ನ್ಯಾಷನಲ್ ಹೆರಾಲ್ಡ್ ಎನ್ನುವುದು ಒಂದು ಇಂಗ್ಲಿಷ್ ದಿನಪತ್ರಿಕೆ. 1938 ಸೆ.9ರಂದು ಈ ಪತ್ರಿಕೆ ಲಖನೌನಲ್ಲಿ ಆರಂಭಗೊಂಡಿದ್ದು, ಜವಾಹರಲಾಲ್ ನೆಹರೂ ಅವರು ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷದ ಮಾಲಕತ್ವದಲ್ಲಿ ಈ ಪತ್ರಿಕೆ ಹೊರಬರುತ್ತಿತ್ತು. ಜೊತೆಗೆ ಹಿಂದಿಯಲ್ಲಿ ನವಜೀವನ್, ಮತ್ತು ಉರ್ದುವಿನಲ್ಲಿ ಕ್ವಾಮಿ ಆವಾಜ್ ಎಂಬ ಸೋದರಿ ಪತ್ರಿಕೆಯೂ ಇತ್ತು. 2008ರಲ್ಲಿ ನ್ಯಾಷನಲ್ ಹೆರಾಲ್ಡ್ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅದಕ್ಕೂ ಮುನ್ನ 1940ರಿಂದ 1979ರವರೆಗೆ ಇದು ಕಾರ್ಯಾಚರಿಸುತ್ತಿರಲಿಲ್ಲ. 2008ರಲ್ಲಿ ಕೊನೆಗೆ ಉಳಿದಿದ್ದ ದೆಹಲಿ ಆವೃತ್ತಿ ಕೂಡ ನಿಂತು ಹೋಗಿತ್ತು. ಪತ್ರಿಕೆ ಸಂಪೂರ್ಣ ಸ್ಥಗಿತವಾಗುವ ಮುನ್ನ ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದುದು ಅಸೋಸಿಯೇಟೆಡ್ ಜರ್ನಲ್ ಲಿ (ಎಜೆಎಲ್). ಬಳಿಕ ಇದು ರಿಯಲ್ ಎಸ್ಟೇಟ್ ಕಂಪನಿಯಾಗಿ ಬದಲಾಗಿತ್ತು. ಪತ್ರಿಕೆ ಸ್ಥಗಿತವಾಗುವ ವೇಳೆ ಅದರ ಮೇಲೆ 90 ಕೋಟಿ ರು. ಸಾಲದ ಹೊರೆ ಇತ್ತು. ಜೊತೆಗೆ ಪತ್ರಿಕೆಗೆ ದೆಹಲಿ, ಲಖನೌ ಮುಂಬೈಗಳಲ್ಲಿ ಆಸ್ತಿ ಇತ್ತು.