

ಗುವಾಹಟಿ: ಅಸ್ಸಾಂನಲ್ಲಿ ಬೋಡೋ ಉಗ್ರರು ಮತ್ತೆ ರಕ್ತದೋಕುಳಿ ಹರಸಿದ್ದಾರೆ. ಸೋನಿತ್‌ಪುರ ಮತ್ತು ಕೊಕ್ರಜಾರ್ ಜಿಲ್ಲೆಗಳ 4 ಪ್ರದೇಶಗಳಲ್ಲಿ ಮಂಗಳವಾರ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಉಗ್ರರು ನಡೆಸಿದ ಸರಣಿ ದಾಳಿಗೆ 48 ಮಂದಿ ಸಾವಿಗೀಡಾಗಿದ್ದಾರೆ.
ಸೋನಿತ್‌ಪುರದಲ್ಲಿ 43 ಮಂದಿ ಮೃತಪಟ್ಟರೆ, ಕೊಕ್ರಜಾರ್‌ನಲ್ಲಿ 5 ಮಂದಿ ಅಸುನೀಗಿದ್ದಾರೆ. ದಾಳಿ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
ಕಳೆದ ಕೆಲ ದಿನಗಳಿಂದ ಉಗ್ರರ ವಿರುದ್ಧದ ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆ ತೀವ್ರಗೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಐಜಿಪಿ ಎಸ್.ಎನ್.ಸಿಂಗ್ ತಿಳಿಸಿದ್ದಾರೆ. ಭಾನುವಾರ ಅಸ್ಸಾಂ ಪೊಲೀಸ್ ಕಮಾಂಡೋಗಳ ಜಂಟಿ ತಂಡ ಹಾಗೂ ಸೇನೆ ಚಿರಾಗ್ ಜಿಲ್ಲೆಯಲ್ಲಿ ಇಬ್ಬರು ಬೋಡೋ ಉಗ್ರರನ್ನು ಹತ್ಯೆಗೈದಿತ್ತು. ಇದಾದ ಮಾರನೇ ದಿನವೇ(ಸೋಮವಾರ) ಉಗ್ರರು ಕೊಕ್ರಜಾರ್‌ನ ಪಟ್ಗಾಂವ್‌ನಲ್ಲಿ ಗ್ರೆನೇಡ್ ಸ್ಫೋಟಿಸಿದರು.
ಈ ವೇಳೆ ಮೂವರಿಗೆ ಗಂಭೀರ ಗಾಯಗಳಾಗಿತ್ತು. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಸ್ಸಾಂ ಸಿಎಂ ತರುಣ್ ಗೊಗೋಯ್, ಉಗ್ರರ ಬೆದರಿಕೆಗೆ ಸರ್ಕಾರ ಬಗ್ಗುವುದಿಲ್ಲ ಎಂದಿದ್ದಾರೆ.