ಕಾನೂನು ತಿಳಿಯದೆ 'ಬಾಹುಬಲಿ'ಯಂತೆ ವರ್ತಿಸಬೇಡಿ: ಬಿಹಾರ ಸೆಷನ್ಸ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ನವದೆಹಲಿ: ನ್ಯಾಯಾಲಯದ ಆದೇಶವಿದ್ದರೂ, ಎಫ್ಐಆರ್ (FIR) ದಾಖಲಿಸದ ಪೊಲೀಸ್ ಅಧಿಕಾರಿಯೊಬ್ಬರನ್ನು ದೋಷಿ ಎಂದು ತೀರ್ಪು ನೀಡಿದ ಬಿಹಾರದ ಸೆಷನ್ಸ್ ನ್ಯಾಯಾಧೀಶರೊಬ್ಬರ ನಡವಳಿಕೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ. ನ್ಯಾಯಾಂಗ ಅಧಿಕಾರಗಳನ್ನು ಚಲಾಯಿಸುವಾಗ 'ಬಾಹುಬಲಿಯಂತೆ ವರ್ತಿಸಬೇಡಿ' ಎಂದು ಎಚ್ಚರಿಕೆ ನೀಡಿದ್ದು, ಅಲ್ಲದೆ, ಅವರನ್ನು 'ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ'ಗೆ ತರಬೇತಿಗಾಗಿ ಕಳುಹಿಸುವಂತೆಯೂ ನ್ಯಾಯಪೀಠ ಸಲಹೆ ನೀಡಿದೆ.
ತಮ್ಮ ನಿರ್ಧಾರಕ್ಕೆ ತಡೆ ನೀಡಿದ ಪಾಟ್ನಾ ಹೈಕೋರ್ಟ್ ಆದೇಶದ ವಿರುದ್ಧ ಸದರಿ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಸೆಷನ್ಸ್ ನ್ಯಾಯಾಧೀಶರಿಗೆ ಕಾನೂನಿನ ಬಗ್ಗೆ ಇರುವ ಮೂಲಭೂತ ತಿಳುವಳಿಕೆ ಮತ್ತು ನ್ಯಾಯಾಲಯದ ಕಲಾಪದ ವೇಳೆ ಅವರ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತು.
'ಕಾನೂನಿನ ಬಗ್ಗೆ ನಿಮಗಿರುವ ತಿಳುವಳಿಕೆ ನಿಜವಾಗಿಯೂ, ತೀವ್ರ ನಿರಾಶಾದಾಯಕವಾಗಿದೆ. ನೀವು ನಡೆದುಕೊಂಡ ಆಕ್ರಮಣಕಾರಿ ರೀತಿ — ಅಂದರೆ, ಪೊಲೀಸ್ ವರಿಷ್ಠಾಧಿಕಾರಿಯೊಬ್ಬರನ್ನು ಕರೆಸಿಕೊಂಡು, ಅದೇ ದಿನ ಅವರ ವಿರುದ್ಧ ಶಿಕ್ಷೆ ವಿಧಿಸಿದ್ದು — ಕಳವಳಕಾರಿ ವಿಷಯವಾಗಿದೆ' ಎಂದು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರು ವಿಚಾರಣೆ ವೇಳೆ ಹೇಳಿದರು.
'ನ್ಯಾಯಾಂಗ ಅಧಿಕಾರಗಳನ್ನು ಚಲಾಯಿಸುವಾಗ 'ಬಾಹುಬಲಿ'ಯಂತೆ ವರ್ತಿಸುವುದನ್ನು ನಿಲ್ಲಿಸುವಂತೆ ನಿಮ್ಮ ಕಕ್ಷಿದಾರರಿಗೆ ಹೇಳಿ' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅರ್ಜಿದಾರರ ಪರ ವಕೀಲರಿಗೆ ಹೇಳಿದರು.
ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸುವಂತೆ ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ ನಂತರ ವಿವಾದ ಉಂಟಾಯಿತು. ಪೊಲೀಸ್ ಅಧಿಕಾರಿ ಎಫ್ಐಆರ್ ದಾಖಲಿಸದಿದ್ದಾಗ, ನ್ಯಾಯಾಧೀಶರು ಇದನ್ನು 'ನ್ಯಾಯಾಲಯದ ಸಮ್ಮುಖದಲ್ಲೇ ಎಸಗಿದ ಅಪರಾಧವೆಂದು ಪರಿಗಣಿಸಿ, ಆ ಅಧಿಕಾರಿಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಯನ್ನೂ ವಿಧಿಸಿದರು.
ಸೆಷನ್ಸ್ ನ್ಯಾಯಾಲಯ ಅನುಸರಿಸಿದ ಕಾರ್ಯವಿಧಾನವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಆ ಕೆಳ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಕಾನೂನು ವ್ಯಾಪ್ತಿಯೊಳಗೆಯೇ ಕಾರ್ಯನಿರ್ವಹಿಸಿದ್ದಾರೆಯೇ ಎಂದು ಪ್ರಶ್ನಿಸಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ನ್ಯಾಯಾಲಯಕ್ಕೆ ಕರೆಸಿಕೊಳ್ಳುವುದು, ಅವರು ಹಾಜರಾಗಲು ವಿಫಲವಾದಾಗ ಅದನ್ನು 'ನ್ಯಾಯಾಲಯದ ಸಮ್ಮುಖದಲ್ಲೇ ನಡೆದ ಅಪರಾಧ' ಎಂದು ಪರಿಗಣಿಸುವುದು ಹಾಗೂ ಅದೇ ದಿನ ಆ ಹಿರಿಯ ಅಧಿಕಾರಿಗಗೆ ಶಿಕ್ಷೆ ವಿಧಿಸುವುದು ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಅವರನ್ನು ಕೇಳಿತು.
ನ್ಯಾಯಾಧೀಶರು ಮೊದಲು ನ್ಯಾಯಾಂಗ ನಿಂದನೆಯ ಶಾಸನಬದ್ಧ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಬಿಎನ್ಎಸ್ಎಸ್ನ ಸೆಕ್ಷನ್ 384 ಮತ್ತು ಸಿಆರ್ಪಿಸಿಯ ಸೆಕ್ಷನ್ 345ರ ಅಡಿಯಲ್ಲಿ 'ನ್ಯಾಯಾಲಯದ ಸಮ್ಮುಖದಲ್ಲೇ ಎಸಗಿದ ಮಾಡಿದ ಅಪರಾಧ' ಎಂದರೆ ಏನು ಎಂದು ಕಾನೂನುಬದ್ಧವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.
ಬಿಎನ್ಎಸ್ಎಸ್ನ ಸೆಕ್ಷನ್ 384 ಮತ್ತು ಸಿಆರ್ಪಿಸಿ ಸೆಕ್ಷನ್ 345ರ ಅಡಿಯಲ್ಲಿ, ನ್ಯಾಯಾಲಯದ ಉಪಸ್ಥಿತಿಯಲ್ಲಿ ಅಥವಾ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳ ಸಮಯದಲ್ಲಿ ನಿರ್ದಿಷ್ಟ ಅಡಚಣೆಗಳು ನೇರವಾಗಿ ಸಂಭವಿಸಿದಾಗ ಮಾತ್ರ ನ್ಯಾಯಾಧೀಶರು ತಕ್ಷಣ ದಂಡ ವಿಧಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಇದನ್ನು ವಿವರಿಸಲು ನ್ಯಾಯಮೂರ್ತಿ ಬಾಗ್ಚಿ ಅವರು ನಿರ್ದಿಷ್ಟ ಸನ್ನಿವೇಶಗಳನ್ನು ಉಲ್ಲೇಖಿಸಿದರು. ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗ ಯಾರಾದರೂ ಇನ್ನೊಬ್ಬರಿಗೆ ಕಪಾಳಮೋಕ್ಷ ಮಾಡಿದರೆ, ಅವಾಚ್ಯ ಶಬ್ದಗಳನ್ನು ಬಳಸಿದರೆ ಅಥವಾ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಆ ಸ್ಥಳದಿಂದ ಹೊರಹೋಗಲು ನಿರಾಕರಿಸಿದರೆ, ಇಂತಹ ಕೃತ್ಯಗಳನ್ನು 'ನ್ಯಾಯಾಲಯದ ಸಮ್ಮುಖದಲ್ಲಿ ಎಸಗಿದ ಅಪರಾಧ' ಎಂದು ಪರಿಗಣಿಸಬಹುದು.
ಆದರೆ, ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ನೀಡಿದ ಆದೇಶವನ್ನು ಜಾರಿಗೊಳಿಸುವಲ್ಲಿ ಅಧಿಕಾರಿ ವಿಫಲರಾದರೆ, ಅದು ಈ ವರ್ಗದ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು. ನ್ಯಾಯಾಲಯದ ಕಲಾಪಗಳು ನಡೆಯುತ್ತಿರುವ ಸ್ಥಳದ ಹೊರಗೆ ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಾಗ, ಅಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಕಾನೂನು ಪ್ರತ್ಯೇಕ ಕಾರ್ಯವಿಧಾನ ಮತ್ತು ಭಿನ್ನವಾದ ನ್ಯಾಯವ್ಯಾಪ್ತಿಯ ಚೌಕಟ್ಟನ್ನು ಅನುಸರಿಸಬೇಕಾಗಿರುವುದನ್ನು ಕಡ್ಡಾಯಗೊಳಿಸುತ್ತದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ಪೀಠವು, ಸಾಸಾರಮ್ನ ರೋಹ್ತಾಸ್ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ-IV ರ ನ್ಯಾಯಾಧೀಶ ಅನಿಲ್ ಕುಮಾರ್ ಅವರ ಕ್ರಮವನ್ನು ಟೀಕಿಸಿದೆ.
ಸೆಪ್ಟೆಂಬರ್ 29, 2026 ರಂದು, ಅನಿಲ್ ಕುಮಾರ್, 2023ರ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸುಳ್ಳು ಸಾಕ್ಷ್ಯ ನೀಡಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ರೋಹ್ತಾಸ್ನ ಆಗಿನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೌಶನ್ ಕುಮಾರ್ ಅವರನ್ನು ದೋಷಿ ಎಂದು ತೀರ್ಪು ನೀಡಿದರು.
ನ್ಯಾಯಾಧೀಶರು ಎಸ್ಪಿಗೆ 1 ರೂ. ಸಾಂಕೇತಿಕ ದಂಡ ವಿಧಿಸಿದರು ಮತ್ತು ಅಧಿಕಾರಿಯ ಸೇವಾ ದಾಖಲೆಗಳಲ್ಲಿ ನ್ಯಾಯಾಲಯದ ಅವಲೋಕನಗಳನ್ನು ನಮೂದಿಸಲು ಬಿಹಾರದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶಿಸಿದರು. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ತರಬೇತಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಸಲು ಅವರ ತರಬೇತಿಯನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಅವರು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವನ್ನು ಒತ್ತಾಯಿಸಿದರು.
ನಂತರ, ಎಸ್ಪಿಗೆ ದಂಡ ವಿಧಿಸುವ ಆದೇಶಕ್ಕೆ ಪಾಟ್ನಾ ಹೈಕೋರ್ಟ್ ತಡೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



