ಕ್ರಿಕೆಟ್

ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ; ಸೂರ್ಯಕುಮಾರ್ ಯಾದವ್ ಒಂದು ಸಾಲಿನ ಪೋಸ್ಟ್ ವೈರಲ್! ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ; ಸೂರ್ಯಕುಮಾರ್ ಯಾದವ್ ಒಂದು ಸಾಲಿನ ಪೋಸ್ಟ್ ವೈರಲ್! ಹೇಳಿದ್ದೇನು?
ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್
Published On :

ಮುಂಬೈ: ಐಪಿಎಲ್ 2027ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಲಾಗಿದ್ದು ಈ ಬೆಳವಣಿಗೆ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಮಾಡಿರುವ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಆಯ್ಕೆ ಮೂಲಕ ಮುಂಬೈ ತಂಡದ ನಾಯಕತ್ವ ಯಾರಿಗೆ ಸಿಗಲಿದೆ ಎಂಬ ಹಲವು ತಿಂಗಳ ಕುತೂಹಲಕ್ಕೆ ತೆರೆಬಿದ್ದಿದೆ. ರೋಹಿತ್ ನೇಮಕದ ಬೆನ್ನಲ್ಲೇ ನಾಯಕತ್ವದ ರೇಸ್‌ನಲ್ಲಿದ್ದ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾಡಿರುವ ಒಂದೇ ಸಾಲಿನ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಶುಕ್ರವಾರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು 2027ರ ಐಪಿಎಲ್‌ಗೆ ನಾಯಕನಾಗಿ ಘೋಷಿಸಿದೆ. ಈ ಹಿಂದೆ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ನಾಯಕತ್ವದ ಹೊಣೆ ಮತ್ತೆ ರೋಹಿತ್ ಹೆಗಲೇರಿದೆ.

ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಕೂಡ ನಾಯಕತ್ವದ ಆಯ್ಕೆಗಳಾಗಿದ್ದರು. ಆದರೆ, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಅನುಭವ ಹೊಂದಿರುವ ರೋಹಿತ್ ಅವರನ್ನೇ ಫ್ರಾಂಚೈಸಿ ಆಯ್ಕೆ ಮಾಡಿದೆ.

ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ರೋಹಿತ್ ನಾಯಕತ್ವ ಘೋಷಣೆಯಾದ ತಕ್ಷಣ ಸೂರ್ಯಕುಮಾರ್ ಯಾದವ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನೀಲಿ ಬಣ್ಣದ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದರು. ನಂತರ ಮತ್ತೊಂದು ಪೋಸ್ಟ್‌ನಲ್ಲಿ ರೋಹಿತ್ ಅವರನ್ನು ಹೊಗಳಿ, ಮುಂಬೈ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ.

"ನಾಯಕ. ಸಹೋದರ. ಮಾರ್ಗದರ್ಶಕ. ಪಲ್ಟನ್, ಸೀಟ್ ಬೆಲ್ಟ್ ಕಟ್ಟಿಕೊಳ್ಳಿ" ಎಂದು ಸೂರ್ಯಕುಮಾರ್ ಬರೆದುಕೊಂಡಿದ್ದಾರೆ. ಈ ಮೂಲಕ ರೋಹಿತ್ ನಾಯಕತ್ವಕ್ಕೆ ಸೂರ್ಯಕುಮಾರ್ ಸಂತಸ ವ್ಯಕ್ತಪಡಿಸಿದ್ದು, ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.

ರೋಹಿತ್ ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ನಾಯಕತ್ವ ಮತ್ತೆ ವಹಿಸಿಕೊಂಡಿರುವ ಬಗ್ಗೆ ರೋಹಿತ್ ಸಂತಸ ವ್ಯಕ್ತಪಡಿಸಿದ್ದಾರೆ. "ಐಪಿಎಲ್‌ನ 20ನೇ ಆವೃತ್ತಿಗೆ ನಾನು ಸಿದ್ಧನಿದ್ದೇನೆ. ಮುಂದಿರುವ ಸವಾಲುಗಳನ್ನು ಎದುರಿಸಲು ಹಾಗೂ ನಮ್ಮ ಪಲ್ಟನ್ ಅಭಿಮಾನಿಗಳಿಗೆ ಸಂಭ್ರಮದ ಕ್ಷಣಗಳನ್ನು ನೀಡಲು ಉತ್ಸುಕನಾಗಿದ್ದೇನೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಹೋರಾಡುವುದು ಮತ್ತು ಆಟವನ್ನು ಆನಂದಿಸುವುದು ನಮ್ಮ ಗುರಿಯಾಗಿದೆ" ಎಂದು ರೋಹಿತ್ ಹೇಳಿದ್ದಾರೆ.

"ಮುಂಬೈ ಇಂಡಿಯನ್ಸ್ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಹೆಮ್ಮೆಯ ವಿಚಾರ. ಮುಂಬರುವ ಆವೃತ್ತಿಯ ಕುರಿತು ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರೊಂದಿಗೆ ನಡೆಸಿದ ಮಾತುಕತೆಗಳು ಉತ್ಸಾಹ ಮೂಡಿಸಿವೆ. ನಾವು ಏನನ್ನು ಸಾಧಿಸಬಹುದು ಎಂಬ ಬಗ್ಗೆ ನನಗೆ ಅಪಾರ ನಂಬಿಕೆಯಿದೆ" ಎಂದು ಅವರು ತಿಳಿಸಿದ್ದಾರೆ.

Story image

ಐದು ಬಾರಿ ಚಾಂಪಿಯನ್ ಮಾಡಿದ ನಾಯಕ

2013ರಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ, ತಂಡಕ್ಕೆ ಐದು ಬಾರಿ ಐಪಿಎಲ್ ಪ್ರಶಸ್ತಿ (2013, 2015, 2017, 2019 ಮತ್ತು 2020) ಗೆದ್ದುಕೊಟ್ಟಿದ್ದಾರೆ. 2013ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ತಂಡ ಗೆದ್ದಿತ್ತು.

ಆದರೆ, 2020ರ ಬಳಿಕ ಮುಂಬೈ ತಂಡದ ಪ್ರದರ್ಶನ ಕುಸಿಯತೊಡಗಿತು. 2021ರಲ್ಲಿ ಐದನೇ ಸ್ಥಾನ, 2022ರಲ್ಲಿ 10ನೇ ಸ್ಥಾನ ಮತ್ತು 2023ರಲ್ಲಿ ಕ್ವಾಲಿಫೈಯರ್-2 ಹಂತದಲ್ಲಿ ಸೋಲು ಕಂಡಿತ್ತು. ಇದರ ಬೆನ್ನಲ್ಲೇ 2024ರ ಐಪಿಎಲ್‌ಗೂ ಮುನ್ನ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿ ನೀಡಲಾಗಿತ್ತು.

ಆದರೆ, ಹಾರ್ದಿಕ್ ನಾಯಕತ್ವದಲ್ಲೂ ತಂಡ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. 2024ರಲ್ಲಿ 10ನೇ ಸ್ಥಾನ ಹಾಗೂ 2026ರಲ್ಲಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ 2027ರ ಆವೃತ್ತಿಗೆ ಮತ್ತೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಿರುವ ಮುಂಬೈ ಇಂಡಿಯನ್ಸ್, ಹಳೆಯ ಯಶಸ್ಸನ್ನು ಮರುಕಳಿಸುವ ವಿಶ್ವಾಸದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.