

ಕೊಲ್ಕತ್ತಾ: ಬಹುಕೋಟಿ ಹಗರಣ ಶಾರದಾ ಚಿಟ್ ಫಂಡ್ ಮತ್ತು ಬುರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಖಾ ಸುಮ್ಮನೆ ತಲೆ ತೂರಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ.
ಇಂದು ಆರಂಭಗೊಳ್ಳಲಿರುವ ಚಳಿಗಾಲ ಅಧಿವೇಶನ ಬಹಿಷ್ಕರಿಸಿ, ಟಿಎಂಸಿ ನಾಯಕರು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮದ ವಿರುದ್ಧ ಕೊಲ್ಕತಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದೇ ವೇಳೆ, ಇಂದಿನಿಂದ ಆರಂಭಗೊಳ್ಳಲಿರುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಸಂಸತ್ ನಲ್ಲಿ ಕಪ್ಪುಹಣ, ಎಫ್ ಡಿಐ ಸೇರಿದಂತೆ ಕೋಮುಗಲಭೆಗಳಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.
ಶಾರದಾ ಚಿಟ್ಫಂಡ್ ಹಗರಣ ಹಾಗೂ ಬುರ್ದ್ವಾನ್ ಸ್ಫೋಟಕ ಪ್ರಕರಣಗಳು ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಶಾರದಾ ಚಿಟ್ಫಂಡ್ ಹಗರಣದಲ್ಲಿ ಟಿಎಂಸಿ ಪಕ್ಷದ ನಾಯಕನ್ನು ಬಂಧಿಸಿರುವುದರ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹೊಡ್ಡಿದ್ದರು.
ಕೇಸರಿ ಪಕ್ಷದ ಪಿತ್ತೂರಿಗಳ ಬಗ್ಗೆ ಒಂದಾಗಿ ಹೋರಾಡಿ. ಬಿಜೆಪಿಗೆ ಭಯಪಡಬೇಡಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಭಿನ್ನಮತದ ಎಲ್ಲ ಧ್ವನಿಗಳನ್ನು ಅಡಗಿಸಲು ಅವರು ಬಯಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದರು.