

ನವದೆಹಲಿ: ಪ್ರಜಾಪ್ರಭುತ್ವ ಯಾರೊಬ್ಬರ ಹುಚ್ಚಾಟಿಕೆ ಮತ್ತು ಭ್ರಮೆಗಳಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರು ಏನು ಹೇಳಲು ಬಯಸುತ್ತಾರೆಯೋ ಅದನ್ನು ಹೇಳಲಿ ಎಂದು ತಿಳಿಸಿದ್ದಾರೆ.
ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜಿಎಸ್ ಟಿ ಮಸೂದೆ ಸೇರಿದಂತೆ ಅನೇಕ ಬಡವರ ಪರವಾದ ಕ್ರಮಗಳು ಮುಂದೆ ಹೋಗದೆ ಹಾಗೆಯೇ ಸಿಕ್ಕಿಹಾಕಿಕೊಂಡಿದೆ. ಸಂಸತ್ತು ಕಲಾಪ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದರು.
ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿ ಹೆಚ್ಚಾಗುತ್ತಿವೆ.ನನ್ನ ಮನಸ್ಸಿಗೆ ತೋಚಿದಂತೆ ನಾನು ಅಂದುಕೊಂಡಂತೆ ಮಾಡಿದರೆ ಈ ದೇಶ ಉತ್ತಮವಾಗಿ ನಡೆಯಲು ಸಾಧ್ಯವೇ? ಎಂದು ಪ್ರಧಾನ ಮಂತ್ರಿ ಕೇಳಿದ್ದರು.
ಇಂದು ಕೂಡ ಸದನದ ಕಲಾಪ ಅರ್ಧಕ್ಕೆ ನಿಂತುಹೋಯಿತು. ಮೊನ್ನೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ನ್ಯಾಶನಲ್ ಹೆರಾಲ್ಡ್ ಕೇಸ್ ವಿಚಾರ ಬಂದಂದಿನಿಂದ ಸಂಸತ್ತಿನ ಉಭಯ ಸದನಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಸರ್ಕಾರ ರಾಜಕೀಯ ಹಗೆತನ ಮಾಡುತ್ತಿದೆ ಎಂದು ಆರೋಪಿಸುತ್ತಲೇ ಇದೆ. ಈ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಕೋರ್ಟ್ ಮುಂದೆ ಇದೇ 19ರಂದು ಹಾಜರಾಗಬೇಕಾಗಿದೆ. ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ದೂರು ಸಲ್ಲಿಸಿದ್ದಾರೆ.
ಚಳಿಗಾಲದ ಅಧಿವೇಶನ ಸುಗಮವಾಗಿ ಸಾಗುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು, ಜಿಎಸ್ ಟಿ ಮಸೂದೆ ಅಂಗೀಕಾರವಾಗಬೇಕಿದೆ.ಮುಂದಿನ ವರ್ಷ ಏಪ್ರಿಲ್ ಗೆ ಮಸೂದೆ ಜಾರಿಗೆ ಬರಬೇಕಾದರೆ ಈ ಅಧಿವೇಶನದಲ್ಲಿಯೇ ಅದಕ್ಕೆ ಒಪ್ಪಿಗೆ ಸಿಗಬೇಕಾಗಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗೆ ರಾಜ್ಯಸಭೆಯಿಂದ ಅಂಗೀಕಾರವಾಗಬೇಕಾದರೆ ಕಾಂಗ್ರೆಸ್ ಸದಸ್ಯರ ಬೆಂಬಲ ಬೇಕೇ ಬೇಕು. ಅಲ್ಲಿ ಅವರ ಸಂಖ್ಯೆ ಜಾಸ್ತಿಯಿದೆ.
ನಿನ್ನೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಂದೇ ವೇದಿಕೆ ಹಂಚಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಶರದ್ ಪವಾರ್ ಅವರ ಸಂಪರ್ಕ ವ್ಯಾಪ್ತಿ ನಿಜಕ್ಕೂ ಅಸಾಧಾರಣವಾಗಿದೆ. ರಾಜಕೀಯ ಸಾಕೆನಿಸಿದಾಗ ಈ ಸಂಪರ್ಕ ವ್ಯಾಪ್ತಿ ಸಹಾಯಕ್ಕೆ ಬರುತ್ತದೆ ಎಂದು ಹೇಳಿದರು.
ಶರದ್ ಪವಾರ್ ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ಬಗ್ಗೆ ಪ್ರಧಾನಿ ಶ್ಲಾಘಿಸಿದರು. ಕಾರ್ಯಕ್ರಮದ ಕೊನೆಗೆ ಪ್ರಧಾನಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಇಬ್ಬರ ಮುಖದಲ್ಲಿಯೂ ಸಂಸತ್ತು ಕಲಾಪ ಸುಗಮವಾಗಿ ನಡೆಯದಿರುವ ಭಾವ ವ್ಯಕ್ತವಾಗುತ್ತಿತ್ತು.