆತನನ್ನು ಚೆನ್ನಾಗಿ ಹೊಡೆದು ಯಾರೋ ಸಾಯಿಸಿಬಿಟ್ಟಿರುತ್ತಾರೆ. ಆತನ ಸಾವಿಗೆ ತಾನೇ ಕಾರಣವೆಂಬ ನೋವಿನಿಂದಾಗಿ ಐದು ವರ್ಷ ಮಾಯಾ ಯಾರೊಂದಿಗೂ ಮಾತನಾಡುವುದಿಲ್ಲ. ಆದರೆ ಅಚ್ಚುಮೆಚ್ಚಿನ ಅಣ್ಣ ಬೈಲಿ ಆಕೆಯನ್ನು ಮಾತನಾಡುವಂತೆ ಸದಾ ಪುಸಲಾಯಿಸುವುದನ್ನು ನಿಲ್ಲಿಸುವುದಿಲ್ಲ. ಆತ ತನ್ನ ಸಾವಿನವರೆಗೂ (2000) ಮಾಯಾಳ ನೆರಳಿನಂತೆ ಸದಾ ಆಕೆಯನ್ನು ಬೆಂಬಲಿಸುತ್ತಲೇ ಇದ್ದ. ಮಾಯಾಗೆ ಆಕೆಯ ಹೆಸರು ಬರಲು ಒಂದು ರೀತಿಯಲ್ಲಿ ಆತನೇ ಕಾರಣ ಎನ್ನಬೇಕು.
ಮಾಯಾಳ ಹೆಸರು
ಏಪ್ರಿಲ್ 4, 1928ರಲ್ಲಿ ಜನಿಸಿದ ಮಾಯಾ ಏಂಜೆಲೋಳ ನಿಜವಾದ ಹೆಸರು ಮಾರ್ಗರೇಟ್ ಅನ್ನಿ ಜಾನ್ಸನ್. ತೊದಲುತ್ತಿದ್ದ ಅಣ್ಣ ಆಕೆಯ ಹೆಸರನ್ನು ಉಚ್ಚರಿಸಲು ಕಷ್ಟ ಪಡುತ್ತಿದ್ದ ನನ್ನ ತಂಗಿ ('ಮೈ ಸಿಸ್ಟರ್') ಎಂದು ಕರೆಯುವ ತವಕದಿಂದ ಆತನ ಬಾಯಿಂದ ಹೊರಡುತ್ತಿದ್ದ ಶಬ್ದ ನನ್ನ ('ಮೈ'). ಕೆಲವು ವರ್ಷಗಳ ನಂತರ ಮಾಯಾ ಇಂಡಿಯನ್ಸ್ ಜನರ ಬಗ್ಗೆ ಒಂದು ಪುಸ್ತಕ ಓದಿದ ಬಳಿಕ ಆಕೆಯನ್ನು ಮಾಯಾ ಎಂದು ಕರೆಯತೊಡಗಿದ. ಜೊತೆಗೆ ಆ ಹೆಸರೇ ಆಕೆಗೆ ಅಂಟಿಕೊಂಡಿತು.
ಮೊದಲೇ ಹೇಳಿದಂತೆ ಮಾಯಾ ಮರಳಿ ಮಾತನಾಡಲು ತೊಡಗಿದ್ದು ಆಕೆಗೆ ಹದಿಮೂರು ವರ್ಷವಾದಾಗ. ತನ್ನ ತಾಯಿಯ ಜೊತೆಯಲ್ಲಿ ಇಬ್ಬರೂ ಮತ್ತೆ ವಾಸಿಸಲು ಹೋದಾಗ ಮಿಷನ್ ಹೈಸ್ಕೂಲ್ಗೆ ಓದಲು ತೆರಳುವ ಮಾಯಾಗೆ ಸ್ಯಾನ್ ಫ್ರಾನ್ಸಿಸ್ಕೋದ ಕಾರ್ಮಿಕ ಶಾಲೆಯಲ್ಲಿ ನೃತ್ಯ ಮತ್ತು ನಾಟಕ ಅಧ್ಯಯನ ಮಾಡಲು ವಿದ್ಯಾರ್ಥಿವೇತನ ದೊರೆಯುತ್ತದೆ. ಕೆಲವೇ ತಿಂಗಳುಗಳಲ್ಲಿ ಶಾಲೆಯಿಂದ ಹೊರಬಿದ್ದ ಮಾಯಾಳನ್ನು ಅವಳ ತಾಯಿ ಆಕೆಯನ್ನು ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಿ ಸ್ಯಾನ್ ಫ್ರಾನ್ಸಿಸ್ಕೋದ ಟ್ರಾಮ್ನಲ್ಲಿ ನಿರ್ವಾಹಕಿಯಾಗಿ ಕೆಲಸಕ್ಕೆ ಸೇರುವಂತೆ ಪ್ರೋತ್ಸಾಹಿಸುತ್ತಾಳೆ. ಹೀಗೆ ಸೇರಿದ ಮೊದಲ ಅಮೆರಿಕನ್ ನೀಗ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾಳೆ. ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್ನಲ್ಲಿ ತಾಯಿ ದಿನವೂ ಪ್ರಾತಃಕಾಲ ಮಗಳನ್ನು ಕೆಲಸಕ್ಕೆ ಬಿಟ್ಟು ಮರಳಿ ಮನೆಗೆ ಹೋಗುತ್ತಿರುತ್ತಾಳೆ. ಆದರೆ ಈ ಹೊಸ ಆತ್ಮಕಥೆಯಲ್ಲಿ, 'ಮಗಳ ಸುರಕ್ಷತೆಗಾಗಿ ಸೀಟಿನಲ್ಲಿ ಗನ್ ಇರಿಸಿಕೊಂಡು ವಿವಿಯನ್ ತಿಂಗಳುಗಟ್ಟಲೆ ಆ ಟ್ರಾಮ್ ಅನ್ನು ಬೆಳಕು ಹರಿಯುವವರೆಗೂ ಕಾರಿನಲ್ಲಿ ಹಿಂಬಾಲಿಸುತ್ತಿದ್ದಳು.
ನಂತರ ಕೆಲವು ತಿಂಗಳುಗಳ ಬಳಿಕ ಪ್ರೌಢಶಾಲೆಗೆ ಮರಳುತ್ತಾಳೆ. ಆರು ಅಡಿ ಎತ್ತರದ ಮತ್ತು ಯಾವುದೇ ಸ್ತ್ರೀಸಹಜವಾದ ಬೆಳವಣಿಗೆಗಳು ತನ್ನ ದೇಹದಲ್ಲುಂಟಾಗುತ್ತಿಲ್ಲವೆಂಬ ಆತಂಕದಲ್ಲಿ ಹದಿಹರೆಯದ ಮಾಯಾ ತಾನು ಸಲಿಂಗಕಾಮಿಯೇನೋ ಎನ್ನುವ ಅನುಮಾನದಲ್ಲಿ ಸಿಲುಕುತ್ತಾಳೆ. ಅದನ್ನು ತಪ್ಪೆಂದು ಸಾಬೀತುಪಡಿಸಿಕೊಳ್ಳಲು ಒಬ್ಬ ಸ್ಥಳೀಯ ಹುಡುಗನೊಡನೆ ಲೃಂಗಿಕ ಸಂಪರ್ಕ ಮಾಡುತ್ತಾಳೆ. ನಿರೀಕ್ಷಿತವೋ, ಅನಿರೀಕ್ಷಿತವೋ, ವಿದ್ಯಾಭ್ಯಾಸದ ಕಡೆಯ ವರ್ಷದಲ್ಲಿ ಗರ್ಭಿಣಿಯಾಗುತ್ತಾಳೆ. ಮಗನಿಗೆ ಜನ್ಮ ನೀಡುವ ಕೆಲವೇ ಕೆಲವು ವಾರಗಳ ಮುನ್ನ ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಮುಗಿಸುತ್ತಾಳೆ. ಈ ವಿಚಾರ ತಿಳಿದಾಗ ತಾಯಿ ವಿವಿಯನ್ 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್'ನಲ್ಲಿ ತುಂಬಾ ಒರಟಾಗಿ ನಡೆದುಕೊಳ್ಳುತ್ತಾಳೆ. ಅಲ್ಲಿಂದ ಆಕೆಯ ಪ್ರಸ್ತಾಪ ಮತ್ತೆ ಬರುವುದು ಮಾಯಾ ಮಗುವಿಗೆ ಜನ್ಮ ನೀಡಿದ ಮೇಲೆಯೇ. ಹೊಸ ಆವೃತ್ತಿಯಲ್ಲಿ ತಾಯಿ ಮಗಳ ಹದಿಹರೆಯದ ಗರ್ಭಧಾರಣೆಯನ್ನು ಬೆಂಬಲಿಸುವುದು ಮಾತ್ರವಲ್ಲ, 'ಕೊನೆಯ ವಾರಗಳಲ್ಲಿ ಸಂಪೂರ್ಣವಾಗಿ ಆಕೆಯ ಜೊತೆಯಲ್ಲೇ ಉಳಿದುಕೊಂಡು ಆಕೆಯ ಹೆರಿಗೆಯ ಸಮಯದಲ್ಲಿ ಅಕ್ಷರಶಃ ಮೇಜಿನ ಮೇಲೇರಿಅವಳಿಗೆ ಸಹಾಯ ಮಾಡುತ್ತಾಳೆ.' ಬಹುಶಃ ಇದಕ್ಕೇ ಇರಬಹುದು ಸ್ಮರಣೆ ಎನ್ನುವುದು, ನೆನಪು ಎನ್ನುವುದು ಕೆಲವು ಬಾರಿ ಕಾಲ್ಪನಿಕ, ಕಲ್ಪನಾತೀತ ವಿಷಯ ಎನಿಸಿಬಿಡುವುದು.
ಹದಿನಾರು ವರ್ಷಕ್ಕೆ ಮನೆಬಿಟ್ಟ ಮಾಯಾ ಏಕಾಂಗಿಯಾಗಿ ಮಗನನ್ನು ಸಾಕುವ ಹೊಣೆಯನ್ನು ಹೊರುತ್ತಾಳೆ, ಕಾಸಿಗಾಗಿ ಪರಿಚಾರಿಕೆಯಾಗಿ, ಅಡುಗೆಯವಳಾಗಿ ಕೆಲಸ ಮಾಡುತ್ತಾಳೆ. ಆದರೆ ಈ ನಡುವೆಯೂ ತನ್ನಲ್ಲಿ ಹುದುಗಿದ್ದ ಸಂಗೀತ, ನೃತ್ಯ, ಅಭಿನಯ ಮತ್ತು ಕಾವ್ಯದ ಗೀಳನ್ನು ಬಿಟ್ಟುಕೊಡುವುದಿಲ್ಲ. 1952ರಲ್ಲಿ ಅನಸ್ಟಸಿಯೊಸ್ ಏಂಜೆಲೋಪುಲೋಸ್ ಎಂಬ ಗ್ರೀಕ್ ನಾವಿಕನನ್ನು ವಿವಾಹವಾದ ಮಾಯಾ ನೈಟ್ ಕ್ಲಬ್ ಒಂದರಲ್ಲಿ ಗಾಯಕಿಯಾಗಿ ವೃತ್ತಿಜೀವನ ಪ್ರಾರಂಭಿಸುತ್ತಾಳೆ. ತನ್ನ ಬಾಲ್ಯದ ಅಡ್ಡ ಹೆಸರಿನೊಂದಿಗೆ ಪತಿಯ ಹೆಸರನ್ನು ಮೊಟಕುಗೊಳಿಸಿ 'ಮಾಯಾ ಏಂಜೆಲೋ' ಆಗುತ್ತಾಳೆ. ಮದುವೆ ಸಾಕಷ್ಟು ದಿನಗಳವರೆಗೆ ಬದುಕುಳಿಯದಿದ್ದರೂ, ಆಕೆಯ ವೃತ್ತಿಜೀವನ ಉತ್ತುಂಗಕ್ಕೇರುತ್ತದೆ.
ಮಾಯಾಳ ಟ್ರೇಡ್ಮಾರ್ಕ್
ಇನ್ನು ಇದರ ಕೆಲವು ವಿಚಿತ್ರವಾದ ಸಂಗತಿಗಳನ್ನೂ ಗಮನಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸಂಗತಿಗಳು ಹಿಂದೆ ಬರೆದಿರುವ ಆತ್ಮಕಥೆಗಳಲ್ಲಿ ಬಂದಿರುವ ಘಟನೆಗಳಿಗೂ ಕೆಲವು ಬಾರಿ ಸರಿಯಾಗಿ ತಾಳೆಯಾಗುವುದಿಲ್ಲ. 1969ರಲ್ಲಿ ಹೊರಬಂದ 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್' ಪ್ರಾಯಶಃ ಆಕೆಯ ಅತ್ಯುತ್ತಮ ಮತ್ತು ಬಹಳ ಹೆಸರುವಾಸಿಯಾದ ಆತ್ಮಕಥೆ. ಆಕೆಯ ಆಯಿ, ಅಜ್ಜಿ ಮತ್ತು ಬಾಲ್ಯ, ನಿಕಟ ಕುಟುಂಬ ಸದಸ್ಯರು ಜೊತೆಗೆ ತನ್ನ ಸಂಬಂಧದ ಬಗ್ಗೆ ಹೇಳುವುದು ಮಾತ್ರವಲ್ಲದೆ, ಮಕ್ಕಳ ಮೇಲಿನ ಅತ್ಯಾಚಾರದ ಬಗ್ಗೆ ಚರ್ಚಿಸಿದ ಮೊದಲಪುಸ್ತಕವಾಗಿತ್ತು. ಜಗತ್ತಿನ ಅಷ್ಟೂ ಮಹಿಳೆಯರನ್ನು ಉದ್ದೇಶಿಸಿತ್ತು.ದುರದೃಷ್ಟವಶಾತ್, ಈ ಹಿಂದಿನ ಆತ್ಮಕಥೆಗಳಿಗೆ ಹೋಲಿಸಿದಾಗ ಈ ಹೊಸ ಆತ್ಮಕಥೆ ಅಷ್ಟು ಸೊಗಸಾಗಿ ಸಂಪಾದಿಸಲ್ಪಟ್ಟಿಲ್ಲವೇನೋ ಎಂಬ ಗುಮಾನಿ ಬರುತ್ತದೆ. ಹಲವು ಬಾರಿ ಹಳೆಯ ಸಂಗತಿಗಳನ್ನು ಮರಳಿ ಮರಳಿ ಚರ್ಚಿಸುವುದು ಮಾತ್ರವಲ್ಲ, ಕೆಲವು ಬಾರಿ ತಾನೇ ನಡೆದ ಸಂಗತಿಗಳನ್ನು ಅಲ್ಲಗಳೆಯುತ್ತಿರುವುದೂ ಕಂಡುಬರುತ್ತದೆ. ಮಾಯಾಳ ಟ್ರೇಡ್ಮಾರ್ಕ್ ಆದ ಉತ್ತಮ ಹಾಸ್ಯ ಮತ್ತು ತೀವ್ರ ಆಶಾವಾದ ಈ ಆತ್ಮಕಥೆಯಲ್ಲೂ ತುಂಬಿ ತುಳುಕುತ್ತಿದೆ. ಒಂದು ವೇಳೆ ಜೀವನದ ಎಲ್ಲಾ ಕಹಿ ಘಟನೆಗಳನ್ನೂ ಬಹಿರಂಗಪಡಿಸಿಲ್ಲವೆಂದು ಓದುಗರಿಗೆ ಅನುಮಾನ ಬಂದರೆ ಅದು ನಮ್ಮ ತಪ್ಪಲ್ಲ, ಬದಲಾಗಿ ಅವುಗಳನ್ನು ಮರೆತು ಕ್ಷಮಿಸುವ ಮಾಯಾಳ ಬರವಣಿಗೆಯ ಶೈಲಿಯ ಒಂದು ಭಾಗ ಮಾತ್ರ. ಮಾಯಾಗೆ ತನ್ನ ಪದಗಳಲ್ಲಿ ನಮ್ಮನ್ನು ಬೆರಗುಗೊಳಿಸುವ,
ಸಮ್ಮೋಹನಗೊಳಿಸುವ ರೀತಿ ಬಹಳಚೆನ್ನಾಗಿ ತಿಳಿದಿದೆ.
ಮಾಯಾ ಬರೆದಿರುವ ಆತ್ಮಕಥೆಗಳು
1. ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್ (1969)
ಇದು ಮಾಯಾಳ ಮೊದಲ ಆತ್ಮಕಥೆ. ತನ್ನ ಬಾಲ್ಯದಿಂದ 1944ರ ವರೆಗಿನ ಬದುಕನ್ನು ಇಲ್ಲಿ ಲೇಖಕಿ ಹೇಳಿಕೊಂಡಿದ್ದಾರೆ. ಆತ್ಮಕಥನ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ ಈ ಪುಸ್ತಕ ಆಕೆ ಮೂರು ವರ್ಷದ ಬಾಲಕಿಯಾಗಿದ್ದಾಗ ತನ್ನ ಐದು ವರ್ಷದ ಅಣ್ಣನೊಡನೆ ಅಜ್ಜಿಯ ಮನೆಗೆ ವಾಸಿಸಲು ತೆರಳುವುದರೊಂದಿಗೆ ಪ್ರಾರಂಭವಾಗಿ ಹದಿನೇಳು ವರ್ಷಕ್ಕೇ ಮಾಯಾ ತಾಯಿಯಾಗುವುದರೊಂದಿಗೆ ಮುಕ್ತಾಯವಾಗುತ್ತದೆ.
2. ಗ್ಯಾದರ್ ಟುಗೆದರ್ ಇನ್ ಮೈ ನೇಮ್ (1974)
ಮೊದಲ ಆತ್ಮಕಥೆಯ ಮೂರು ವರ್ಷಗಳ ನಂತರ ಹೊರಬಂದ ಈ ಎರಡನೆಯ ಕೃತಿ ಆ ನಂತರದ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. 1944ರ ಸಮಯದಿಂದ 1948ರ ನಡುವೆ ನಡೆದ ಘಟನೆಗಳ ಬಗ್ಗೆ, ಹದಿಹರೆಯದ ಒಂಟಿ ತಾಯಿಯೊಬ್ಬಳು ಬಡತನ ಮತ್ತು ಅಪರಾಧದ ಸುಳಿಗೆ ಹೇಗೆ ಜಾರಿಕೊಂಡಳು ಎನ್ನುವುದರ ಬಗ್ಗೆ ಇಲ್ಲಿ ಮಾಯಾ ವಿವರಿಸಿದ್ದಾರೆ.
3. ಸಿಂಗಿಂಗ್ ಅಂಡ್ ಸ್ವಿಂಗಿಂಗ್ ಅಂಡ್ ಗೆಟ್ಟಿಂಗ್ ಮೆರ್ರಿ ಲೈಕ್ ಕ್ರಿಸ್ಮಸ್ (1976)
1949 ಮತ್ತು 1955ರ ನಡುವೆ ಬರುವ ಘಟನೆಗಳ ಮೇಲೆ ಕೇಂದ್ರೀಕೃತವಾಗಿರುವ ಈ ಮೂರನೆಯ ಆತ್ಮಕಥೆಯಲ್ಲಿ ಮಾಯಾ ತನ್ನ ಪುಟ್ಟ ಮಗನನ್ನು ಸಾಕಲು ಹೆಣಗಾಡಿದ್ದು, ಅರ್ಥಪೂರ್ಣ ಸಂಬಂಧಗಳನ್ನು ಹುಡುಕಿಕೊಂಡು ಹೋಗಿದ್ದು ಮತ್ತು ಮನರಂಜನಾ ಲೋಕದಲ್ಲಿ ಯಶಸ್ವಿ ವೃತ್ತಿಜೀವನ ಆರಂಭಿಸಿದ್ದರ ಬಗ್ಗೆ ಬರೆದಿದ್ದಾರೆ. ಈ ಕೃತಿ ಆಕೆಯ ಮುಕುಟಕ್ಕೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು. ಕಾರಣ, ತನ್ನ ಆತ್ಮಚರಿತ್ರೆಯನ್ನು ಮೂರನೆಯ ಸಂಪುಟಕ್ಕೆ ವಿಸ್ತರಿಸಿದ ಪ್ರಪ್ರಥಮ ಆಫ್ರಿಕನ್-ಅಮೆರಿಕನ್ ಮಹಿಳೆಯೆಂಬ ಹೆಗ್ಗಳಿಕೆಗೆ ಮಾಯಾ 1976ರಲ್ಲಿ ಪಾತ್ರರಾದರು.
4. ದಿ ಹಾರ್ಟ್ ಆಫ್ ಎ ವುಮನ್ (1981)
ಮಾಯಾಳ ಜೀವನ 1957 ಮತ್ತು 1962ರ ನಡುವೆ ಹೇಗಿತ್ತು ಎಂಬುದನ್ನು ಈ ನಾಲ್ಕನೆಯ ಆತ್ಮಕಥೆ ಒಳಗೊಂಡಿದೆ. ಆಕೆ ತನ್ನ ಮಗನನ್ನು ಸಾಕುತ್ತಾ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸಿಟಿ, ಕೈರೋ ಮತ್ತು ಘಾನಾಕ್ಕೆ ಪ್ರಯಾಣ ಮಾಡುವುದು, ಪ್ರಕಟಿತ ಲೇಖಕಿಯಾಗುವುದು, ಅಮೆರಿಕಾದ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ವುಸುಮ್ಜಿ ಮಾಕೆಯ ಪ್ರೀತಿಯಲ್ಲಿ ಬೀಳುವುದರ ಬಗ್ಗೆ ಇದರಲ್ಲಿ ವಿವರಣೆಗಳು ದೊರಕುತ್ತವೆ. ಮಗನೊಂದಿಗೆ ಪ್ರಯಾಣ ಮಾಡುವಾಗ ಆದ ಭಯಾನಕ ಮತ್ತು ಆಘಾತಕಾರಿ ಕಾರು ಅಪಘಾತದೊಂದಿಗೆ ಇದು ಮುಕ್ತಾಯವಾಗುತ್ತದೆ.
5. ಆಲ್ ಗಾಡ್ಸ್ ಚಿಲ್ಡ್ರನ್ ನೀಡ್ ಟ್ರಾವಲಿಂಗ್ ಶೂಸ್ (1986)
1962 ಮತ್ತು 1965ರ ನಡುವಿನ ಘಟನೆಗಳನ್ನೂ ವಿವರಿಸುವ ಈ ಐದನೆಯ ಆತ್ಮಕಥೆ 33 ವರ್ಷದ ಮಾಯಾ ತನ್ನ ಜೀವನ ಘಾನಾದ ಅಕ್ರಾದಲ್ಲಿ ಹೇಗಿತ್ತು ಎಂಬುದನ್ನು ಮೆಲಕುಹಾಕುತ್ತಾ ಕಳೆದ ಆತ್ಮಚರಿತ್ರೆ ಕೊನೆಯಾದ ಕಾರು ಅಪಘಾತದ ಘಟನೆಯಿಂದ ಮುಂದಕ್ಕೆ ಈ ಪುಸ್ತಕ ಓದುಗರನ್ನು ಕೊಂಡೊಯ್ಯುತ್ತದೆ. ತನ್ನ ಹಿಂದಿನ ಪುಸ್ತಕಗಳಲ್ಲಿ ಹೇಳಿಕೊಂಡ ಹಾಗೆಯೇ, ಇಲ್ಲಿಯೂ ಮಾಯಾ ಮಾತೃತ್ವ, ಒಂಟಿಯಾಗಿ ಮಗನನ್ನು ಬೆಳೆಸುವುದು, ಜನಾಂಗ ಮತ್ತು ಗುರುತು, ಪ್ರಯಾಣ ಮತ್ತು ಪ್ರವಾಸ ಸೇರಿದಂತೆ ಹಲವು ವಿಷಯಗಳ ಪ್ರಸ್ತಾಪವನ್ನು ಮಾಡಿಕೊಂಡೇ ಹೋಗುತ್ತಾರೆ. ಮಗನನ್ನು ಘಾನಾದಲ್ಲಿ ಬಿಟ್ಟು ಅಮೆರಿಕಾಗೆ ತೆರಳುವುದರೊಂದಿಗೆ ಪುಸ್ತಕದ ಕೊನೆಯಾಗುತ್ತದೆ.
6. ಎ ಸಾಂಗ್ ಫ್ಲಂಗ್ ಅಪ್ ಟು ಹೆವನ್ (2002)
1965 ಮತ್ತು 1968ರ ನಡುವಿನ ಜೀವನದ ಬಗ್ಗೆ ಇರುವ ಈ ಆರನೆಯ ಆತ್ಮಕಥೆ ಮಾಯಾಳ ಕೊನೆಯ ಕಂತು ಎಂದೆ ಹಲವರು ಭಾವಿಸಿದ್ದರು. ಘಾನಾದಿಂದ ಹೊರಟ ಮಾಯಾ ಅಮೆರಿಕಾಗೆ ಮರಳಿ ಬರುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ಎರಡು ಮನಕಲಕುವ ಅನಾಹುತಗಳು - ಮಾಲ್ಕಾಂ (10) ಮತ್ತು ಮಾರ್ಟಿನ್ ಲೂಥರ್ ಕಿಂಗ್ (ಜೂ) ಹತ್ಯೆ - ಮಾಯಾ ಈ ಘಟನೆಗಳನ್ನು ಎದುರಿಸಿದ ಬಗೆ, ತನ್ನ ದೇಶ ಹಾಗೂ ವೈಯಕ್ತಿಕ ಜೀವನದಲ್ಲಿ ಇದರಿಂದ ಉಂಟಾದ ಬದಲಾವಣೆಗಳು ಪುಸ್ತಕದ ಪ್ರಾರಂಭವನ್ನೂ ಅಂತ್ಯವನ್ನೂ ಆವರಿಸಿಕೊಂಡಿದ್ದವು. ಪುಸ್ತಕ ಮಾಯಾ ತನ್ನ ತನ್ನ ಸಾಹಿತ್ಯಕ ವೃತ್ತಿಜೀವನದ ಹೊಸ್ತಿಲಲ್ಲಿ ನಿಂತು ತನ್ನ ಮೊದಲ ಆತ್ಮಕಥೆ 'ಐ ನೋ ವೈ ದಿ ಕೇಜ್ಡ್ ಬರ್ಡ್ ಸಿಂಗ್ಸ್' ನ ಆರಂಭದ ಸಾಲುಗಳನ್ನು ಬರೆಯುವುದರೊಂದಿಗೆ ಮುಕ್ತಾಯವಾಗುತ್ತದೆ.
-ಚೈತ್ರಾ ಅರ್ಜುನಪುರಿ, ದುಬೈ
carjunp@gmail.com
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40121 ಗೆ ಭೇಟಿನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


