ಉತ್ತಮ ಆರೋಗ್ಯಕ್ಕಾಗಿ ನಿತ್ಯ ಗ್ರೀನ್ ಟೀ ಸೇವಿಸಬೇಕು ಎನ್ನಲು ಆರು ಕಾರಣಗಳು!

ರೋಗ ಮುಕ್ತ ಜೀವನ ಹಾಗೂ ನಿತ್ಯ ಹೆಚ್ಚೆಚ್ಚು ಚಟುವಟಿಕೆಯಿಂದಿರಲು ನಮ್ಮ ಆಹಾರ ಪದ್ಧತಿಯಲ್ಲಿ ಗ್ರೀನ್ ಟೀ ಸೇರ್ಪಡೆ ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರೋಗ ಮುಕ್ತ ಜೀವನ ಹಾಗೂ ನಿತ್ಯ ಹೆಚ್ಚೆಚ್ಚು ಚಟುವಟಿಕೆಯಿಂದಿರಲು ನಮ್ಮ ಆಹಾರ ಪದ್ಧತಿಯಲ್ಲಿ ಗ್ರೀನ್ ಟೀ ಸೇರ್ಪಡೆ ಅತ್ಯಗತ್ಯ ಎಂದು ವೈದ್ಯರು ಹೇಳುತ್ತಾರೆ.

ಸಾಮಾನ್ಯವಾಗಿ ನಿತ್ಯ ಬಳಕೆಯ ಸೊಪ್ಪು, ತರಕಾರಿ ಮತ್ತು ಇತರೆ ಆಹಾರ ಧಾನ್ಯಗಳಲ್ಲಿ ಪೌಷ್ಠಿಕಾಂಶಗಳು ದೊರೆಯುತ್ತವೆಯಾದರೂ, ಗ್ರೀನ್ ಟೀ ಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅಂಶ ದೊರೆಯುತ್ತದೆ. ಗ್ರೀನ್‌ ಟೀಯಲ್ಲಿರುವ ಇಜಿಸಿಜಿ (ಎಪಿ ಗ್ಯಾಲೋಕ್ಯಾಟಚಿನ್‌ ಗ್ಯಾಲೇಟ್‌), ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್‌ ಎಂದು ಹೆಸರಾಗಿದೆ. ಹಾಗಾಗಿ, ದಿನವೂ ಗ್ರೀನ್ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂಬುದು ವೈದ್ಯರ ಸಲಹೆಯಾಗಿದೆ.

ಬೇರೆಯ ಟೀ ಗಳಿಗೆ ಹೋಲಿಕೆ ಮಾಡಿದರೆ ಗ್ರೀನ್‌ ಟೀ, ಆರೋಗ್ಯ ದೃಷ್ಟಿಯಲ್ಲಿ ಉತ್ತಮ ಎನ್ನಿಸಿಕೊಳ್ಳುತ್ತದೆ. ಗ್ರೀನ್‌ ಟೀಯಲ್ಲಿ ಕ್ಯಾಫೀನ್‌ ಸಹ ಇರುವುದರಿಂದ, ಇದರ ಸೇವನೆ ದಣಿದ ದೇಹ ಮನಸ್ಸುಗಳಿಗೆ ಸಾಂತ್ವನ ನೀಡುತ್ತದೆ. ಖಿನ್ನತೆ ತಗ್ಗಿ ಚೇತರಿಕೆ, ಉತ್ಸಾಹಗಳು ಹೆಚ್ಚಾಗುತ್ತವೆ. ಗ್ರೀನ್‌ ಟೀ ನಿಯಮಿತ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನು ನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿ ಗ್ರೀನ್ ಟೀಯನ್ನು ಏಕೆ ಅಳವಡಿಸಿಕೊಳ್ಳಬೇಕು ಎಂದರೆ...
ಬೊಜ್ಜಿನ ಸಮಸ್ಯೆಗೆ ಪರಿಣಾಮಕಾರಿ
ಬದಲಾದ ಜೀವನ ಶೈಲಿ ಹಾಗೂ ಆಹಾರ ವ್ಯವಸ್ಥೆಯಿಂದಾಗಿ ಇಂದು ಬೊಜ್ಜಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಕೆಟ್ಟ ಬೊಜ್ಜನ್ನು ತೊಡೆದು ಹಾಕಲು ನೆರವಾಗುತ್ತದೆ. ಅಂತೆಯೇ ಗ್ರೀನ್ ಟೀಯಲ್ಲಿರುವ ಕ್ಯಾಟ್ಚಿನ್ಸ್ ಗಳು ಬೊಜ್ಜು ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತವೆ. ಕ್ಯಾಟ್ಚಿನ್ಸ್ ಗಳು ಕೊಲೆಸ್ಟರಾಲ್‌ ಅಂಶವನ್ನು ತಗ್ಗಿಸುವ ಕಾರಣ, ಗ್ರೀನ್ ಟೀ ಸೇವಿಸುವವರಲ್ಲಿ ಹೃದ್ರೋಗಗಳ ಸಂಭವ ಕಡಿಮೆ ಎನ್ನಬಹುದು.

ಆರೋಗ್ಯಕರ ಚರ್ಮಕ್ಕಾಗಿ
ಗ್ರೀನ್‌ ಟೀನಲ್ಲಿ ಕೆಲವು ಜೀವಸತ್ವಗಳೂ, ಖನಿಜ ಲವಣಗಳೂ ಸಾಕಷ್ಟು ಪ್ರಮಾಣದಲ್ಲಿರುವ ಕಾರಣ, ಅದೊಂದು ಉತ್ತಮ ಆಹಾರವೂ ಹೌದು. ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಗಳು ನಮ್ಮ ದೇಹ ಸೇರಿ, ನಮ್ಮ ದೇಹದ ಜೀವಕೋಶಗಳು ಸದಾ ಚಟುವಟಿಕಿಯಿಂದ ಇರುವಂತೆ ನೋಡಿಕೊಳ್ಳುತ್ತವೆ. ಈ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಆ್ಯಂಟಿ ಏಜಿಂಗ್ ಎಂದೂ ಕರೆಯುತ್ತಾರೆ. ಹಾಗಾಗಿ ಗ್ರೀನ್ ಟೀ ಸೇವನೆಯಿಂದ ನಮ್ಮ ಚರ್ಮ ಕಾಂತಿಯುಕ್ತವಾಗಿ, ವಯಸ್ಸಿನ ಲಕ್ಷಣಗಳು ಗೋಚರಿಸದಂತೆ ನೋಡಿಕೊಳ್ಳುತ್ತವೆ. ಪ್ರತಿನಿತ್ಯ ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರ ಹೋಗಿ, ಜೀವಸತ್ವಗಳು ಆರೋಗ್ಯಕರವಾಗಿರುತ್ತವೆ.

ದೈಹಿಕ ಮತ್ತು ಮಾನಸಿಕ ಆಯಾಸದಿಂದ ದೂರ
ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ವಯ ವಿಶ್ವಾದ್ಯಂತ 450 ಮಿಲಿಯನ್ ಜನರು ಒತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುವಂತೆ ಉತ್ತಡ ನಿವಾರಣೆಗೆ ಪಾಲಿಫಿನಾಲ್ಗಳು ಮಾರ್ಗ. ಗ್ರೀನ್ ಟೀಯಲ್ಲಿ ಈ  ಪಾಲಿಫಿನಾಲ್ಗಳು ಹೆಚ್ಚಾಗಿದ್ದು, ಗ್ರೀನ್ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆಯಾಸ ದೂರವಾಗುತ್ತದೆ. ಅಂತೆಯೇ ದೇಹಕ್ಕೆ ನವ ಚೈತನ್ಯ ನೀಡಿ, ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಂತೆಯೇ ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ನಮ್ಮನ್ನು ಸಕಾರಾತ್ಮಕ ಚಿಂತನೆಯತ್ತ ಮರಳಿಸುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಗ್ರೀನ್ ಟೀಯಲ್ಲಿ ಪಾಲಿಫಿನಾಲ್ಗಳು ಮತ್ತು ಫ್ಲವನಾಯ್ಡ್ ಗಳ ಅಂಶ ಹೆಚ್ಚಾಗಿದ್ದು, ಇವು ನಮ್ಮ ದೇಹದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ಗ್ರೀನ್ ಟೀಯಲ್ಲಿರುವ ಫೈಟೊಕಾನ್ಸ್ಟಿಯೆಂಟ್ ಗಳು ಆಂಟಿಮೈಕ್ರೊಬಿಯಲ್ ಏಜೆಂಟ್ ಗಳಂತೆ ಕೆಲಸ ಮಾಡಿ ದೇಹದಲ್ಲಿರುವ ಸೋಂಕುಗಳ ವಿರುದ್ಧ ಹೋರಾಡುತ್ತದೆ.

ಕಫ ನಿವಾರಣೆಗೆ ಸಹಕಾರಿ
ಗ್ರೀನ್ ಟೀಯಲ್ಲಿರುವ  ಪಾಲಿಫಿನಾಲ್ಗಳು ದೇಹದಲ್ಲಿನ ಸೋಂಕಿನ ವಿರುದ್ಧ ಹೋರಾಡಿ, ದೇಹದಲ್ಲಿ ಕಫ ಶೇಖರಣೆಯಾಗದಂತೆ ತಡೆಯುತ್ತದೆ. ಕಫದ ಸಮಸ್ಯೆಯಿಂದ ಬಳಲುತ್ತಿರುವವರು ಗ್ರೀನ್ ಟೀ ಸೊಪ್ಪನ್ನು ನೀರಿಗೆ ಹಾಕಿ ಕುದಿಸಿ ಅದಕ್ಕೆ ಕೊಂಚ ಜೇನುತುಪ್ಪವನ್ನು ಸೇರಿಸಿ ಕುಡಿದ ಕೆಲವೇ ಹೊತ್ತಿನಲ್ಲಿ ಕಫದ ಸಮಸ್ಯೆ ಕಡಿಮೆಯಾಗುವುದನ್ನು ಗಮನಿಸಬಹುದಾಗಿದೆ.

ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ
ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ಗಳು, ಆ್ಯಂಟಿ ಆಕ್ಸಿಡೆಂಟ್ ಗಳು ಹಾಗೂ ಫ್ಲವನಾಯ್ಡ್ ಗಳ ಅಂಶ ದೇಹದಲ್ಲಿನ ಕಲ್ಮಷಗಳನ್ನು ಹೊರ ಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸಲು ಸಹಾಕಾರಿಯಾಗುತ್ತದೆ. ಅಂತೆತೇ ಗ್ರೀನ್ ಟೀ ದೇಹದ ಮೆಟಬಾಲಿಸಂ ಪ್ರಕ್ರಿಯೆ (ಚಯಾಪಚಯ ಕ್ರಿಯೆ)ಯನ್ನು ಹೆಚ್ಚಿಸಿ, ಯಕೃತ್ತು ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಬೊಜ್ಜನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಆ ಮೂಲಕ ದೇಹದ ತೂಕ ಸಮತೋಲನದಲ್ಲಿ ಪರಿಣಾಮಕಾರಿಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com