

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗುವ ಕುರಿತು ಚರ್ಚೆಗಳು ನಡೆಯುತ್ತಿರುವಂತೆಯೇ 'ಹಾರ್ದಿಕ್ ಪಾಂಡ್ಯ ಮೂಲೆಗುಂಪಾಗಿದ್ದೇನೆ ಎಂದು ಭಾವಿಸಿದ್ದರು' ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಬಗ್ಗೆ ಐಪಿಎಲ್ ವಲಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ. 2027ರ ಐಪಿಎಲ್ ಸೀಸನ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿವೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು, ಹಾರ್ದಿಕ್ ನಾಯಕತ್ವದ ಬಗ್ಗೆ ಮಹತ್ವದ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅವರಿಂದ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಬಳಿಕ ಹಾರ್ದಿಕ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದರಿಂದ ಅವರು ತಂಡದಲ್ಲಿ ಮೂಲೆಗುಂಪಾದ ಭಾವನೆಗೆ ಒಳಗಾಗಿರಬಹುದು ಎಂದು ರಾಯುಡು ಹೇಳಿದ್ದಾರೆ.
Cricbuzz ಜೊತೆಗಿನ ಚರ್ಚೆಯಲ್ಲಿ ಮಾತನಾಡಿದ ರಾಯುಡು, "ಮುಂಬೈ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮೂಲೆಗುಂಪಾದಂತೆ ಭಾವಿಸಿದ್ದರು ಎಂದು ನನಗೆ ಅನಿಸಿತ್ತು. ಒಬ್ಬ ಆಟಗಾರನಿಗೆ ಇಂತಹ ಭಾವನೆ ಬಂದಾಗ, ಆತ ಯಾವಾಗಲೂ ತನ್ನ ಸುತ್ತಮುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಇದು ತಂಡದ ಡ್ರೆಸ್ಸಿಂಗ್ ರೂಂ ಮೇಲೆಯೂ ಪರಿಣಾಮ ಬೀರುತ್ತದೆ. ಆಗ ಆಟಗಾರರು ಸಾಮಾನ್ಯವಾಗಿ ಮಾಡದ ರೀತಿಯಲ್ಲಿ ವರ್ತಿಸಬಹುದು. ಹಾರ್ದಿಕ್ ವಿಚಾರದಲ್ಲಿ ಹಲವು ಸಂಗತಿಗಳು ಸರಿಯಾಗಿ ನಡೆಯಲಿಲ್ಲ. ಅದರಲ್ಲಿ ಅವರ ತಪ್ಪೂ ಇರಬಹುದು, ಇತರ ಕಾರಣಗಳೂ ಇರಬಹುದು" ಎಂದು ಹೇಳಿದ್ದಾರೆ.
ಹಾರ್ದಿಕ್ ನಾಯಕತ್ವ ತ್ಯಜಿಸಲಿ
2024ರ ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ನೇಮಿಸಲಾಗಿತ್ತು. ಈ ನಿರ್ಧಾರಕ್ಕೆ ಅಭಿಮಾನಿಗಳ ಒಂದು ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮೈದಾನದಲ್ಲೂ ಹಾರ್ದಿಕ್ ಹಲವು ಬಾರಿ ಅಭಿಮಾನಿಗಳ ಟೀಕೆ ಎದುರಿಸಿದ್ದರು.
ನಾಯಕನಾಗಿ ತಂಡಕ್ಕೆ ನಿರೀಕ್ಷಿತ ಯಶಸ್ಸು ತಂದುಕೊಡಲು ಸಾಧ್ಯವಾಗದಿರುವುದು ಅವರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಲ್ಲೇ ಮುಂದುವರಿಯುವುದಾದರೆ ನಾಯಕತ್ವ ಬಿಟ್ಟು ಆಟಗಾರನಾಗಿ ಆಡಬೇಕು ಎಂದು ರಾಯುಡು ಸಲಹೆ ನೀಡಿದ್ದಾರೆ.
"ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿಯಲು ಬಯಸಿದರೆ, ಇನ್ನು ಮುಂದೆ ನಾಯಕನಾಗಬಾರದು. ತಮ್ಮ ಆಟದತ್ತ ಗಮನಹರಿಸಬೇಕು, ಕ್ರಿಕೆಟ್ ಅನ್ನು ಆನಂದಿಸಬೇಕು ಮತ್ತು ತಂಡದ ಪಂದ್ಯ ಗೆಲ್ಲಿಸಿಕೊಡುವ ಆಟಗಾರನಾಗಬೇಕು. ಒಂದು ವೇಳೆ ಬೇರೆ ತಂಡಕ್ಕೆ ಹೋದರೂ ಕನಿಷ್ಠ ಒಂದು ಸೀಸನ್‌ವರೆಗೆ ನಾಯಕತ್ವ ವಹಿಸಬಾರದು" ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಅಥವಾ ಚೆನ್ನೈ ತಂಡಕ್ಕೆ ಹೋಗಲಿ!
ಹಾರ್ದಿಕ್ ಪಾಂಡ್ಯ ಬೇರೆ ತಂಡಕ್ಕೆ ವರ್ಗಾವಣೆಯಾದರೆ ಪಂಜಾಬ್ ಕಿಂಗ್ಸ್ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಅವರಿಗೆ ಸೂಕ್ತವಾಗಬಹುದು ಎಂದು ರಾಯುಡು ಹೇಳಿದ್ದಾರೆ.
"ನನ್ನ ಪ್ರಕಾರ ಅವರು ಪಂಜಾಬ್ ಅಥವಾ ಚೆನ್ನೈ ತಂಡಕ್ಕೆ ಹೋಗಬಹುದು. ಈ ಎರಡು ತಂಡಗಳಲ್ಲಿ ಅವರಿಗೆ ಉತ್ತಮ ವಾತಾವರಣ ಸಿಗಬಹುದು. ಆದರೆ ಅಲ್ಲಿ ಕೂಡ ನಾಯಕತ್ವ ವಹಿಸಬಾರದು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೋದರೆ ಪರಿಸ್ಥಿತಿ ಬೇರೆ. ಆ ತಂಡಕ್ಕೆ ನಾಯಕನ ಅಗತ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ. ಹಾರ್ದಿಕ್ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಇದೇ ವೇಳೆ, ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ವರ್ಗಾವಣೆ ಮಾಡುವ ಕುರಿತು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳೂ ಕೇಳಿಬಂದಿವೆ. ಹಾರ್ದಿಕ್ ಬದಲಿಗೆ ಪಂಜಾಬ್ ತಂಡದ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ತಂಡಕ್ಕೆ ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ.