

ನವದೆಹಲಿ: ಕಳೆದ ಮೂರು ದಿನಗಳಿಂದ ಕಲಾಪವನ್ನು ಬಲಿ ತೆಗೆದುಕೊಳ್ಳುತ್ತಿರುವ ಮರು ಮತಾಂತರ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರತಿಪಕ್ಷಗಳ ವಾಗ್ದಾಳಿಯನ್ನು ಎದುರಿಸಿದರು.
ರಾಜ್ಯಸಭಾ ಕಲಾಪ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಹೆಚ್ಚುತ್ತಿರುವ ಕೋಮುಗಲಭೆ ಮತ್ತು ಮರು ಮತಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದವು. ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದರು. ಈ ವೇಳೆ ಪ್ರಧಾನಿ ಸದನದಲ್ಲಿ ಹಾಜರಿದ್ದರು.
ಮತಾಂತರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ ಈ ಬಗ್ಗೆ ಕೇಂದ್ರ ಗೃಹ ಸಚಿವರು ಪ್ರತಿಕ್ರಿಯೆ ನೀಡುತ್ತಾರೆ. ಚರ್ಚೆಯ ವೇಳೆ ಯಾರು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಿರ್ಧರಿಸುವುದು ಸರಿಯಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಸರ್ಕಾರ ತಮ್ಮ ಬೇಡಿಕೆಗೆ ಒಪ್ಪಿಕೊಳ್ಳದೇ ಪ್ರತಿಷ್ಠೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶಾರ್ಮ ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಲೋಕಸಭಾ ಕಲಾಪ ಸುಗಮವಾಗಿ ನಡೆಯುತ್ತಿದೆ. ಆದರೆ ರಾಜ್ಯಸಭೆಯಲ್ಲ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೆಲವರ ಪ್ರತಿಷ್ಠೆ ಕಾರಣ ಹೊರತು, ಸರ್ಕಾರದ ಪ್ರತಿಷ್ಠೆ ಅಲ್ಲ ಎಂದರು.