

ಭೂಪಾಲ್: ಪ್ರಾಮಾಣಿಕತಯೇ ಉತ್ತಮ ನೀತಿ ಎಂದು ನಂಬಿರುವ ನಾನು ವ್ಯಾಪಂ ಹಗರಣ ಸಂಬಂಧ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಬಹುಕೋಟಿ ನಿಗೂಢ ಸಾವುಗಳ ಹಗರಣ ಸಂಬಂಧ ಶಿವರಾಜ್ ಸಿಂಗ್ ಚೌಹಾಣ್ ಅವರು ತಪ್ಪನ್ನು ಮಾಡಿದ್ದು, ಕೂಡಲೇ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಹೇಳಿ ವಿರೋಧ ಪಕ್ಷದ ಮುಖಂಡರು ಚೌಹಾಣ್ ವಿರುದ್ಧ ಹಲವು ವಿರೋಧಗಳನ್ನು ವ್ಯಕ್ತಪಡಿಸಿದ್ದರಲ್ಲದೇ, ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಇದೀಗ ವ್ಯಾಪಂ ಹಗರಣ ಸಂಬಂಧ ಹೇಳಿಕೆ ನೀಡಿರುವ ಚೌಹಾಣ್ ಅವರು, ಕಾಂಗ್ರೆಸ್ ಪಕ್ಷದ ಸ್ವಾರ್ಥ ರಾಜಕೀಯ ಆಟಕ್ಕೆ ಸಂಸದರ ಪ್ರತಿಷ್ಠೆಯು ದೇಶದೆಲ್ಲೆಡೆ ಹಾಳಾಗುತ್ತಿದೆ. ಇದರಿಂದಾಗಿ ಸಾಕಷ್ಟು ಬೇಸರವಾಗಿದೆ. ಪ್ರಸ್ತುತ ವ್ಯಾಪಂ ಹಗರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಸತ್ಯಾಂಶ ಹೊರಲಿದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
2005ರ ನವಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ವ್ಯಾಪಂ ನೇಮಕಾತಿಯನ್ನು ಪಾರದರ್ಶಕವಾಗಿರಿಸಲು ಪ್ರಯತ್ನ ನಡೆಸಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕಾತಿಯನ್ನು ಮಾಡಿಕೊಳ್ಳಲಾಗಿತ್ತು. ಈ ನೇಮಕಾತಿಯಲ್ಲಿ ಸಾಕಷ್ಟು ಯುವ ಜನತೆಯನ್ನು ಕೈ ಬಿಡಲಾಗಿತ್ತು. ನೇಮಕಾತಿ ಅನ್ಯಾಯ ರೀತಿಯಲ್ಲಿ ನಡೆದಿತ್ತು.
ಹೀಗಾಗಿ ಪಾರದರ್ಶಕತೆಯ ರೀತಿಯಲ್ಲಿ ವ್ಯಾಪಂ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, 1.7 ಆಕಾಂಕ್ಷಿಗಳು ಸರ್ಕಾರಿ ಸೇವೆ ಮತ್ತು ಮೆಡಿಕಲ್ ಕೋರ್ಸ್ ಗಳಿಗಾಗಿ ಪರೀಕ್ಷೆ ಬರೆದಿದ್ದು, ಇದರಲ್ಲಿ 2007 ರಿಂದ 3.54 ಲಕ್ಷ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.