

ನವದೆಹಲಿ: ``ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದಿದ್ದಕ್ಕೆ ಕರ್ನಾಟಕ ಸರ್ಕಾರವನ್ನು ವಜಾ ಮಾಡಲಾಗಿದೆಯೇ?'' ಇದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಕೇಳಿದ ಪ್ರಶ್ನೆ.
ಪಂಜಾಬ್‍ನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಂಗಳವಾರವೂ ಲೋಕಸಭೆಯಲ್ಲಿ ಪ್ರಸ್ತಾಪವಾಗಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ದಲಿತರ ಕೈಕಾಲು ಕಡಿದವರ ಮೇಲೆ ಕ್ರಮ ಕೈಗೊಳ್ಳದ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪಟ್ಟುಹಿಡಿದ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಫಟಿಸಿದರು. ಈ ಹಂತದಲ್ಲಿ ಮಾತನಾಡಿದ ಸಚಿವ ನಾಯ್ಡು, ಕರ್ನಾಟಕದಲ್ಲಿ ಕಲಬುರ್ಗಿ ಅವರ ಹತ್ಯೆಯಾಗಿದೆ. ಹಾಗಂತ ಅಲ್ಲಿ ಸರ್ಕಾರವನ್ನು ವಜಾ ಮಾಡಲಾಗಿದೆಯೇ? ದಾದ್ರಿಯಲ್ಲಿ ವ್ಯಕ್ತಿಯನ್ನು ಕೊಚ್ಚಿಹಾಕಲಾಗಿದೆ, ಉತ್ತರಪ್ರದೇಶ ಸರ್ಕಾರವನ್ನು ವಜಾ ಮಾಡಲಾಗಿ ದೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ, ಬಿಜೆಪಿಎಸ್‍ಎಪಿ ಸದ ಸ್ಯರು ಪ್ರತಿಪಕ್ಷಗಳ ಮೇಲೆ ಪ್ರತಿದಾಳಿ ಮಾಡಿದ್ದಲ್ಲದೇ, ಪ್ರತಿಪಕ್ಷಗಳು ಸದನವನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ದೂರಿದರು.
ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ: ಕಾಂಗ್ರೆಸ್‍ನ ಜ್ಯೋತಿರಾದಿತ್ಯ ಸಿಂಧ್ಯಾ ಪಂಜಾಬ್‍ನಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ, ಪ್ರತಿ 18 ನಿಮಿಷಗಳಿಗೊಂದರಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ನಡೆಯುತ್ತಿದೆ. ಪ್ರತಿದಿನ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಇತ್ತೀಚೆಗೆ ದಲಿತ ಯುವಕರ ಕಾಲು ಕತ್ತರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ದಲಿತ ಮಹಿಳೆಯ ಮೇಲೆ ಬಸ್ಸನ್ನು ಹರಿಸಲಾಗಿದೆ. ಬಸ್ ಮಾಲೀಕ, ಸಿಎಂ ಬಾದಲ್ ಅವರ ಹತ್ತಿರದ ಸಂಬಂಧಿ ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ನಾಯ್ಡು, ಸಂಸತ್ತಿನೊಳಗೆ ನಿಂತು ರಾಜ್ಯ ಸರ್ಕಾರಗಳ ವಿರುದ್ಧ ಅಪಪ್ರಚಾರ ಮಾಡಬೇಡಿ ಎಂದರು. ಸಿಂಧ್ಯಾ ಅವರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಪಂಜಾಬ್ ಸಿಎಂ ಪ್ರಕಾಶ್‍ಸಿಂಗ್ ಬಾದಲ್ ಅವರ ಸೊಸೆಯೂ ಆದ ಸಚಿವೆ ಹರ್‍ಸಿಮ್ರತ್ ಕೌರ್, ``ಕಾಂಗ್ರೆಸ್ ಪಂಜಾಬ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ'' ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಪ್ರತ್ಯೇಕ ಖಾಲಿಸ್ತಾನ್ ಬೇಡಿಕೆಗೆ ಬೆಂಬಲ ನೀಡುತ್ತಿದ್ದಾರೆಂದೂ ಗಂಭೀರ ಆರೋಪ ಮಾಡಿದರು. ಇದೇ ವಿಷಯಕ್ಕೆ ಆಡಳಿತಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ಯುದ್ದವೇ ನಡೆಯಿತು. ಈ ಬಗ್ಗೆ ಮಾತನಾಡಲು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಆರ್‍ಜೆಡಿ ಮತ್ತು ಟಿಎಂಸಿ ಸದಸ್ಯರು ಸಭಾತ್ಯಾಗ ಮಾಡಿದರು.