

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಲಲಿತ್ ಮೋದಿಯಿಂದ ಎಷ್ಟು ಹಣ ಪಡೆದಿದ್ದಾರೆಂಬುದನ್ನು ಬಹಿರಂಗ ಪಡಿಸಿದರೆ ಸಂಸತ್ತು ಕೆಲಸ ಮಾಡಲು ಬಿಡುತ್ತೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಮುಂಗಾರು ಅಧಿವೇಶನ ಮುಕ್ತಾಯಗೊಳ್ಳಲು ಇನ್ನು ಕೇವಲ ನಾಲ್ಕು ದಿನವಷ್ಟೇ ಬಾಕಿಯಿರುವುದರಿಂದ ಈ ನಾಲ್ಕು ದಿನವಾದರೂ ಸಂಸತ್ತು ಕೆಲಸ ಮಾಡಲು ಬಿಡುವಂತೆ ನಾಯಕರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅವರು, ಸಂಸತ್ತು ಕೆಲಸ ಮಾಡಲು ಖಂಡಿತವಾಗಿಯೂ ಬಿಡುತ್ತೇವೆ. ಆದರೆ, ಸುಷ್ಮಾ ಸ್ವರಾಜ್ ಅವರು ಲಲಿತ್ ಮೋದಿ ಅವರಿಂದ ಎಷ್ಟು ಹಣ ಪಡೆದಿದ್ದಾರೆಂಬುದನ್ನು ಬಹಿರಂಗ ಪಡಿಸಿದರೆ ಮಾತ್ರ ಎಂದು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರು ತಮ್ಮ ಕಚೇರಿಯನ್ನು ದುರುಪಯೋಗ ಮಾಡಿಕೊಂಡು ಲಲಿತ್ ಮೋದಿಗೆ ಅಕ್ರಮವಾಗಿ ವೀಸಾ ನೆರವು ನೀಡಿದ್ದಾರೆಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷ ಲಲಿತ್ ಮೋದಿ ವಿಚಾರ ಕುರಿತಂತೆ ಕಳೆದ ಹಲವು ದಿನಗಳಿಂದಲೂ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿವೆ.