

ಚಂಡೀಗಢ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬೈದ ಜನರ ಮೇಲೆ ವ್ಯಕ್ತಿಯೊಬ್ಬ ಟ್ರಕ್ ಹರಿಸಿ ಹತ್ಯೆಗೈದ ಘಟನೆ ವರದಿಯಾಗಿದೆ.
ಚಂಡೀಗಢದ ಶರ್ಮಾ ಚೌಧರಿ (23) ಎಂಬ ಟ್ರಕ್ ಚಾಲಕ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬೀದಿಯಲ್ಲಿ ವಾಸವಾಗಿದ್ದ ಕೆಲವು ಜನರು ಬೈದಿದ್ದರು. ಇದರಿಂದ ಸಿಟ್ಟಿಗೆದ್ದ ಚೌಧರಿ ರಾತ್ರಿ ಹೊತ್ತು ದಾರಿ ಪಕ್ಕದಲ್ಲಿ ಮಲಗಿದ್ದ 8 ಜನರ ಮೇಲೆ ಟ್ರಕ್ ಹರಿಸಿದ್ದಾನೆ. ಇದರಲ್ಲಿ 5 ಮಂದಿ ಘಟನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ 4 ಜನ ರಾಜಸ್ಥಾನ ಮೂಲದವರಾಗಿದ್ದು, ಒಂದೇ ಕುಟುಂಬದ ಸದಸ್ಯರಾಗಿದ್ದಾರೆ.
ಸಾವಿಗೀಡಾದವರನ್ನು ರಾಜಸ್ಥಾನದ ಜಸ್ಸೂ ರಾಂ (55) ನಾಥಾ ರಾಂ (18), ಜಗದೀಶ್ (23), ಸರ್ದಾರ್ ಸಿಂಗ್ (31) ಮತ್ತು ಉತ್ತರ ಪ್ರದೇಶದ ಹರಿಂದರ್ ಯಾದವ್ (25) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು. 8 ಮಂದಿಯ ಮೇಲೆ ಟ್ರಕ್ ಹರಿಸಿ ಅಲ್ಲಿಂದ ಚೌಧರಿ ಪಲಾಯನ ಮಾಡಿದ್ದಾನೆ. ಆದರೆ ಟ್ರಕ್‌ನ ಕ್ಲೀನರ್ ಅಜಯ್‌ನ್ನು ಗ್ರಾಮದವರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಬೀದಿ ಬದಿಯಲ್ಲಿ ಬಿಡಾರ ಹೂಡಿರುವ ಜನರು ಅಡುಗೆ ಮಾಡುವ ಸ್ಥಳದಲ್ಲಿ ಚೌಧರಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ, ಅಲ್ಲಿನ ಜನರು ಬೈದಿದ್ದರು. ಈ ಜಗಳದಲ್ಲಿ ನಿಮಗೆ ಪಾಠ ಕಲಿಸುತ್ತೇನೆ ಎಂದು ಹೇಳಿ ಚೌಧರಿ ಬೆದರಿಕೆಯೊಡ್ಡಿದ್ದನು. ಆಮೇಲೆ ಮದ್ಯ ಸೇವಿಸಿ ದಾರಿ ಪಕ್ಕದಲ್ಲಿ ಮಲಗಿದ್ದ ಜನರ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದಾನೆ.
ಆದಾಗ್ಯೂ, ಟ್ರಕ್ ಹರಿದು ಸಾವಿಗೀಡಾದವರು ಚೌಧರಿಯನ್ನು ಬೈದವರಾಗಿರಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಹೇಳಿದ್ದಾರೆ. ಚೌಧರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.