ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ: ಇದು ಧರಣಿ, ಪ್ರತಿಭಟನೆಯ ಕಾಲ, ಅದನ್ನೇ ಮಾಡಿ ಎಂದು SC, ST ಕ್ಷೇತ್ರಗಳ ರೊಟೇಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ SC ಮತ್ತು ST ಮೀಸಲು ಕ್ಷೇತ್ರಗಳ ಕಡ್ಡಾಯ ರೊಟೇಷನ್ ಜಾರಿಗೆ ತರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆ ಕುರಿತ ವರದಿ ಇಲ್ಲಿದೆ:
Supreme Court CJI Surya Kant
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್Online Desk
Updated on: 

ನವದೆಹಲಿ: ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಾಗಿರುವ ಕ್ಷೇತ್ರಗಳನ್ನು ಕಡ್ಡಾಯವಾಗಿ ಸರದಿಯ ಆಧಾರದ ಮೇಲೆ ಬದಲಾಯಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು "ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ, ಇದು ಧರಣಿ ಮತ್ತು ಪ್ರತಿಭಟನೆಗಳ ಕಾಲ, ನೀವು ಅದನ್ನೇ ಮಾಡಬಹುದು" ಎಂದು ಲಘು ಧಾಟಿಯಲ್ಲಿ ಚಾಟಿ ಬೀಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪ್ರಕರಣದ ಹಿನ್ನೆಲೆ ಏನು?

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಕಾದಿಪುರ ವಿಧಾನಸಭಾ ಕ್ಷೇತ್ರದ ಮತದಾರ ಜಗದೀಶ್ ಸಿಂಗ್ ಎಂಬುವರು, "ಕದಿಪುರ ವಿಧಾನಸಭಾ ಕ್ಷೇತ್ರವು 1952ರ ಮೊದಲ ಚುನಾವಣೆಯಿಂದಲೂ ಎಸ್‌ಸಿ (SC) ಸಮುದಾಯಕ್ಕೆ ಮೀಸಲಾಗಿದ್ದು, ಒಂದೇ ಕ್ಷೇತ್ರ ದಶಕಗಳಿಂದ ಮೀಸಲಾಗಿರುವುದರಿಂದ ಕೇವಲ 4 ರಿಂದ 5 ಕುಟುಂಬಗಳಿಗೆ ಮಾತ್ರ ಲಾಭವಾಗುತ್ತಿದೆ ಮತ್ತು ಸಾಮಾನ್ಯ ವರ್ಗದ ಮತದಾರರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಹೀಗಾಗಿ ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆಗಳಂತೆ ಇಲ್ಲೂ ಕ್ಷೇತ್ರಗಳ ಬದಲಾವಣೆ ತರಬೇಕು" ಎಂದು ವಾದಿಸಿ, ಕ್ಷೇತ್ರ ಮರುವಿಂಗಡಣೆ ಕಾಯ್ದೆ (Delimitation Act), 2002 ರ ಸೆಕ್ಷನ್ 9(1)(c) ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿಯನ್ನು ಸಲ್ಲಿಸಿದ್ದರು.

ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು, "ಕ್ಷೇತ್ರಗಳ ರೊಟೇಷನ್ ಮಾಡುವುದು ಆದರ್ಶಪ್ರಾಯ ಹೌದಾದರೂ, ನ್ಯಾಯಾಲಯಗಳು ಶಾಸಕಾಂಗಕ್ಕೆ ಇಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ಸಂಸತ್ತಿನ ವ್ಯಾಪ್ತಿಗೆ ಬರುವ ನೀತಿ ವಿಷಯವಾಗಿದೆ" ಎಂದು ಅಲಹಾಬಾದ್ ಹೈಕೋರ್ಟ್‌ನ ಹಳೆಯ ತೀರ್ಪನ್ನು ಎತ್ತಿಹಿಡಿಯಿತು. ಇದರೊಂದಿಗೆ, ನ್ಯಾಯಮೂರ್ತಿ ಬಾಗ್ಚಿ ಅವರು, "ಬಹುಪಕ್ಷೀಯ ಪ್ರಜಾಪ್ರಭುತ್ವದಲ್ಲಿ ಮತದಾರರು ಕೇವಲ ಜಾತಿ ಅಥವಾ ಧರ್ಮದ ಆಧಾರದ ಮೇಲೆ ವೋಟ್ ಹಾಕುತ್ತಾರೆ ಎಂದು ಭಾವಿಸುವುದು ತಪ್ಪು. ಅವರು ರಾಜಕೀಯ ಸಿದ್ಧಾಂತಗಳನ್ನು ನೋಡಿ ಪಕ್ಷಕ್ಕೆ ಮತ ಹಾಕುತ್ತಾರೆ" ಎಂದು ಅಭಿಪ್ರಾಯಪಟ್ಟರು. ಅದರಂತೆ, ಸಂವಿಧಾನದ ವಿಧಿ 330 ಮತ್ತು 332 ಅಥವಾ ಕ್ಷೇತ್ರ ಮರುವಿಂಗಡಣೆ ಕಾಯ್ದೆಯಲ್ಲಿ ಇಲ್ಲದ ರೊಟೇಷನ್ ನಿಯಮವನ್ನು ಕೋರ್ಟ್ ತಾನಾಗಿಯೇ ಸೇರಿಸಿ ಕಾನೂನನ್ನು ಮರುಬರೆಯಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು.

Supreme Court CJI Surya Kant
ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ: ಕೇಂದ್ರ ಸರ್ಕಾರ, ಇತರ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್; ಒಂದು ವಾರದೊಳಗೆ ಪ್ರತಿಕ್ರಿಯೆಗೆ ಸೂಚನೆ!

ಧ್ವನಿ ಎತ್ತಲು ಇದು ಸೂಕ್ತ ಕಾಲ ಎಂದ ಸಿಜೆಐ

ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ, ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ ಎಂದು ಅರ್ಜಿದಾರರಿಗೆ ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, "ಈಗ ದೇಶದಲ್ಲಿ ಪ್ರತಿಭಟನೆಗಳು, ಧರಣಿಗಳು ಮತ್ತು ಘೋಷಣೆಗಳ ಸೀಸನ್ ಚೆನ್ನಾಗಿದೆ. ಅರ್ಜಿದಾರರು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿ, ಜನಪ್ರತಿನಿಧಿಗಳನ್ನು ಭೇಟಿಯಾಗಿ ಸಂಸತ್ತಿನ ಮೂಲಕ ಕಾನೂನು ತಿದ್ದುಪಡಿ ತರಲು ಧ್ವನಿ ಎತ್ತಬಹುದು. ಕಾನೂನು ಬದಲಾಯಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುವುದು ಸೂಕ್ತ" ಎಂದು ತಿಳಿಸಿ ಅರ್ಜಿದಾರರಿಗೆ ಜನಪ್ರತಿನಿಧಿಗಳ ಕದ ತಟ್ಟುವಂತೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X