

Kitchen Hacks: ಬೆಳಗಿನ ಉಪಹಾರಕ್ಕೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ದೋಸೆ ಇದ್ದರೆ ಆ ದಿನದ ಆರಂಭವೇ ಅದ್ಭುತ. ಆದರೆ ತವಾ ಮೇಲೆ ಹಿಟ್ಟು ಹಾಕಿದ ತಕ್ಷಣ ಅಂಟಿಕೊಂಡು ಕಿತ್ತು ಹೋದರೆ ತಿಂಡಿ ಮಾಡುವ ಆಸಕ್ತಿಯೇ ಹೊರಟುಹೋಗುತ್ತದೆ. ಅನೇಕರಿಗೆ ದೋಸೆ ಗರಿಗರಿಯಾಗಿ ಬಾರದೆ ಮೆತ್ತಗಾಗುವುದು ಅಥವಾ ಹಂಚಿಗೆ ಅಂಟಿಕೊಳ್ಳುವುದು ದೊಡ್ಡ ತಲೆನೋವಾಗಿರುತ್ತದೆ. ಇನ್ನು ಮುಂದೆ ಈ ಚಿಂತೆ ಬೇಡ. ನಿಮ್ಮ ಅಡುಗೆಮನೆಯಲ್ಲಿಯೇ ಸುಲಭವಾಗಿ ತವಾ ಸರಿಪಡಿಸಿಕೊಂಡು ಹೋಟೆಲ್ ಶೈಲಿಯ ಪರ್ಫೆಕ್ಟ್ ದೋಸೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಪರಿಹಾರಗಳು.
ಹಳೆಯ ತವಾವನ್ನು ಸೀಸನ್ ಮಾಡಿ:
ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವಾ ಆಗಾಗ ಬಳಸುವುದರಿಂದ ಅದರ ಪದರ ಹೋಗುತ್ತದೆ. ಹಾಗಾಗಿ ವಾರಕ್ಕೆ ಒಮ್ಮೆ ತವಾವನ್ನು ಚೆನ್ನಾಗಿ ಬಿಸಿ ಮಾಡಿ. ನಂತರ ಅರ್ಧ ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಅದಕ್ಕೆ ಎಣ್ಣೆ ಅದ್ದಿ ತವಾವನ್ನು ಉಜ್ಜಿ. ಈರುಳ್ಳಿಯಲ್ಲಿರುವ ನೈಸರ್ಗಿಕ ಅಂಶ ತವಾಕ್ಕೆ ಲೇಪನ ಮಾಡಿ ಅಂಟದಂತೆ ಮಾಡುತ್ತದೆ. ನಂತರ ಒಂದು ಚಮಚ ಎಣ್ಣೆ ಹಾಕಿ 2 ನಿಮಿಷ ಬಿಸಿ ಮಾಡಿ ಒರೆಸಿ.
ಹಿಟ್ಟಿನ ಹದ ಸರಿಯಾಗಿದ್ಯಾ ನೋಡಿ:
ದೋಸೆ ಹಿಟ್ಟು ತುಂಬಾ ತೆಳುವಾಗಿದ್ದರೆ ಅಥವಾ ತುಂಬಾ ದಪ್ಪವಾಗಿದ್ದರೆ ಅಂಟುತ್ತದೆ. ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಬೇಕು. ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಸಕ್ಕರೆ ಸೇರಿಸಿದರೆ ದೋಸೆ ಗರಿಗರಿಯಾಗಿ ಬೇಗ ಬರುತ್ತದೆ. ಹಿಟ್ಟು ಹುಳಿಯಾಗಿದ್ದರೆ ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸಿ.
ತವಾವನ್ನು ಸರಿಯಾದ ಉರಿಯಲ್ಲಿ ಬಿಸಿ ಮಾಡಿ:
ತವಾ ತಣ್ಣಗಿದ್ದರೆ ದೋಸೆ ಅಂಟುತ್ತದೆ. ತುಂಬಾ ಬಿಸಿಯಾಗಿದ್ದರೆ ಕಪ್ಪಾಗುತ್ತದೆ. ಮಧ್ಯಮ ಉರಿಯಲ್ಲಿ ತವಾವನ್ನು 2 ನಿಮಿಷ ಬಿಸಿ ಮಾಡಿ. ನಂತರ ಒಂದು ಈರುಳ್ಳಿ ತುಂಡಿನಿಂದ ಒರೆಸಿ. ದೋಸೆ ಹಾಕುವ ಮೊದಲು ತವಾಕ್ಕೆ ಸ್ವಲ್ಪ ನೀರು ಚಿಮುಕಿಸಿ. ಚರ್ ಎಂದು ಶಬ್ದ ಬಂದರೆ ತವಾ ರೆಡಿ ಎಂದು ಅರ್ಥ.
ಎಣ್ಣೆ ಹಾಕುವ ಸರಿಯಾದ ವಿಧಾನ:
ದೋಸೆ ಹಾಕಿದ ತಕ್ಷಣ ಎಣ್ಣೆ ಹಾಕಬೇಡಿ. ದೋಸೆ ಅಂಚು ಸ್ವಲ್ಪ ಬಿಟ್ಟುಕೊಂಡ ನಂತರ ಅಂಚಿನಲ್ಲಿ 3 ರಿಂದ 4 ಹನಿ ಎಣ್ಣೆ ಹಾಕಿ. ನಂತರ ಮುಚ್ಚಳ ಮುಚ್ಚಿ 30 ಸೆಕೆಂಡ್ ಬಿಡಿ. ಸ್ಪಾತುಲಾದಿಂದ ಅಂಚು ಬಿಡಿಸಿ ತಿರುಗಿಸಿ. ನಾನ್ ಸ್ಟಿಕ್ ತವಾ ಆಗಿದ್ದರೆ ಕಡಿಮೆ ಎಣ್ಣೆ ಸಾಕು.
ತವಾ ತೊಳೆಯುವಾಗ ಗಮನಿಸಿ:
ಬಳಸಿದ ತಕ್ಷಣ ಬಿಸಿ ತವಾವನ್ನು ನೀರಿನಲ್ಲಿ ಹಾಕಬೇಡಿ. ತಣ್ಣಗಾದ ನಂತರ ಮಾತ್ರ ತೊಳೆಯಿರಿ. ಸ್ಕ್ರಬ್ ಬಳಸಿ ಗಟ್ಟಿಯಾಗಿ ಉಜ್ಜಬೇಡಿ. ತೊಳೆದ ನಂತರ ಒಣಗಿಸಿ ಸ್ವಲ್ಪ ಎಣ್ಣೆ ಸವರಿ ಇಡಿ. ಇದರಿಂದ ತವಾ ತುಕ್ಕು ಹಿಡಿಯುವುದಿಲ್ಲ ಮತ್ತು ಮುಂದಿನ ಬಾರಿ ದೋಸೆ ಅಂಟುವುದಿಲ್ಲ.