ದೇಶ

ಸಂಸತ್‌ನಲ್ಲೂ ಸ್ಫೋಟದ್ದೇ ಸದ್ದು

ಸಂಸತ್‌ನಲ್ಲೂ ಸ್ಫೋಟದ್ದೇ ಸದ್ದು
Published On :

ನವದೆಹಲಿ: ಹೈದರಾಬಾದ್ ಸ್ಫೋಟವು ಶುಕ್ರವಾರ ಸಂಸತ್‌ನ ಎರಡೂ ಸದನಗಳಲ್ಲಿ ಗದ್ದಲ ಸೃಷ್ಟಿಸಿತು. ಉಗ್ರರ ದಾಳಿಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ನಿರಂತರ ವೈಫಲ್ಯವನ್ನು ಖಂಡಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಮಾತ್ರವಲ್ಲದೇ ಯುಪಿಎ ಮಿತ್ರಪಕ್ಷಗಳೂ ಗದ್ದಲದಲ್ಲಿ ತೊಡಗಿದವು.
 2 ದಿನಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ದಾಳಿ ಬಗ್ಗೆ ಮಾಹಿತಿಯಿದ್ದರೂ ಅದನ್ನು ತಡೆಯಲೇಕೆ ಪ್ರಯತ್ನಿಸಲಿಲ್ಲ ಎಂದು ಪ್ರತಿಪಕ್ಷಗಳು ಹಾಗೂ ಮಿತ್ರಪಕ್ಷಗಳಾದ ಎಸ್‌ಪಿ, ಡಿಎಂಕೆ ಸರ್ಕಾರದ ವಿರುದ್ಧ ಹರಿಹಾಯ್ದವು. ಗದ್ದಲ ಹೆಚ್ಚಿದ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮುಂದೂಡಲಾಯಿತು.

ರೂವಾರಿಗಳನ್ನು ಸುಮ್ಮನೆ ಬಿಡಲ್ಲ
ಹೈದರಾಬಾದ್ ಸ್ಫೋಟದ ರೂವಾರಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ತಿಳಿಸಿದ್ದಾರೆ. ಈ ಕುರಿತು ಸಂಸತ್ತಿನ ಉಭಯ ಸದನಗಳಿಗೆ ಮಾಹಿತಿ ನೀಡಿದ ಅವರು, ಅವಳಿ ಸ್ಫೋಟದಲ್ಲಿ ಐಇಡಿಗಳನ್ನು ಬಳಸಿರುವುದು ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಹೈದರಾಬಾದ್ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೈದರಾಬಾದ್ ಸೇರಿ ದೇಶದ 5 ನಗರಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆ ಎನ್ನುವ ಕುರಿತು ಸರ್ಕಾರಕ್ಕೆ ಮುನ್ಸೂಚನೆ ಇತ್ತು. ಈ ಮಾಹಿತಿಯನ್ನು ಆಯಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ರವಾನಿಸಲಾಗಿತ್ತು ಎಂದು ಹೇಳಿದ್ದಾರೆ. ಈ ನಡುವೆ, ಶಿಂದೆ ಶುಕ್ರವಾರ ಹೈದರಾಬಾದ್‌ಗೆ ತೆರಳಿ ಘಟನಾ ಸ್ಥಳದ ಸ್ಥಳದ ಪರಿಶೀಲನೆ ನಡೆಸಿದರು.

ಶಿಂದೆಯದ್ದು ಮಾಮೂಲಿ ಹೇಳಿಕೆ: ಸುಷ್ಮಾ
ಹೈದರಾಬಾದ್ ಸ್ಫೋಟಕ್ಕೆ ಸಂಬಂಧಿಸಿ ಗೃಹ ಸಚಿವ ಶಿಂದೆ ನೀಡಿದ ಹೇಳಿಕೆಯನ್ನು 'ಮಾಮೂಲಿ' ಎಂದಿದ್ದಾರೆ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್. ಕೇಂದ್ರ ಸರ್ಕಾರ ಎಚ್ಚರಿಕೆ ನೀಡದಿದ್ದರೂ ಕೂಡ ಅಫ್ಜಲ್ ಗಲ್ಲಿಗೇರಿಸಿದ ಬಳಿಕ ಎಲ್ಲ ರಾಜ್ಯಗಳೂ ಅಲರ್ಟ್ ಆಗಿ ಇದ್ದವು. ಉಗ್ರರ ದಾಳಿ ಬಗ್ಗೆ ಮಾಹಿತಿಯಿತ್ತು ಎಂದಾದರೆ ಸ್ಫೋಟ ನಡೆಯುವವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನು ಮಾಡುತ್ತಿದ್ದವು ಎಂದೂ ಸುಷ್ಮಾ ಪ್ರಶ್ನಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಡೀ ದೇಶ, ರಾಜಕೀಯ ಪಕ್ಷಗಳು ಒಂದಾಗಬೇಕಾಗಿದೆ ಎಂದೂ ಅವರು ನುಡಿದರು.

ಅಲರ್ಟ್‌ನಲ್ಲಿ ಬೀದಿ ಸಂಖ್ಯೆಯೂ ನೀಡಬೇಕಿತ್ತೇ?
ಗುಪ್ತಚರ ಸಂಸ್ಥೆಗಳು ಅಲರ್ಟ್ ನೀಡುವಾಗ ಯಾವ ಬೀದಿಯಲ್ಲಿ ಉಗ್ರರು ಬಾಂಬಿಡುತ್ತಾರೆ ಎಂಬ ಮಾಹಿತಿಯನ್ನೂ ನೀಡಬೇಕಿತ್ತೇ? ಹೀಗೆಂದು ಪ್ರಶ್ನಿಸಿದ್ದು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು. ದಾಳಿಯಾಗಬಹುದಾದ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಹೆಸರೂ ಇತ್ತು. ಆದರೆ, ಎಲ್ಲಿಗೆ ಟಾರ್ಗೆಟ್ ಮಾಡುತ್ತಾರೆಂದು ಗೊತ್ತಿರಲಿಲ್ಲ ಎಂಬ ಶಿಂದೆ ಹೇಳಿಕೆಗೆ ನಾಯ್ಡು ಈ ರೀತಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರವು ಉಗ್ರ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೂ ನಾಯ್ಡು ಸಂಸತ್‌ನ ಹೊರಗೆ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ತನಿಖೆಗೆ ನೆರವು
ಹೈದರಾಬಾದ್ ಸ್ಫೋಟದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೆರಿಕ  ಭಾರತ ಕೋರಿದರೆ ತನಿಖೆಗೆ ನೆರವು ನೀಡುವುದಾಗಿ ಹೇಳಿದೆ. ಇದೇ ವೇಳೆ, ಪಾಕಿಸ್ತಾನವೂ ಸ್ಫೋಟವನ್ನು ಖಂಡಿಸಿದೆ. ಎಲ್ಲ ರೀತಿಯ ಭಯೋತ್ಪಾದನೆಯು ಅಂತಾರಾಷ್ಟ್ರೀಯ ಶಾಂತಿಗೆ ಬೆದರಿಕೆ ಒಡ್ಡುವಂಥದ್ದು ಎಂದು ಪಾಕ್ ಹೇಳಿದೆ. ಜತೆಗೆ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ಹೈದರಾಬಾದ್ ಸ್ಫೋಟವನ್ನು ಖಂಡಿಸಿವೆ.

ಸಿಸಿಟಿವಿ ವೈರ್ ಕಟ್
ಸ್ಫೋಟ ನಡೆಸುವ 4 ದಿನ ಮೊದಲೇ ಉಗ್ರರು ದಿಲ್‌ಸುಖ್‌ನಗರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯ ತಂತಿ ಕಡಿದು ಹಾಕಿದ್ದರು ಎನ್ನುತ್ತವೆ ಮೂಲಗಳು. ಸ್ಫೋಟದ ಕುರಿತು ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಉಗ್ರರು ಸಿಸಿಟಿವಿ ತಂತಿ ಕಡಿದುಹಾಕಿದ್ದರು. ದಾಳಿಯ ಕುರಿತು ಮೊದಲೇ ಎಚ್ಚರಿಕೆ ನೀಡಲಾಗಿದ್ದರೂ ಪೊಲೀಸರು ಮಾತ್ರ ಈ ಕುರಿತು ಗಮನ ಹರಿಸಲೇ ಇಲ್ಲ. ಘಟನೆ ಬಳಿಕ ಸಿಸಿಟಿವಿ ಪರಿಶೀಲಿಸಿದಾಗಲೇ ಈ ವಿಚಾರ ಬೆಳಕಿಗೆ ಬಂತು.

ಎಟಿಎಸ್ ಆಗಮನ
ಪುಣೆ ಸ್ಫೋಟಕ್ಕೂ ಹೈದರಾಬಾದ್ ಸ್ಫೋಟಕ್ಕೂ ಸಾಮ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ     ನಿಗ್ರಹ ದಳ (ಎಟಿಎಸ್)ದ ತಂಡವೊಂದು ಶುಕ್ರವಾರ ಹೈದರಾಬಾದ್‌ಗೆ ಬಂದಿಳಿದಿದೆ. ಈ ನಡುವೆ, ಎನ್‌ಐಎ ತಂಡವು ಮಹಾರಾಷ್ಟ್ರದ ಔರಂಗಾಬಾದ್, ಬೀಡ್ ಮತ್ತು ನಾಂದೇಡ್‌ನಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಿದೆ.

ಗಲ್ಲಿಗೆ ಸಂಬಂಧ ಇಲ್ಲ
ಹೈದರಾಬಾದ್ ಸ್ಫೋಟಕ್ಕೂ ಅಫ್ಜಲ್‌ಗುರು ಗಲ್ಲಿಗೂ ಯಾವುದೇ ಸಂಬಂಧ ಇಲ್ಲ. ಈ ದಾಳಿ ಕುರಿತು ಅಫ್ಜಲ್‌ಗುರು ಗಲ್ಲುಗೇರಿಸುವ ಮೊದಲೇ ಯೋಜನೆ ರೂಪಿಸಲಾಗಿತ್ತು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಇದೇ ವೇಳೆ, ಸ್ಫೋಟದಲ್ಲಿ ಬಳಸಲಾದ ಬಾಂಬ್‌ಗಳಲ್ಲಿ ಸ್ಫೋಟಕವಾಗಿ ಅಮೋನಿಯಂ ನೈಟ್ರೇಟ್, ಯೂರಿಯಾ, ಪೆಟ್ರೋಲ್, ಟೈಮರ್ ಬಳಸಲಾಗಿದೆ. ಇದೇ ವೇಳೆ ವಿಧಿವಿಜ್ಞಾನ ತಂಡಕ್ಕೆ ಘಟನಾ ಸ್ಥಳದಲ್ಲಿ ಆರ್‌ಡಿಎಕ್ಸ್ ಅಂಶ ಕೂಡ ಪತ್ತೆಯಾಗಿದೆ.

ಸಾಯಿ ಮಂದಿರ ಟಾರ್ಗೆಟ್ ಆಗಿತ್ತು!
ಉಗ್ರರ ಗುರಿ ದಿಲ್‌ಸುಖ್‌ನಗರದಲ್ಲಿರುವ ಸಾಯಿಬಾಬಾ ಮಂದಿರ ಆಗಿತ್ತೇ? ಹೌದೆನ್ನುತ್ತವೆ ಮೂಲಗಳು. ಯೋಜನೆ ಪ್ರಕಾರ ಉಗ್ರರು ಜನನಿಬಿಡ ಸಾಯಿಬಾಬಾ ಮಂದಿರದಲ್ಲಿ ಬಾಂಬ್ ಸ್ಫೋಟಿಸಬೇಕಿತ್ತು. ಆದರೆ, ಕೊನೇ ಗಳಿಗೆಯಲ್ಲಿ ಅವರು ಈ ಯೋಜನೆ ಕೈ ಬಿಟ್ಟರು. ಇದಕ್ಕೆ ಮುಖ್ಯಕಾರಣ ಹೈದರಾಬಾದ್ ಪೊಲೀಸ್ ಕಮಿಷನರ್ ಅನುರಾಗ್ ಶರ್ಮಾ ಅವರ ದೇಗುಲ ಭೇಟಿ. ಗುರುವಾರ ಸಂಜೆ ಅನುರಾಗ್ ಶರ್ಮಾ ಅವರು ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಉಗ್ರರು ತಮ್ಮ ಯೋಜನೆ ಬದಲಾಯಿಸಿದರು. ಒಂದು ವೇಳೆ ಸಾಯಿಬಾಬಾ ಮಂದಿರದಲ್ಲಿ ಸ್ಫೋಟ ಸಂಭವಿಸುತ್ತಿದ್ದರೆ ಸಾವಿನ ಸಂಖ್ಯೆ 50 ದಾಟುವ ಸಾಧ್ಯತೆ ಇತ್ತು. ಮಂದಿರದ ಮೇಲೆ ದಾಳಿ ನಡೆಸಲು ಉಗ್ರರು ಐದು ತಿಂಗಳ ಹಿಂದೆಯೇ ಸಿದ್ಧತೆ ನಡೆಸಿದ್ದರು. ಆದರೆ, ಉಗ್ರರಿಗೆ ಈ ದೇವಸ್ಥಾನದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಇತ್ತು ಎನ್ನುವುದು ಗೊತ್ತಿತ್ತು. ಹಾಗಾಗಿ ಈ ಯೋಜನೆಯೇನಾದರೂ ವಿಫಲವಾದರೆ ಪರ್ಯಾಯ ಯೋಜನೆಯನ್ನೂ ಒಳಗೊಂಡಿದ್ದರು ಎನ್ನುತ್ತಾರೆ ಪೊಲೀಸರು.
2002ರಲ್ಲೂ...: ಸಾಯಿಬಾಬಾ ಮಂದಿರ 2002ರಲ್ಲೂ ದಾಳಿಗೆ ಒಳಗಾಗಿತ್ತು. ಆಗ ನಡೆದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದರು. ಸ್ಫೋಟಕದ ಗುಣಮಟ್ಟ ಕಳಪೆಮಟ್ಟದ್ದಾಗಿದ್ದರಿಂದ ಆಗ ಹೆಚ್ಚಿನ ಜೀವಹಾನಿ ಸಂಭವಿಸಿರಲಿಲ್ಲ.

ಹಫೀಜ್ ವಿರುದ್ಧ ಹೇಳಿಕೆ: ನಖ್ವಿಗೆ ಬೆದರಿಕೆ ಕರೆ
ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಇತರರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ನನಗೆ ವಿದೇಶದಿಂದ ಬೆದರಿಕೆ ಕರೆ ಬಂದಿತ್ತು ಎಂದು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಫೆ.16ರಂದು ಈ ಕರೆ ಬಂದಿದ್ದು ಸಯೀದ್ ವಿರುದ್ಧ ಮಾತನಾಡಿದರೆ ಹುಷಾರ್. ಇನ್ನು ಮುಂದೆ ಇಂಥದ್ದು ನಡೆದರೆ ತಕ್ಕ ಪರಿಣಾಮ ಎದುರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎಂದೂ ನಖ್ವಿ ತಿಳಿಸಿದ್ದಾರೆ. ಮಾರನೇ ದಿನವೇ ಕೇಂದ್ರ ಗೃಹ ಸಚಿವ ಶಿಂದೆ ಹಾಗೂ ಗೃಹ ಕಾರ್ಯದರ್ಶಿಗೆ ಪತ್ರ ಬರೆದು, ಉಗ್ರ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಂತೆ ಕೋರಿದ್ದೆ ಎಂದೂ ನಖ್ವಿ ಹೇಳಿದ್ದಾರೆ. ಇದೇ ವೇಳೆ, ನಖ್ವಿ ಅವರು ದೂರು ನೀಡಿದ 5 ದಿನಗಳ ಬಳಿಕ ಅಂದರೆ ಶುಕ್ರವಾರ ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಗುಪ್ತಚರ ದಳಕ್ಕೆ ಆದೇಶ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.