ದೇಶ

ಕೊಹಿನೂರ್ ಬಗ್ಗೆ...

ಕೊಹಿನೂರ್ ಬಗ್ಗೆ...
Published On :

ಒಂದು ಕಾಲದಲ್ಲಿ ಭಾರತದ ಅಮೂಲ್ಯ ಸ್ವತ್ತಾಗಿದ್ದ ಕೊಹಿನೂರ್ ವಜ್ರವು ಈಗ ಬ್ರಿಟನ್ ರಾಣಿಯ ಕಿರೀಟದಲ್ಲಿದೆ. ಅದನ್ನು ವಾಪಸ್ ಭಾರತಕ್ಕೆ ತರಬೇಕೆಂಬುದು ಹಲವರ ಒತ್ತಾಯ. ಆದರೆ, ಭಾರತ ಪ್ರವಾಸದಲ್ಲಿದ್ದ ಬ್ರಿಟನ್ ಪ್ರಧಾನಿ ಕೆಮೆರಾನ್ ಅವರು ಕೊಹಿನೂರ್ ನಮ್ಮದು, ಅದನ್ನು ವಾಪಸ್ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿನ್ನೆಲೆಯಲ್ಲಿ ಕೊಹಿನೂರ್ ವಜ್ರದ ಬಗ್ಗೆ ಒಂದಿಷ್ಟು ಮಾಹಿತಿ.

ಏನಿದು ಕೊಹಿನೂರ್?
ಕೊಹಿನೂರ್ ಎಂದರೆ 106 ಕ್ಯಾರೆಟ್‌ನ ವಜ್ರ. ಇದು ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ವಜ್ರವಾಗಿತ್ತು. ಕೊಹಿನೂರ್ ಎಂದರೆ ಪರ್ಷಿಯನ್ ಭಾಷೆಯಲ್ಲಿ 'ಬೆಳಕಿನ ಶಿಖರ'(ಮೌಂಟನ್ ಆಫ್ ಲೈಟ್) ಎಂದರ್ಥ. ಅದಕ್ಕೆ ಕೊಹಿನೂರ್ ಎಂಬ ಹೆಸರಿಟ್ಟಿದ್ದು 1739ರಲ್ಲಿ ಈ ಅಮೂಲ್ಯ ವಜ್ರವನ್ನು ಹೊಂದಿದ್ದ ನಾದೇರ್ ಷಾ. ಇದಕ್ಕೂ ಮೊದಲು ಇದನ್ನು ಈ ಹೆಸರಿನಿಂದ ಕರೆಯುತ್ತಿರಲಿಲ್ಲ.

ಬಾಬರ್ ಕೈಯಲ್ಲಿ
ದಂತಕಥೆಯಲ್ಲಿ ಹೇಳುವ ಪ್ರಕಾರ ಕೊಹಿನೂರ್ ವಜ್ರವು 5 ಸಾವಿರ ವರ್ಷಗಳಷ್ಟು ಹಳೆಯದ್ದು. ಆದರೆ, ಕೊಹಿನೂರ್ ಬಗ್ಗೆ ದೊರಕಿರುವ ದಾಖಲೆಯ ಪ್ರಕಾರ, 1526ರಲ್ಲಿ ಆಕ್ರಮಣಕಾರ ಬಾಬರ್ ಬಳಿ ಈ ವಜ್ರವಿತ್ತು. 13ನೇ ಶತಮಾನದಲ್ಲಿ ಗ್ವಾಲಿಯರ್ ರಾಜಾ ಕೊಹಿನೂರ್ ವಜ್ರವನ್ನು ಹೊಂದಿದ್ದ ಎಂದು ಬಾಬರ್ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾನೆ. ವಿವಿಧ ಭಾರತೀಯ ಹಾಗೂ ಪರ್ಷಿಯನ್ ರಾಜರು ಈ ವಜ್ರಕ್ಕಾಗಿ ಭಾರಿ ಹೋರಾಟ ನಡೆಸಿದ್ದರು ಎಂಬುದನ್ನೂ ಬಾಬರ್ ವಿವರಿಸಿದ್ದಾನೆ.

ಬ್ರಿಟನ್‌ಗೆ ಹೋಗಿದ್ದು
1849ರಲ್ಲಿ ಬ್ರಿಟಿಷರು ಪಂಜಾಬ್ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ಕೊಹಿನೂರ್ ಅವರ ಕಣ್ಣಿಗೆ ಬಿತ್ತು. 1851ರಲ್ಲಿ ಇದು ಬ್ರಿಟನ್ ರಾಣಿ ವಿಕ್ಟೋರಿಯಾ ಪಾಲಾಯಿತು. ಆಗ ಕೊಹಿನೂರ್ 186 ಕ್ಯಾರೆಟ್ ಇತ್ತು. ನಂತರ ಅದನ್ನು ಕತ್ತರಿಸಲಾಯಿತು.

ಪುರುಷರಿಗೆ ಶಾಪ
ಕೊಹಿನೂರ್ ತನ್ನೊಂದಿಗೆ ಶಾಪವನ್ನೂ ಹೊತ್ತೊಯ್ಯುತ್ತಿದೆ ಎಂಬ ನಂಬಿಕೆ ಈಗಲೂ ಇದೆ. ಅದನ್ನು ಪುರುಷರು ಹೊಂದಿದ್ದರೆ ಅವರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ, ಸೋಲನುಭವಿಸುತ್ತಾರೆ ಎನ್ನಲಾಗಿದೆ. ಆದರೆ, ಮಹಿಳೆಯರು ಮತ್ತು ದೇವರಿಗೆ ಮಾತ್ರ ಕೊಹಿನೂರ್ ವಜ್ರದಿಂದ ಯಾವುದೇ ಸೋಲಾಗದು ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ಈ ವಜ್ರವನ್ನು ಬ್ರಿಟನ್‌ನ ರಾಣಿಯರು ಮಾತ್ರವೇ ಧರಿಸಿದ್ದಾರೆ. ರಾಣಿ ವಿಕ್ಟೋರಿಯಾ, ಅಲೆಕ್ಸಾಂಡ್ರಾ, ಮೇರಿ, ಎಲಿಜಬೆತ್ ಈವರೆಗೆ ಇದನ್ನು ಧರಿಸಿದವರು.

ರಾಣಿಯ ಕಿರೀಟದಲ್ಲಿ
ಪ್ರಸ್ತುತ ಕೊಹಿನೂರ್ ವಜ್ರವು ಬ್ರಿಟನ್ ರಾಣಿಯ ಕಿರೀಟದಲ್ಲಿ ಇತರೆ 2 ಸಾವಿರ ವಜ್ರಗಳೊಂದಿಗೆ ಸ್ಥಾನ ಪಡೆದುಕೊಂಡಿದೆ. 186 ಕ್ಯಾರೆಟ್ ಇದ್ದ ವಜ್ರವನ್ನು ಬ್ರಿಟನ್ ರಾಜಕುಮಾರ ಆಲ್ಪರ್ಟ್ ಸೂಚನೆಯಂತೆ ಕತ್ತರಿಸಿ 108.93 ಕ್ಯಾರೆಟ್‌ಗೆ ಇಳಿಸಲಾಗಿದೆ. ಇದನ್ನು ಕತ್ತರಿಸಿ ಅಂಡಾಕೃತಿಗೆ ತರಲು 38 ದಿನಗಳು ಹಿಡಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.