ದೇಶ

ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಬೇಡ: ಅನಂತಕುಮಾರ್

Published On :

ನವದೆಹಲಿ: ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಿರುವುದರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರವು ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಮಣಿದು ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಹೂರಡಿಸಿದೆ ಎಂದು ಲೋಕಸಭೆಯಲ್ಲಿ ಶುಕ್ರವಾರ ಟೀಕಿಸಿದರು.
ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸುವುದಕ್ಕೆ ಕರ್ನಾಟಕದ ವಿರೋಧವಿತ್ತು. ಆದರೂ, ಕರ್ನಾಟಕದ ಅಹವಾಲನ್ನು ಆಲಿಸದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ರಾವಿ-ಬಿಯಾಸ್ ನ್ಯಾಯಾಧಿಕರಣದ ಅಂತಿಮ ಐತೀರ್ಪು ಹೊರ ಬಿದ್ದು 20 ವರ್ಷಗಳು ಕಳೆದಿದ್ದರೂ ಕೇಂದ್ರ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಆದರೆ, ಕರ್ನಾಟಕದ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಿದೆ ಎಂದೂ ಟೀಕಿಸಿದ್ದಾರೆ.
ಜಲ ಮಂಡಳಿ ರಚನೆ ಬೇಡ: ಕಾವೇರಿ ನ್ಯಾಯಾಧಿಕರಣದ ಶಿಫಾರಸಿನಂತೆ ಕೇಂದ್ರ ಸರ್ಕಾರ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಬಾರದು ಎಂದು ಒತ್ತಾಯಿಸಿದ ಅನಂತಕುಮಾರ್, ಅಂತಾರಾಜ್ಯ ನದಿ ವ್ಯಾಜ್ಯ ಕಾಯ್ದೆ 6 ಎ (7) ಅಡಿ ಮಂಡಳಿ ರಚಿಸುವುದು ಕೇಂದ್ರ ಸರ್ಕಾರದ ವಿವೇಚನೆಗೆ ಸೇರಿದ್ದು ಎಂದು ಹೇಳಲಾಗಿದೆ ಎಂದರು. ಕಾವೇರಿ ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸದನದಲ್ಲಿ ಬಿಚ್ಚಿಟ್ಟ ಅನಂತಕುಮಾರ್, ಕಾವೇರಿ ಶೇ.44 ರಷ್ಟು ಕರ್ನಾಟಕ ರಾಜ್ಯದಲ್ಲಿ ಹರಿದು ಹೋದರೂ ನೀರು ಹಂಚಿಕೆಯಲ್ಲಿ ಶೇ.37ರಷ್ಟು ನೀಡಲಾಗಿದೆ. ಶೇ.54ರಷ್ಟು ತಮಿಳುನಾಡಿನಲ್ಲಿ ಹರಿದರೂ ಶೇ.59 ರಷ್ಟು ನೀರು ಹಂಚಿಕೆ ಮಾಡಿ ತಾರತಮ್ಯ ಎಸಗಲಾಗಿದೆ. ಕರ್ನಾಟಕ 465 ಟಿಎಂಸಿ ನೀರಿಗಾಗಿ ಬೇಡಿಕೆ ಇಟ್ಟಿದ್ದರೂ ಕೇವಲ 270 ಟಿಎಂಸಿ ನೀರು ಹಂಚಲಾಗಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿದೆ ಅನ್ಯಾಯ ಎಸಗಿದೆ. ಬೆಂಗಳೂರಿನ ಅಗತ್ಯ 20 ಟಿಎಂಸಿ ನೀರು. ಆದರೂ, ನ್ಯಾಯಾಧಿಕರಣ ಮೂರನೇ ಒಂದು ಭಾಗಕ್ಕೆ ಮಾತ್ರ ಕಾವೇರಿ ನೀರು ಹಂಚಿದೆ. ಈಗಾಗಲೇ ಅನ್ಯಾಯವಾದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಿದರೆ ಮತ್ತಷ್ಟು ಅನ್ಯಾಯವಾಗುತ್ತದೆ ಎಂದು ಸದನದ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.