

ನವದೆಹಲಿ: ಶಿವಸೇನೆಯು ತನ್ನ ರಾಜ್ಯಸಭೆ ಸದಸ್ಯ ಅನಿಲ್ ದೇಸಾಯಿ ಹಾಗೂ ವೈ.ಎಸ್. ಚೌಧರಿ ಅವರನ್ನು ಕೇಂದ್ರ ಸಂಪುಟ ಸೇರಿಸಿಕೊಳ್ಳಲು ಶನಿವಾರ ಒಪ್ಪಿಗೆ ನೀಡಿತ್ತಾದರೂ ರಾತ್ರಿ ವೇಳೆಗೆ ಎರಡೂ ಪಕ್ಷಗಳ ನಡುವೆ ಮತ್ತೆ ಮನಸ್ತಾಪ ಮೂಡಿತು ಎಂದು ಮೂಲಗಳು ತಿಳಿಸಿವೆ. ರಾಜ್ಯ ಮಟ್ಟದ ರಾಜಕೀಯ ಮಾತುಕತೆ ಪರಿಹಾರ ಆಗುವವರೆಗೆ ಕೇಂದ್ರ ಸಂಪುಟಕ್ಕೆ ಯಾವುದೇ ಸದಸ್ಯನ ಹೆಸರು ಶಿಫಾರಸು ಮಾಡುವುದಿಲ್ಲ ಎಂದು ಶಿವಸೇನೆ ಪಟ್ಟು ಹಿಡಿದಿತ್ತು. ಶನಿವಾರ ಪಟ್ಟು ಸಡಿಲಿಸಿದ್ದ ಸೇನೆ, ದೇಸಾಯಿ ಹಾಗೂ ಚೌಧರಿ ಹೆಸರನ್ನು ಶಿಫಾರಸು ಮಾಡಲು ನಾವು ಒಪ್ಪಿದ್ದೇವೆ ಎಂದು ತಿಳಿಸಿತ್ತು. ಇದೇ ವೇಳೆ ಮಹಾರಾಷ್ಟ್ರದಲ್ಲಿ ಅಧಿಕಾರ ಸಮಾನ ಹಂಚಿಕೆ ಆಗಬೇಕು ಎಂದು ಒತ್ತಾಯಿಸುತ್ತಿರುವ ಶಿವಸೇನೆಯು , ತನ್ನ ಸಂಸದ ಅನಂತಗಿತೆ ಅವರನ್ನು ಪ್ರಧಾನಿ ಮೋದಿ ಭೇಟಿಗಾಗಿ ಕಳುಹಿಸಿತ್ತು. ಆದರೆ ಅದಕ್ಕೆ ಬಿಜೆಪಿ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಶಿವಸೇವೆ ಆಕ್ರೋಶಗೊಂಡಿದೆ. ಭಾನುವಾರ ನಡೆಯಲಿರುವ ಸಚಿವರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಗೈರಾಗುವುದಾಗಿಯೂ ತಿಳಿಸಿದೆ.
ತೆಲಂಗಾಣಕ್ಕೂ ಪ್ರಾತಿನಿಧ್ಯ?
ಮೋದಿ ಸರ್ಕಾರವು ಹೊಸ ರಾಜ್ಯ ತೆಲಂಗಾಣಕ್ಕೂ ಕೇಂದ್ರದಲ್ಲಿ ಪ್ರಾತಿನಿಧ್ಯ ನೀಡಲಿದೆಯೇ? ಹೌದು ಎನ್ನುತ್ತದೆ ಮೂಲಗಳು. ತೆಲಂಗಾಣದ ಏಕೈಕ ಬಿಜೆಪಿ ಸಂಸದರಾದ ಬಂದಾರು ದತ್ತಾತ್ರೇಯ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಲು ಸಿದ್ಧತೆ ನಡೆದಿದೆ. ಪ್ರಧಾನಿ ಮೋದಿ ಅವರೇ ಸ್ವತಃ ದತ್ತಾತ್ರೇಯರಿಗೆ ಕರೆ ಮಾಡಿ, ಸಂಪುಟಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ಅವರಿಗೆ ಸಂಪುಟ ಸಚಿವ ಸ್ಥಾನ ಸಿಗುತ್ತದೋ ಅಥವಾ ಸಹಾಯಕ ಸಚಿವರ ಸ್ಥಾನ ಸಿಗುತ್ತದೋ ಎಂಬ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ದತ್ತಾತ್ರೇಯ ಅವರು ಅಟಲ್ ಸರ್ಕಾರದಲ್ಲಿ ನಗರಾಭಿವೃದ್ಧಿ ಹಾಗೂ ರೈಲ್ವೇ ಸಚಿವರ ಹುದ್ದೆಯನ್ನು ನಿರ್ವಹಿಸಿದ್ದರು