ಕೈಜೋಡಿಸಿ ಕೆಲಸ ಮಾಡುತ್ತಿರುವ ಭಾರತ - ಚೀನಾ, ಎರಡೂ ಕಡೆಯ ಯೋಧರಿಂದ ರಕ್ಷಣಾ ಕಾರ್ಯ

ಗಡಿ, ರಾಜತಾಂತ್ರಿಕತೆ, ಆರ್ಥಿಕತೆ ವಿಚಾರದಲ್ಲಿ ಪರಸ್ಪರ ಪೈಪೋಟಿ, ಜಿದ್ದಿಗೆ ಬೀಳುವ ಭಾರತ ಮತ್ತು ಚೀನಾ ನೆರೆರಾಷ್ಟ್ರ ನೇಪಾಳದಲ್ಲಾದ ಘೋರ ದುರಂತದಲ್ಲಿ ಮಾತ್ರ ಕೈಜೋಡಿಸಿ ಕೆಲಸ ಮಾಡುತ್ತಿವೆ...
ನೇಪಾಳ ಭೂಕಂಪದ ಪರಿಣಾಮದಿಂದಾಗಿ ಗಾಯಗೊಂಡ ಜನತೆ
ನೇಪಾಳ ಭೂಕಂಪದ ಪರಿಣಾಮದಿಂದಾಗಿ ಗಾಯಗೊಂಡ ಜನತೆ

ಕಠ್ಮಂಡು: ಗಡಿ, ರಾಜತಾಂತ್ರಿಕತೆ, ಆರ್ಥಿಕತೆ ವಿಚಾರದಲ್ಲಿ ಪರಸ್ಪರ ಪೈಪೋಟಿ, ಜಿದ್ದಿಗೆ ಬೀಳುವ ಭಾರತ ಮತ್ತು ಚೀನಾ ನೆರೆರಾಷ್ಟ್ರ ನೇಪಾಳದಲ್ಲಾದ ಘೋರ ದುರಂತದಲ್ಲಿ ಮಾತ್ರ ಕೈಜೋಡಿಸಿ ಕೆಲಸ ಮಾಡುತ್ತಿವೆ.

ಭೂಕಂಪ ಸಂಭವಿಸಿದ ಬೆನ್ನಲ್ಲೇ ಭಾರತವು ನೇಪಾಳಕ್ಕೆ ನೆರವಿನ ಹಸ್ತ ಚಾಚಿದರೆ, 2 ದಿನಗಳ ಬಳಿಕ ಚೀನಾ ಕೂಡ ಈ ಮಾನವೀಯ ಕಾರ್ಯದಲ್ಲಿ ತೊಡಗಿಕೊಂಡಿದೆ. ನೇಪಾಳದ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಆಸ್ಪತ್ರೆಗೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‍ಗಳು ನಿರಂತರವಾಗಿ ಗಾಯಾಳುಗಳನ್ನು ತಂದು ಸೇರಿಸುತ್ತಿದ್ದರೆ, ರಾಜಧಾನಿ ಕಠ್ಮಂಡುವಿನಲ್ಲಿ ಕೆಂಪು ಸಮವಸ್ತ್ರ ಧರಿಸಿರುವ ಚೀನೀ ಸೈನಿಕರು ಅವಶೇಷಗಳಡಿಯಿಂದ ಮೃತದೇಹಗಳನ್ನು ಮೇಲೆತ್ತುವ ಕೆಲಸದಲ್ಲಿ ತೊಡಗಿದ್ದಾರೆ.

ವಿಳಂಬ ಪರಿಹಾರದಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ನೇಪಾಳಿ ಸರ್ಕಾರ, ಅಧಿಕಾರಿಗಳನ್ನು ಹಳಿಯುತ್ತಿದ್ದಾರೆ. ಅದರ ಜತೆಗೇ ಭಾರತ ಮತ್ತು ಚೀನಾದ ಸೇವಾಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಭಾರತ ಮತ್ತು ಚೀನಾವು ಭೂಕಂಪ ಪೀಡಿತ ನೇಪಾಳಕ್ಕೆ ಕೆಲವೇ ಗಂಟೆಗಳಲ್ಲಿ ರಕ್ಷಣಾ ಕಾರ್ಯಕರ್ತರು, ಶ್ವಾನ ದಳಗಳು, ಆಹಾರ, ಟೆಂಟ್‍ಗಳನ್ನು ಕಳುಹಿಸಿರುವುದು ಸಂತ್ರಸ್ತರ ಹೊಗಳಿಕೆಗೆ ಕಾರಣ.

ಯಾರೂ ಹೆದರಬೇಡಿ: ಭಾರತೀಯರಿಗೆ ಮನವಿ
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ. ಹಾಗಾಗಿ ಯಾರೂ ಹೆದರಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರವು ನೇಪಾಳದಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ತಿಳಿಸಿದೆ. ನೇಪಾಳದಲ್ಲಿ ಬಹಳಷ್ಟು ಮಂದಿ ಭಾರತೀಯರಿದ್ದಾರೆ. ಆದರೆ ನಾವು ಗಾಯಾಳುಗಳು, ವೃದ್ಧರು, ಮಕ್ಕಳು ಮತ್ತು ಮಹಿಳೆಯರನ್ನು ಆದ್ಯತೆ ಮೇರೆಗೆ ರಕ್ಷಿಸುತ್ತಿದ್ದೇವೆ. ವಿಮಾನ ನಿಲ್ದಾಣವೂ ತೆರೆದಿದೆ. ವಿಶೇಷ ವಾಣಿಜ್ಯ ವಿಮಾನಗಳ ಸಂಚಾರವನ್ನು ನಾವು ಆರಂಭಿಸಿದ್ದೇವೆ. ಬಸ್ ಗಳ ಮೂಲಕವೂ ಭಾರತೀಯರನ್ನು ಕರೆತರಲಾಗುತ್ತಿದೆ. ಎಲ್ಲರನ್ನೂ ರಕ್ಷಿಸಲಾಗುವುದು. ಯಾರೂ ಭಯಪಡಬೇಕಾಗಿಲ್ಲ ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ರಂಜಿತ್ ರೇ ತಿಳಿಸಿದ್ದಾರೆ.

ಮೋದಿಯವರಿಂದ ನಮಗೆ ಸಹಾಯ: ನೇಪಾಳ ಗ್ರಾಮಸ್ಥ
`ನಮಗೆ ನಮ್ಮ ಸರ್ಕಾರದ ಮೇಲೆ ನಂಬಿಕೆಯಿಲ್ಲ. ಕೇವಲ ಭಾರತ ಮತ್ತು ಅದರ ಪ್ರಧಾನಿ ನರೇಂದ್ರ ಮೋದಿ  ಅವರು ನಮಗೆ ನೆರವಾಗುತ್ತಿದ್ದಾರೆ'. ಇದು ನೇಪಾಳದ ಗ್ರಾಮಸ್ಥ ಧ್ರುವ ಕಂಡೇಲ್ ಎಂಬಾತನ ಭರವಸೆಯ ಮಾತು. ಭೂಕಂಪಕ್ಕೆ ಭಾರತ ಸ್ಪಂದಿಸಿದ ರೀತಿಯೇ ಗ್ರಾಮಸ್ಥರ ಬಾಯಿಯಿಂದ ಇಂತಹ ಮಾತುಗಳು ಬರಲು ಕಾರಣ. ಭಾರತದ ಹೆಲಿಕಾಪ್ಟರ್‍ಗಳು ಇಲ್ಲಿಗೆ ಬರದೇ ಇರುತ್ತಿದ್ದರೆ, ನೂರಾರು ಮಂದಿ ಪರ್ವತ ಪ್ರದೇಶಗಳಲ್ಲೇ ಸಾಯಬೇಕಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಚೀನಾದಿಂದಲೂ ನೆರವು
ಭಾರತದ ಬಳಿಕ ಚೀನಾ ಕೂಡ ನೇಪಾಳದ ನೆರವಿಗೆ ಧಾವಿಸಿದ್ದು, 3.3 ದಶಲಕ್ಷ ಡಾಲರ್ ನೆರವು ನೀಡುವುದಾಗಿ ಘೋಷಿಸಿದೆ (ಇದು ಇಡೀ ಐರೋಪ್ಯ ಒಕ್ಕೂಟ ನೀಡಿದ ನೆರವಿನ ಮೊತ್ತಕ್ಕೆ ಸಮ). ಭಾರತದಂತೆಯೇ ಚೀನಾದ ಹಲವೆಡೆ ನೇಪಾಳಕ್ಕಾಗಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಕಠ್ಮಂಡುವಿನಲ್ಲಿರುವ ಚೀನಾದ ನೂಡಲ್ ಅಂಗಡಿಯ ಮಾಲೀಕನೊಬ್ಬ ಆಹಾರ ತಯಾರಿಸಿ, ಸಂತ್ರಸ್ತರಿಗೆ ಉಚಿತವಾಗಿ ನೀಡುತ್ತಿದ್ದಾನೆ.

ಕೆಲವು ಗ್ರಾಮಗಳೇ ಕಣ್ಮರೆ
ಮಂಗಳವಾರ ರಕ್ಷಣಾ ಹೆಲಿಕಾಪ್ಟರ್‍ಗಳು ಭೂಕಂಪದ ಕೇಂದ್ರಬಿಂದುವಿಗೆ ಸಮೀಪ ವಿರುವ ಗೋರ್ಖಾ ಪ್ರದೇಶದ ಮೇಲೆ ವೈಮಾನಿಕ ಸಮೀಕ್ಷೆ ನಡೆಸಿವೆ. ಕೆಲವು ರಕ್ಷಣಾ ಕಾರ್ಯಕರ್ತರು ಆ ಪ್ರದೇಶಗಳನ್ನು ತಲುಪಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ನಾಶವಾಗಿರುವುದನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ಕೆಲ ಗ್ರಾಮಗಳಲ್ಲಿ ಶೇ.90ರಷ್ಟು ಮನೆಗಳು ನೆಲಸಮವಾಗಿವೆ. ಸಿಂಗ್ಲಾ ಎಂಬ ಪ್ರದೇಶದಲ್ಲಿ ಶೇ.75ರಷ್ಟು ಕಟ್ಟಡಗಳು ಕುಸಿದುಬಿದ್ದಿದ್ದು, ಶನಿವಾರ ರಾತ್ರಿಯಿಂದ ಆ ಗ್ರಾಮದ ಒಬ್ಬರೇ ಒಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಠ್ಮಂಡುವಿನ ಹೊರಗಿನ ಅನೇಕ ಗ್ರಾಮಗಳ ಬಿsೀಕರತೆಗಳು ಇನ್ನಷ್ಟೇ ಹೊರಬೀಳಬೇಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com