
ಕೋಲಾರ ಮರಳು ಮಾಫಿಯಾವನ್ನು ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ತಹಬದಿಗೆ ತಂದಿದ್ದ ದಕ್ಷ ಐಎಎಸ್ ಅಧಿಕಾರಿ ಡಿಕೆರವಿ ಬೆಂಗಳೂರಿನ ತಮ್ಮ ಫ್ಲಾಟ್ ನಲ್ಲಿ ಮಾರ್ಚ್ 16ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆಯಲ್ಲ, ಸಮಾಜ ವಿದ್ರೋಹ ಶಕ್ತಿಗಳು ರವಿ ಅವರನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸುತ್ತಿವೆ ಎಂದು ಹೇಳಲಾಗಿತ್ತಾದರೂ, ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಇದು ಆತ್ಮಹತ್ಯೆ ಎಂದು ವರದಿ ನೀಡಿದ್ದರು.
ಕೋಲಾರದಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ಡಿಕೆ ರವಿ ಅವರು ಮಾರ್ಚ್ 13ರಂದು ಸಾಮಾನ್ಯದಂತೆಯೇ ಕೋರಮಂಗಲದಲ್ಲಿರುವ ತಮ್ಮ ಫ್ಲಾಟ್ ಗೆ ತೆರಳಿದ್ದರು. ತಮ್ಮ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡ ರವಿ ಸಂಜೆಯಾದರೂ ಬಾಗಿಲು ತೆರೆದಿರಲಿಲ್ಲ. ಸಂಜೆ ಅವರ ಪತ್ನಿ ಬಂದು ಬಾಗಿಲು ತೆಗೆದು ನೋಡಿದಾಗ ರವಿ ಅವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು.
ರವಿ ಅವರು ಫ್ಲಾಟ್ ಗೆ ಬಂದ ಬಳಿಕ ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದ ಇಬ್ಬರು ವ್ಯಕ್ತಿಗಳು ರವಿ ಅವರ ಫ್ಲಾಟ್ ಗೆ ತೆರಳಿದ್ದರು ಎಂದು ಭದ್ರತಾ ಸಿಬ್ಬಂದಿಗಳು ತಿಳಿಸಿದ್ದರು. ಇದು ಪ್ರಕರಣವನ್ನು ಅನುಮಾನದಿಂದ ನೋಡಲು ಕಾರಣವಾಗಿತ್ತು. ಅಲ್ಲದೆ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದ ರವಿ ಅವರು, ಕೆಲವೇ ದಿನಗಳಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಂಸ್ಥೆಗಳ ಮೇಲೆ ದಾಳಿ ಮಾಡುವವರಿದ್ದರು. ಅಲ್ಲದೆ ಇದಕ್ಕೂ ಮೊದಲು ತಮ್ಮ ದಕ್ಷತೆಯಿಂದ ರವಿ ಅವರು ಕೋಲಾರದಲ್ಲಿಯೂ ಹಲವು ರಾಜಕಾರಣಿಗಳ ದ್ವೇಷ ಕಟ್ಟಿಕೊಂಡಿದ್ದರು. ಈ ಎಲ್ಲ ಅಂಶಗಳ ರವಿ ಅವರ ಆತ್ಮಹತ್ಯೆ ಪ್ರಕರಣವನ್ನು ಶಂಕೆಯಿಂದ ನೋಡುವಂತಾಗಿತ್ತು.
ಇದಲ್ಲದೆ ರವಿ ಅವರು ಮತ್ತೋರ್ವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಮಹಿಳಾ ಅಧಿಕಾರಿ ಪ್ರೀತಿ ನಿರಾಕರಿಸಿದ್ದಕ್ಕೇ ಮತ್ತು ತಮ್ಮ ಕೌಟುಂಬಿಕ ಕಾರಣಗಳಿಂದಾಗಿ ರವಿ ಅವರು ಆತ್ಮಹತ್ಯೆಗೆ ಶರಣಾದರು ಎಂಬ ವಾದಗಳು ಕೂಡ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಮಾಡುತ್ತಿತ್ತು. ಅಂತಿಮವಾಗಿ ರಾಜ್ಯಮಾತ್ರವಲ್ಲದೇ ದೇಶದ ಗಮನ ಸೆಳೆದಿದ್ದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಅಂತಿಮವಾಗಿ ರವಿ ಅವರದ್ದು ಆತ್ಮಹತ್ಯೆ ಎಂದು ವರದಿ ನೀಡಿದರು. ಕೇವಲ ಸಿಬಿಐ ಮಾತ್ರವಲ್ಲದೇ ರವಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಕೂಡ ವರದಿ ನೀಡಿ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿತ್ತು.
Advertisement