ಕಣ್ಣಿಗೆ ಹಚ್ಚುವ Kajal ಕೇವಲ ಅಲಂಕಾರಕ್ಕಲ್ಲ; ಇಂದು ಮೇಕಪ್‌ನ ಭಾಗವಾಗಿರುವ ಕಾಜಲ್, ಒಂದು ಕಾಲದಲ್ಲಿ ಕಣ್ಣಿನ ಔಷಧವಾಗಿತ್ತು!

ಪ್ರಾಚೀನ ಈಜಿಪ್ಟ್‌ನ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಎಲ್ಲೆಡೆ ಮರಳುಗಾಡು, ಬಿಸಿಲು, ಧೂಳು ಮತ್ತು ಮರಳಿನ ಕಣಗಳು ಸಾಮಾನ್ಯವಾಗಿದ್ದವು. ಜೊತೆಗೆ ನೈಲ್ ನದಿಯ ವಾರ್ಷಿಕ ಪ್ರವಾಹದಿಂದ ತೇವಾಂಶ ಹೆಚ್ಚಾಗಿ, ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿತ್ತು.
File photo
ಸಂಗ್ರಹ ಚಿತ್ರ
Updated on

ಇಂದು ಕಾಜಲ್ ಅಥವಾ ಕಣ್ಣಿನ ಅಂಜನವನ್ನು ಹೆಚ್ಚಾಗಿ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಆದರೆ, ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‌ನಲ್ಲಿ (Ancient Egypt) ಕಾಜಲ್ ಕೇವಲ ಸೌಂದರ್ಯ ಹೆಚ್ಚಿಸುವ ಸಾಧನವಾಗಿರಲಿಲ್ಲ, ಕಣ್ಣಿನ ಆರೋಗ್ಯ ಕಾಪಾಡುವ ಔಷಧವಾಗಿಯೂ ಬಳಕೆಯಲ್ಲಿತ್ತು ಎಂಬುದು ನಿಮಗೆ ಗೊತ್ತೇ?

ಫರೋಗಳು, ರಾಜಮನೆತನದವರು, ಸಾಮಾನ್ಯ ಜನರು ಮಾತ್ರವಲ್ಲದೆ ಹೋರಸ್ (Horus) ಮತ್ತು ರಾ (Ra) ದೇವರುಗಳ ಚಿತ್ರಗಳಲ್ಲೂ ಕಪ್ಪು ಕಾಜಲ್ ಕಾಣಸಿಗುತ್ತದೆ. ಇದು ಆ ಕಾಲದ ಸಂಸ್ಕೃತಿ, ನಂಬಿಕೆ ಮತ್ತು ವೈದ್ಯಕೀಯ ಜ್ಞಾನದ ಅದ್ಭುತ ಸಂಯೋಜನೆಯಾಗಿತ್ತು.

ಕಾಜಲ್ ಯಾಕೆ ಅಷ್ಟು ಮುಖ್ಯವಾಗಿತ್ತು?

ಪ್ರಾಚೀನ ಈಜಿಪ್ಟ್‌ನ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಎಲ್ಲೆಡೆ ಮರಳುಗಾಡು, ಬಿಸಿಲು, ಧೂಳು ಮತ್ತು ಮರಳಿನ ಕಣಗಳು ಸಾಮಾನ್ಯವಾಗಿದ್ದವು. ಜೊತೆಗೆ ನೈಲ್ ನದಿಯ ವಾರ್ಷಿಕ ಪ್ರವಾಹದಿಂದ ತೇವಾಂಶ ಹೆಚ್ಚಾಗಿ, ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿತ್ತು.

ಇದರಿಂದ ಕಣ್ಣಿನ ಸೋಂಕು, ಉರಿ, ಕಿರಿಕಿರಿ ಹಾಗೂ ವಿವಿಧ ಕಣ್ಣಿನ ಕಾಯಿಲೆಗಳು ಸಾಮಾನ್ಯ ಸಮಸ್ಯೆಯಾಗಿದ್ದವು. ಈ ಕಾರಣಕ್ಕಾಗಿಯೇ ಈಜಿಪ್ಟಿನ ಜನರು ಪ್ರತಿದಿನ ಕಣ್ಣಿನ ಸುತ್ತ ಕಾಜಲ್ ಹಚ್ಚುವ ಅಭ್ಯಾಸ ಬೆಳೆಸಿಕೊಂಡಿದ್ದರು.

File photo
ಸಂಗ್ರಹ ಚಿತ್ರ

ಇದು ಕಣ್ಣಿನ ಸುತ್ತ ಒಂದು ರಕ್ಷಣಾತ್ಮಕ ಪದರವನ್ನು ರೂಪಿಸುತ್ತಿತ್ತು. ಇದರಿಂದ ಧೂಳು ಮತ್ತು ಮರಳಿನ ಕಣಗಳು ಕಣ್ಣಿಗೆ ನೇರವಾಗಿ ಬೀಳುವುದು ಕಡಿಮೆಯಾಗುವುದು, ತೀವ್ರ ಸೂರ್ಯನ ಬೆಳಕಿನ ಹೊಳಪು (Glare) ಕಡಿಮೆಯಾಗಿ, ಕಣ್ಣಿಗೆ ತಂಪಾದ ಅನುಭವ ನೀಡುತ್ತಿತ್ತು. ಅಲ್ಲದೆ, ಕಣ್ಣಿನ ಸುತ್ತ ರೋಗ ಹರಡುವ ಕೀಟಗಳು ಸುಲಭವಾಗಿ ಬರುತ್ತಿರಲಿಲ್ಲ. ಹೀಗಾಗಿ ಕಾಜಲ್ ಸೌಂದರ್ಯವರ್ಧಕ ಮಾತ್ರವಲ್ಲ, ದೈನಂದಿನ ಆರೋಗ್ಯ ರಕ್ಷಣೆಯ ಭಾಗವಾಗಿತ್ತು.

ಕಾಜಲ್‌ನಲ್ಲಿ ಅಡಗಿತ್ತು ಬ್ಯಾಕ್ಟೀರಿಯಾ ವಿರೋಧಿ ಶಕ್ತಿ

ಪ್ರಾಚೀನ ಈಜಿಪ್ಟಿನ ಕಾಜಲ್‌ನ ಪ್ರಮುಖ ಅಂಶ ಗಲೇನಾ (Galena) ಎಂಬ ಖನಿಜ. ಇದು ಸೀಸದ ಸಲ್ಫೈಡ್ (Lead Sulfide – PbS) ಅನ್ನು ಒಳಗೊಂಡಿರುವ ಗಾಢ ಕಪ್ಪು ಬಣ್ಣದ ಖನಿಜವಾಗಿದೆ.

ಇತ್ತೀಚಿನ ಕೆಲವು ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಆ ಕಾಲದ ಕೆಲವು ಕಾಜಲ್ ಮಾದರಿಗಳಲ್ಲಿದ್ದ ರಾಸಾಯನಿಕ ಸಂಯುಕ್ತಗಳು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸಿ, ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

File photo
Kitchen Hacks: ಮಳೆಗಾಲದಲ್ಲಿ ಉಪ್ಪು ಗಟ್ಟಿಯಾಗುತ್ತಾ? ಸಕ್ಕರೆ ಕರಗದಂತೆ ತಡೆಯಲು ಇಲ್ಲಿದೆ ಸಿಂಪಲ್ ಹಾಕ್ಸ್! ಏನು ಗೊತ್ತಾ?

ಕಾಜಲ್ ತಯಾರಿಸಲು ಬಳಸುತ್ತಿದ್ದ ವಿಶೇಷ ಪದಾರ್ಥಗಳು

ಆ ಕಾಲದ ಕಾಜಲ್ ಕೇವಲ ಒಂದೇ ಪದಾರ್ಥದಿಂದ ತಯಾರಾಗುತ್ತಿರಲಿಲ್ಲ. ಇದರಲ್ಲಿ ಹಲವು ನೈಸರ್ಗಿಕ ಹಾಗೂ ಅಮೂಲ್ಯ ಪದಾರ್ಥಗಳನ್ನು ಬಳಸಲಾಗುತ್ತಿತ್ತು.

ಗಲೇನಾ (Galena), ಆಂಟಿಮನಿ ಪುಡಿ, ಅಪರೂಪದ ರತ್ನಗಳು, ಚಿನ್ನ ಮತ್ತು ಬೆಳ್ಳಿಯ ತೆಳುವಾದ ಹಾಳೆಗಳು, ಕೇಸರಿ (Saffron) ದಳ, ಸುಗಂಧ ದ್ರವ್ಯ, ಹವಳದ ಪುಡಿ, ಸೋಂಪು, ಬೇವಿನ ಎಲೆ ಸೇರಿ ಇನ್ನೂ ಹಲವು ವಸ್ತುಗಳನ್ನು ಸೇರಿಸಿ ಎಣ್ಣೆ, ಪ್ರಾಣಿಗಳ ಕೊಬ್ಬು, ಹಾಲು, ಗಮ್ ಅಥವಾ ನೀರಿನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ತಯಾರಿಸಲಾಗುತ್ತಿತ್ತು.

ಶ್ರೀಮಂತರಿಗೆ ಅತ್ಯುತ್ತಮ ಕಾಜಲ್, ಬಡವರಿಗೆ ಬೂದಿ

ಪ್ರಾಚೀನ ಈಜಿಪ್ಟ್‌ನಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಕಾಜಲ್ ಬಳಸುತ್ತಿದ್ದರು. ಆದರೆ ಉತ್ತಮ ಗುಣಮಟ್ಟದ ಕಾಜಲ್ ಬಳಸುವುದು ಶ್ರೀಮಂತಿಕೆಯ ಸಂಕೇತವಾಗಿತ್ತು.

ದುಬಾರಿ ಪದಾರ್ಥಗಳನ್ನು ಖರೀದಿಸಲು ಸಾಧ್ಯವಾಗದವರು ಬೆಂಕಿಯ ಬೂದಿ ಅಥವಾ ಸರಳ ಖನಿಜಗಳಿಂದ ತಯಾರಿಸಿದ ಕಾಜಲ್ ಬಳಸುತ್ತಿದ್ದರು.

ಸಾವಿನ ನಂತರವೂ ಕಾಜಲ್‌ಗೆ ಮಹತ್ವ

ಈಜಿಪ್ಟಿನ ಜನರ ನಂಬಿಕೆಯ ಪ್ರಕಾರ ಮರಣಾನಂತರದ ಜೀವನವೂ ಅಷ್ಟೇ ಮಹತ್ವದ್ದಾಗಿತ್ತು. ಆದ್ದರಿಂದ ಮೃತದೇಹದೊಂದಿಗೆ ಕಾಜಲ್ ಇಡುವ ಡಬ್ಬಿ, ಕಾಜಲ್ ಹಚ್ಚುವ ಸಲಕರಣೆಗಳು ಹಾಗೂ ಇತರ ಸೌಂದರ್ಯವರ್ಧಕ ವಸ್ತುಗಳನ್ನು ಸಮಾಧಿಯಲ್ಲಿ ಇರಿಸಲಾಗುತ್ತಿತ್ತು. ಇದರಿಂದ ಕಾಜಲ್ ಅವರಿಗೆ ಕೇವಲ ಅಲಂಕಾರದ ವಸ್ತುವಲ್ಲ, ಆಧ್ಯಾತ್ಮಿಕ ಮಹತ್ವ ಹೊಂದಿದ್ದದ್ದೂ ಸ್ಪಷ್ಟವಾಗುತ್ತದೆ.

File photo
ಸಂಗ್ರಹ ಚಿತ್ರ

ಈಜಿಪ್ಟ್‌ನಿಂದ ಜಗತ್ತಿನ ಹಲವು ಭಾಗಗಳಿಗೆ ಹರಡಿದ ಕಾಜಲ್

ಕಾಜಲ್ ಬಳಕೆ ಕೇವಲ ಈಜಿಪ್ಟ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ನಂತರ ಇದು ಉತ್ತರ ಆಫ್ರಿಕಾ, ಮಧ್ಯ ಏಷ್ಯಾ, ಪೂರ್ವ ಏಷ್ಯಾ ಹೀಗೆ ಅನೇಕ ಭಾಗಗಳಿಗೆ ಹರಡಿತು.

ಬೇರೆ ಬೇರೆ ನಾಗರಿಕತೆಗಳಲ್ಲಿ ಇದಕ್ಕೆ ವಿಭಿನ್ನ ಹೆಸರುಗಳಿದ್ದವು

ಅರಬ್ ಸಂಸ್ಕೃತಿಯಲ್ಲಿ – ಕೋಹ್ಲ್ (Kohl), ಗ್ರೀಕ್–ರೋಮನ್ ನಾಗರಿಕತೆಯಲ್ಲಿ – ಕೊಲ್ಲುರಿಯನ್ (Kollurion), ಇರಾನ್ ಹಾಗೂ ಭಾರತ–ಪಾಕಿಸ್ತಾನ ಪ್ರದೇಶದಲ್ಲಿ – ಸುರ್ಮಾ (Surma) ಇಂದಿಗೂ 'ಸುರ್ಮಾ' ಮತ್ತು 'ಕಾಜಲ್' ಬಳಕೆಯ ಸಂಪ್ರದಾಯ ಹಲವು ದೇಶಗಳಲ್ಲಿ ಮುಂದುವರಿದಿದೆ.

ಸೌಂದರ್ಯವರ್ಧಕವಷ್ಟೇ ಅಲ್ಲ, ಆರೋಗ್ಯ ರಕ್ಷಕವೂ ಆಗಿದ್ದ ಕಾಜಲ್

ಇಂದು ಕಾಜಲ್ ಹೆಚ್ಚಾಗಿ ಫ್ಯಾಷನ್ ಮತ್ತು ಸೌಂದರ್ಯದ ಭಾಗವಾಗಿದೆ. ಆದರೆ, ಅದರ ಇತಿಹಾಸ ನೋಡಿದರೆ, ಇದು ಒಂದು ಕಾಲದಲ್ಲಿ ಧೂಳು, ಬಿಸಿಲು, ಕೀಟಗಳು ಹಾಗೂ ಕಣ್ಣಿನ ಸೋಂಕುಗಳಿಂದ ರಕ್ಷಿಸುವ ದೈನಂದಿನ ಆರೋಗ್ಯ ಸಾಧನವಾಗಿತ್ತು.

ಸಾವಿರಾರು ವರ್ಷಗಳ ಹಿಂದೆಯೇ ಪ್ರಾಚೀನ ಈಜಿಪ್ಟಿನ ಜನರು ಪ್ರಕೃತಿಯಲ್ಲಿರುವ ಖನಿಜಗಳು ಮತ್ತು ಔಷಧೀಯ ಸಸ್ಯಗಳನ್ನು ಬಳಸಿಕೊಂಡು ಸೌಂದರ್ಯ ಮತ್ತು ಆರೋಗ್ಯವನ್ನು ಒಟ್ಟಿಗೆ ಕಾಪಾಡಿಕೊಳ್ಳುವ ವಿಶಿಷ್ಟ ಜ್ಞಾನವನ್ನು ಹೊಂದಿದ್ದರು ಎಂಬುದಕ್ಕೆ ಕೋಹ್ಲ್ (ಕಾಜಲ್) ಅತ್ಯುತ್ತಮ ಉದಾಹರಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com