

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕುಸಿತವಾಗಿದ್ದು, ಭಾನುವಾರ ಕನಿಷ್ಟ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು 2.6ಡಿಗ್ರಿಯಷ್ಟು ಕನಿಷ್ಟ ಉಷ್ಣಾಂಶ ದಾಖಲಾಗಿದ್ದು, ಇದು ಪ್ರಸಕ್ತ ಸಾಲಿನ ಅತ್ಯಂತ ಕಡಿಮೆ ಉಷ್ಣಾಂಶವೆಂದು ತಿಳಿದುಬಂದಿದೆ. ರಾಜಧಾನಿಯಾದ್ಯಂತ ಮುಂಜುಕವಿದ ವಾತಾವರಣವಿದ್ದು, ಇಂದು ಬರೊಬ್ಬರಿ 55 ವಿಮಾನಗಳು ಮತ್ತು 70 ರೈಲುಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿವೆ ಎಂದು ತಿಳಿದುಬಂದಿದೆ. 50 ಮೀಟರ್‌ಗಿಂತ ದೂರವಿರುವ ಯಾವುದೇ ವಸ್ತುಗಳು ಕಾಣದಷ್ಟರ ಮಟ್ಟಿಗೆ ದಟ್ಟವಾಗಿ ಮಂಜು ಆವರಿಸಿಕೊಂಡಿದೆ.
ಒಟ್ಟು 55 ವಿಮಾನಗಳ ಸಂಚಾರ ಸಮಯದಲ್ಲಿ ವಿಳಂಬವಾಗಿದ್ದು, ದಟ್ಟ ಮಂಜಿನಿಂದಾಗಿ 3 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಹಳಿಗಳ ಮೇಲೆಯೂ ದಟ್ಟ ಮಂಜು ಆವರಿಸಿದ್ದು, 70 ರೈಲುಗಳ ಸಂಚಾರ ವಿಳಂಬವಾಗಿವೆ. ಈ ಪೈಕಿ ಉತ್ತರ ಭಾರತದ ರಾಜ್ಯಗಳಿಗೆ ಸಂಚಾರ ಕೈಗೊಂಡಿದ್ದ 50 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಮೂಲಗಳ ತಿಳಿಸಿವೆ. ನಿನ್ನೆ ಇದೇ ದೆಹಲಿಯಲ್ಲಿ ಕನಿಷ್ಟ 4.8 ಡಿಗ್ರಿ ಕನಿಷ್ಟ ಉಷ್ಣಾಂಶ ದಾಖಲಾಗಿತ್ತು.