

ಮುಂಬೈ: ಮೊದಲು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಉಗ್ರ ಸಯೀದ್ ಹಫೀಜ್ ನನ್ನು ನಿಯಂತ್ರಿಸಿ ನಂತರ ಭಯೋತ್ಪಾದನೆ ಕುರಿತಂತೆ ಶಪಥ ಮಾಡಿ ಎಂದು ಶಿವಸೇನೆ ಪಾಕ್ ವಿರುದ್ಧ ಕಿಡಿಕಾರಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಪೇಶಾವರ ಸೇನಾ ಶಾಲೆಯ ಮೇಲೆ ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದನ್ನು ಕಟುಶಬ್ಧಗಳಿಂದ ಟೀಕಿಸಿದೆ. 'ಪಾಕಿಸ್ತಾನ ಭಯೋತ್ಪಾಕರನ್ನು ಉತ್ಪಾದಿಸುವ ಕಾರ್ಖಾನೆಯಾಗಿದೆ. ಹಾಗಾಗಿಯೇ ಪಾಕಿಸ್ತಾನದಲ್ಲಿ ಉಗ್ರರಿಗೆ ಜೀವಾವಧಿ ಶಿಕ್ಷೆಯನ್ನು ನಿಷೇಧ ಮಾಡಲಾಗಿದೆ'.
'ತಮ್ಮ ನೆಲೆದ ಮಣ್ಣಿನಲ್ಲೇ ಹುಟ್ಟಿದ ಮಕ್ಕಳ ಮೇಲೆ ಉಗ್ರರು ದಾಳಿ ಮಾಡುತ್ತಿರುವುದು ವಿಷಾದಕರ ಸಂಗತಿ. ತಾನು ಮಾಡುತ್ತಿರುವ ದುಷ್ಕೃತ್ಯಕ್ಕೆ ನರೇಂದ್ರ ಮೋದಿಯವರೇ ಕಾರಣ. ಇದಕ್ಕೆ ಪ್ರತ್ಯುತ್ತರ ನೀಡಿಯೇ ತೀರುತ್ತೇವೆ ಎಂದು ಪಾಕಿಸ್ತಾನದ ನೆಲೆದಲ್ಲಿ ಉಗ್ರರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ ಪ್ರಧಾನಿ ನವಾಜ್ ಶರೀಫ್ ಅವರು ಕೈ ಕಟ್ಟಿ ಕುಳಿತ್ತಿದ್ದಾರೆ'.
'ಪಾಕಿಸ್ತಾನ ಮೊದಲು ಉಗ್ರ ಸಯ್ಯಿದ್ ಹಫೀಜ್ನನ್ನು ನಿಯಂತ್ರಿಸಲಿ. ನಂತರ ಭಯೋತ್ಪಾದನಾ ಶಪಥವನ್ನು ಪಾಕ್ ಪಾಲಿಸಲಿ. ಪ್ರಪಂಚದಲ್ಲಿ ಯಾವ ದೇಶಕ್ಕೂ ಪಾಕಿಸ್ತಾನದ ಮೇಲೆ ನಂಬಿಕೆಯಿಲ್ಲ. ಸಯೀದ್ನಂತಹ ಉಗ್ರರು ಎಂದು ನಾಶವಾಗುತ್ತಾರೋ ಅಂದು ಇತರೆ ದೇಶಗಳಿಗೆ ಪಾಕಿಸ್ತಾನದ ಮೇಲೆ ನಂಬಿಕೆ ಬರುತ್ತದೆ' ಎಂದು ಶಿವಸೇನೆ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಕಿಡಿಕಾರಿದೆ.
ಅಲ್ಲದೆ, ತಮ್ಮ ಭಯೋತ್ಪಾದನಾ ಚಟುವಟಿಕೆಯಿಂದಾಗಿ ಮುಗ್ಧ ಮಕ್ಕಳ ಬಲಿತೆಗೆದುಕೊಂಡಿರುವುದು ನಿಜಕ್ಕೂ ಶೋಚನೀಯ ಸಂಗತಿ. ಪಾಕಿಸ್ತಾನದ ಮಣ್ಣು ಅತಿ ಅಪಾಯಕಾರಿಯಾಗಿದ್ದು, ಉಗ್ರ ನಿಗ್ರಹ ಕಾರ್ಯಕ್ಕೆ ಪಾಕಿಸ್ತಾನ ಸರ್ಕಾರದಿಂದ ಸಾಧ್ಯವಿಲ್ಲ. ಈ ಕಾರ್ಯಕ್ಕೆ ವಿಶ್ವ ಸಮುದಾಯ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದೆ.