

ನವದೆಹಲಿ: 1993ರ ಮುಂಬೈ ಸರಣಿ ಸ್ಪೋಟದ ಪ್ರಮುಖ ರುವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಾಪಸಾತಿಗೆ ಸಂಬಂಧಿಸಿದಂತೆ 2 ವರ್ಷದ ಹಿಂದೆ ಯುಪಿಎ ಸರ್ಕಾರ ಚರ್ಚೆ ನಡೆಸಿತ್ತು ಎಂಬ ಆರೋಪವನ್ನು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಮಂಗಳವಾರ ತಿರಸ್ಕರಿಸಿದ್ದಾರೆ.
ಎರಡು ವರ್ಷದ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ದಾವೂದ್ ಇಬ್ರಾಹಿಂ ಭಾರತಕ್ಕೆ ವಾಪಸ್ ಆಗಲು ಸಿದ್ಧನಿದ್ದ. ಆತನ ಮರುಳುವಿಕೆ ಕುರಿತಂತೆ ಯುಪಿಎ ಸರ್ಕಾರ ಅಂದು ನಾಯಕರೊಂದಿಗೆ ಚರ್ಚೆ ನಡೆಸಿತ್ತು ಎಂದು ದೆಹಲಿ ಮೂಲದ ವಕೀಲ ಹಾಗೂ ಕಾಂಗ್ರೆಸ್ ನ ನಾಯಕರೊಬ್ಬರು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
2013ರಲ್ಲಿ ದಾವೂದ್ ಕಿಡ್ನಿಸಂಬಂಧ ಪಟ್ಟ ಸಮಸ್ಯೆಯಿಂದ ಬಳುತ್ತಿದ್ದ. ಹಾಗಾಗಿ ಭಾರತಕ್ಕೆ ಮರಳಲು ಆಲೋಚನೆ ನಡೆಸಿದ್ದ ದಾವೂದ್ ಈತ ಕುಟುಂಬ ಸದಸ್ಯರೊಂದಿಗಿರಲು ಇಚ್ಛಿಸಿದ್ದ. ಆದರೆ, ದಾವೂದ್ ನೀಡಿದ್ದ ಆಫರ್ ಅನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸಿತ್ತು ಎಂದು ವರದಿಯಲ್ಲಿ ತಿಳಿಸಿದೆ.
ವರದಿಯಲ್ಲಿ ದಾವೂದ್ ಭಾರತಕ್ಕೆ ಬರುವ ಬಗ್ಗೆ 2013ರಲ್ಲಿ ಕಾಂಗ್ರೆಸ್ ಪಕ್ಷ ಉನ್ನತ ಮಟ್ಟದ ಸಭೆ ನಡೆಸಿತ್ತು ಎಂದು ತಿಳಿದುಬಂದಿದ್ದು, ಈ ಸುದ್ದಿಗೆ ಸಂಬಂಧಿಸಿದಂತೆ ಶಿವಶಂಕರ್ ಮೆನನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಬಗ್ಗೆ ಮನಮೋಹನ್ ಸಿಂಗ್ ಅವರು ಇಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ದಾವೂದ್ ಇಬ್ರಾಹಿಂ ವಾಪಸಾತಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ ಎಂದಿದ್ದಾರೆ ಎಂದು ವರದಿ ಮಾಡಿದೆ.
ದಾವೂದ್ ಮರಳುವಿಕೆ ಬಗ್ಗೆ ಮಾಹಿತಿ ನೀಡಿರುವ ವಕೀಲ ದಾವುದ್ ಮಾಲೀಕತ್ವದ ಕಂಪನಿಯೊಂದಕ್ಕೆ ಆಪ್ತರಾಗಿದ್ದು, ದಾವೂದ್ ಕುಂಟುಂಬದೊಂದಿಗೆ ಹೆಚ್ಚಿನ ಸಂಪರ್ಕದಲ್ಲಿರುವ ವ್ಯಕ್ತಿಯಾಗಿದ್ದಾರೆ. ಅಲ್ಲದೆ, ಭೂಗತ ಪಾತಕಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ 1993ರ ನವೆಂಬರ್ 1 ರಂದು ನಡೆದ ಮುಂಬೈ ಸರಣಿ ಸ್ಪೋಟದ ಪ್ರಮುಖ ರುವಾರಿಯಾಗಿದ್ದು, ದಾವೂದ್ ವಿರುದ್ಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಇತ್ತೀಚಗಷ್ಟೇ ಮುಂಬೈ ಸರಣಿ ಸ್ಪೋಟ ಪ್ರಕರಣದ ವಿಚಾರಣೆಯಲ್ಲಿ ಮುಂಬೈ ನಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ದಾವೂದ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಆದರೆ, ದಾವೂದ್ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.