ಸ್ಲಿಮ್ ಆಗಲು ಬಯಸುವಿರಾ? ಹಾಗಿದ್ದರೆ, ಕಲರ್‌ ಕಲರ್‌ ಆಹಾರ ತಿನ್ನಿ, Rainbow diet ಅನುಸರಿಸಿ...

ಇತ್ತೀಚಿನ ಕೆಲವು ವರ್ಷಗಳಿಂದ ಜನರು ಮಾಡುವ ಡಯೆಟ್ ತನ್ನ ಮೂಲಾರ್ಥವನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ದೇಹವನ್ನು ಅತಿಯಾಗಿ ಅಗ್ನಿಪರೀಕ್ಷೆಗೆ ಒಳಪಡಿಸುವುದೇ ಡಯೆಟ್ ಅಲ್ಲ. ರುಚಿಯಿಲ್ಲದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದೇ ಡಯೆಟ್ ಅಲ್ಲ. ಶರೀರವನ್ನು ಗುರುತರವಾಗಿ ದಂಡಿಸುವುದು, ಕಠಿಣವಾದ ತಪಸ್ಸಿನಂತೆ ಆಹಾರದಿಂದ ಆಗಾಗ ದೂರವಿರುವುದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇತ್ತೀಚಿನ ಕೆಲವು ವರ್ಷಗಳಿಂದ ಜನರು ಮಾಡುವ ಡಯೆಟ್ ತನ್ನ ಮೂಲಾರ್ಥವನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ದೇಹವನ್ನು ಅತಿಯಾಗಿ ಅಗ್ನಿಪರೀಕ್ಷೆಗೆ ಒಳಪಡಿಸುವುದೇ ಡಯೆಟ್ ಅಲ್ಲ. ರುಚಿಯಿಲ್ಲದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದೇ ಡಯೆಟ್ ಅಲ್ಲ. ಶರೀರವನ್ನು ಗುರುತರವಾಗಿ ದಂಡಿಸುವುದು, ಕಠಿಣವಾದ ತಪಸ್ಸಿನಂತೆ ಆಹಾರದಿಂದ ಆಗಾಗ ದೂರವಿರುವುದು, ಸ್ಥಳೀಯವಲ್ಲದ ಆಹಾರವನ್ನು ರೂಢಿಕೊಳ್ಳುವುದು, ಸ್ವಲ್ಪವೇ ಪ್ರಮಾಣದ ಆಹಾರವನ್ನು ದಿನದಲ್ಲಿ ಆಗಾಗ ಸೇವಿಸುವುದು, ಬರಿಯ ಒಣ ಆಹಾರದಿಂದಲೇ ಹೊಟ್ಟೆ ತುಂಬಿಸಿಕೊಳ್ಳುವುದು, ವ್ಯಾಯಾಮದ ಹೆಸರಿನಲ್ಲಿ ಪ್ರೊಟೀನ್ ಅಂಶದ ಆಹಾರಗಳನ್ನೇ ಅತಿಯಾಗಿ ಅವಲಂಬಿಸುವುದು,

ಕಾರ್ಬೋಹೈಡ್ರೇಟ್ ಅಧಿಕವಾಗಿರುವ ಅಕ್ಕಿ, ಗೋಧಿ ಮೊದಲಾದ ಅವಲಂಬಿತ ಮೂಲ ಆಹಾರಗಳನ್ನು ತಾತ್ಸಾರ ಮಾಡುವುದು, ಕೇವಲ ಕೆಲವೇ ತರಕಾರಿಗಳನ್ನು ಮಾತ್ರ ಪ್ರತಿನಿತ್ಯ ಬಳಸುವುದು, ಹಣ್ಣಿನ ರಸಗಳನ್ನೇ ನೆಚ್ಚಿಕೊಂಡು ದಿನಕಳೆಯುವುದು-ಇಂತಹ ವಿಪರೀತ ಅಭ್ಯಾಸಗಳೇ ಡಯೆಟ್ ಆಗುವುದಿಲ್ಲ,

ದೇಹತೂಕ ಸ್ವಲ್ಪವೇ ಹೆಚ್ಚಾದರೂ ಈ ಎಲ್ಲಾ ರೀತಿಯಲ್ಲಿ ದೇಹವನ್ನು ಸತಾಯಿಸಿದರೆ ತಾತ್ಕಾಲಿಕ ಲಾಭವೇನೋ ಆಗಬಹುದು. ಆದರೆ ಅನತಿ ದೂರದಲ್ಲಿ ಸಮಸ್ಯೆಗಳು ಪ್ರಾರಂಭವಾಗುವುದನ್ನು ನಾವಿಂದು ನೋಡುತ್ತಿದ್ದೇವೆ. ಒಮ್ಮೆಗೆ ತೆಳ್ಳಗೆ ಶರೀರ ಪ್ರಾಪ್ತವಾದರೂ ಮಾಮೂಲಿನಂತೆ ಆಹಾರ ಸೇವನೆ ಪ್ರಾರಂಭಿಸುತ್ತಿದ್ದಂತೆ ಮತ್ತೆ ಮೊದಲಿಗಿಂತಲೂ ಹೆಚ್ಚಿನ ದೇಹತೂಕದಿಂದ ಒದ್ದಾಡುವುದನ್ನು ಕಾಣುತ್ತಿದ್ದೇವೆ.

ಶರೀರಕ್ಕೆ ಹಿತವಾಗುವ, ಸಮಪ್ರಮಾಣದ, ರುಚಿಕರವಾದ, ಪಥ್ಯಕರವಾದ, ನಮಗೆ ಒಗ್ಗುವ, ಪ್ರತಿದಿನ ಬಳಸಲು ಯೋಗ್ಯವಾದ ಆಹಾರವೇ ಡಯೆಟ್ ಎನಿಸಿಕೊಳ್ಳುತ್ತದೆ ಹೊರತು ಜನರು ಅಂದುಕೊಂಡಂತೆ ಆಹಾರ ಬಿಡುವುದೇ ಡಯೆಟ್ ಅಲ್ಲ. ಅದೆಷ್ಟೋ ಜನರು ನಾನು ರಾತ್ರಿ ಊಟ ಬಿಟ್ಟಿದ್ದೇನೆ. ಎರಡು ಚಪಾತಿ, ಪಲ್ಯ ಮಾತ್ರವೇ ತಿನ್ನುತ್ತಿದ್ದೇನೆ ಎನ್ನುತ್ತಾರೆ. ಬಹಳ ಲಘುವಾದ ಆಹಾರ ಸೇವಿಸುತ್ತಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ಕಟ್ಟುನಿಟ್ಟಾಗಿ ಡಯಟ್ ಫಾಲೋ ಮಾಡುತ್ತಿದ್ದೇನೆಂದು ಹೇಳುತ್ತಾರೆ. ಆದರೆ, ತಿನ್ನದೇ ಇರುವುದು ಡಯಟ್ ಆಗುವುದಿಲ್ಲ. ದೇಹದ ಆರೋಗ್ಯದ ಜೊತೆಗೆ ತೂಕವನ್ನೂ ಸರಿಯಾಗಿ ಮಾಡುವ ರೀತಿಯಲ್ಲಿ ಆಹಾರ ಸೇವನೆ ಮಾಡುವುದು ಡಯೆಟ್ ಆಗುತ್ತಿದೆ.

ಸಂಗ್ರಹ ಚಿತ್ರ
ಒತ್ತಡವಷ್ಟೇ ಅಲ್ಲ, ನಿದ್ರಾಹೀನತೆಗೆ ಒಟಿಟಿ, ಸಾಮಾಜಿಕ ಜಾಲತಾಣಗಳೂ ಕಾರಣ!

ಇತ್ತೀಚಿನ ದಿನಗಳಲ್ಲಿ ರೈನ್‌ಬೋ ಡಯೆಟ್‌ ಭಾರೀ ಚಾಲ್ತಿಯಲ್ಲಿದೆ. ರೈನ್‌ಬೋ ಡಯಟ್‌ ಅಂದರೆ, ಈ ಆಹಾರ ಪದ್ಧತಿ ಕಲರ್‌ ಫುಲ್ ಆಗಿರುತ್ತದೆ. ಅಂದರೆ, ನಾನಾ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುವ ಡಯಟ್ ಇದಾಗಿದೆ.

ಈ ಡಯಟ್ ನಲ್ಲಿ ಹಣ್ಣುಗಳು ಮತ್ತು ತರಕಾರಿಗಳು ವಿವಿಧ ಬಣ್ಣಗಳಲ್ಲಿರುತ್ತವೆ. ಪ್ರತಿಯೊಂದೂ ವಿಭಿನ್ನ ಪೌಷ್ಟಿಕಾಂಶವನ್ನು ಸೂಚಿಸುತ್ತದೆ. ವಿವಿಧ ಬಣ್ಣದ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ಪ್ರಮುಖ ಪೋಷಕಾಂಶಗಳನ್ನು ಪಡೆಯಬಹುದು. ವರ್ಣರಂಜಿತವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದನ್ನು ಸೇವಿಸಿದಾಗ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ತರಕಾರಿ, ಹಣ್ಣುಗಳನ್ನು ತಿಂದರೆ ಹಸಿವು ಹೆಚ್ಚಾಗುವುದಿಲ್ಲ.

ಬಣ್ಣಬಣ್ಣದ ತರಕಾರಿ, ಹಣ್ಣುಗಳಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಈ ಆಹಾರಗಳು ಆರೋಗ್ಯಕರ ಕರುಳಿನ ಮೈಕ್ರೋಬಯೋಟಾವನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಪಾಲಕ್, ಕ್ಯಾರೆಟ್ ಮತ್ತು ಸ್ಟ್ರಾಬೆರಿಗಳನ್ನು ಒಳಗೊಂಡಿರುವ ಕಾಮನಬಿಲ್ಲಿನ ಬಣ್ಣದ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯವು ಸುಧಾರಿಸುತ್ತದೆ.

ಪೊಟ್ಯಾಸಿಯಮ್, ವಿಟಮಿನ್ ಸಿ, ಮತ್ತು ಫ್ಲೇವನಾಯ್ಡ್​ಗಳು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ವರ್ಣರಂಜಿತ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಹಲವಾರು ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಆದರೆ, ಇವುಗಳಲ್ಲಿ ನೀರಿನ ಅಂಶ ಮತ್ತು ಫೈಬರ್ ಹೇರಳವಾಗಿರುತ್ತದೆ. ಇದರಿಂದ ಹೊಟ್ಟೆ ಬೇಗ ತುಂಬುತ್ತದೆ, ದೇಹದಲ್ಲಿ ಕೊಬ್ಬು ಕೂಡ ಸಂಗ್ರಹವಾಗುವುದಿಲ್ಲ.

ಸಂಗ್ರಹ ಚಿತ್ರ
2022 ರಲ್ಲಿ ಭಾರತದ 12.5 ಮಿಲಿಯನ್ ಮಕ್ಕಳು, ಹರೆಯದವರಿಗೆ ಸ್ಥೂಲಕಾಯ!

ರೈನ್‌ಬೋ ಡಯಟ್‌ನ ಆಹಾರಗಳು ಯಾವುವು?:

ಕೆಂಪು

ಕಾಮನಬಿಲ್ಲಿನ ಕೆಂಪು ಬಣ್ಣಕ್ಕೆ ಯಾವ ತರಕಾರಿ/ ಹಣ್ಣನ್ನು ಆರಿಸುತ್ತೀರಿ ಯೋಚಿಸಿ. ಟೊಮೇಟೋ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣು ಇತ್ಯಾದಿ ಇತ್ಯಾದಿಗಳ ಪಟ್ಟಿ ಮಾಡಿ.

ಪ್ರಕೃತಿಯಲ್ಲಿ ಸಿಗುವ ತರಕಾರಿ ಹಣ್ಣುಗಳ ಪೈಕಿ ಯಾವುದು ಕೆಂಪು ಬಣ್ಣದಲ್ಲಿಯೇ ಲಭ್ಯವಾಗುತ್ತದೆ ಯೋಚಿಸಿ ನೋಡಿ. ಅದರಂತೆ ಯಾವುದಾದರೊಂದು ಕೆಂಪು ಬಣ್ಣದ ಹಣ್ಣೋ ತರಕಾರಿಯನ್ನೋ ಆಯ್ಕೆ ಮಾಡಿದರಾಯಿತು. ಆ ದಿನದ ಕೆಂಪು ಬಣ್ಣ ಲಭ್ಯವಾದಂತೆ. ಕೆಂಪು ಬಣ್ಣದ ಇವುಗಳಲ್ಲಿರುವ ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ ಎಂಬುದು ನಂಬಿಕೆ.

ಕೇಸರಿ

ಕೇಸರಿ ಅಥವಾ ಕಿತ್ತಳೆ ಬಣ್ಣ ಯಾವೆಲ್ಲ ತರಕಾರಿ ಹಣ್ಣುಗಳಲ್ಲಿವೆ ಎಂದು ಯೋಚಿಸಿ ನೋಡಿ. ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್‌, ಕ್ಯಾರೆಟ್‌ ಇತ್ಯಾದಿಗಳು ಸಿಕ್ಕಾವು. ಕೇಸರಿ ಬಣ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯಂತೆ.

ಹಳದಿ

ಹಳದಿ ಬಣ್ಣ ಕಣ್ಣಿಗೆ ಒಳ್ಳೆಯದಂತೆ. ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಹಳದಿ ಬಣ್ಣವನ್ನು ಧ್ವನಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಇವು ಒಳ್ಳೆಯದು.

ಹಸಿರು

ಹಸಿರು ಬಣ್ಣಕ್ಕೆ ಹೇರಳವಾಗಿ ಹಣ್ಣು ತರಕಾರಿಗಳು ಸಿಕ್ಕಾವು. ಮುಖ್ಯವಾಗಿ ಬ್ರೊಕೋಲಿ, ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಈ ವಿಭಾಗಕ್ಕೆ ಬರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಇವೆಲ್ಲ ಒಳ್ಳೆಯದು.

ನೀಲಿ ಹಾಗೂ ನೇರಳೆ

ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಗಳಿಗೆ ಇವು ಒಳ್ಳೆಯದು.

ಬಿಳಿ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಹಾಡು ಹೇಳಿದರೆ ಸಾಲದು. ಬಿಳಿಯ ಬಣ್ಣದ ತರಕಾರಿ ಹಣ್ಣುಗಳನ್ನೂ ಸೇವಿಸಬೇಕು. ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಇತ್ಯಾದಿಗಳನ್ನು ಈ ವಿಭಾಗದಡಿ ಸೇರಿಸಿಕೊಂಡು ಆಹಾರದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು. ಈ ಬಣ್ಣದ ಆಹಾರ ಹಲ್ಲು ಹಾಗೂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com