ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಭೇಟಿ ನೀಡಿದ ನಂತರ ಕಾರ್ಗಿಲ್ ಯುದ್ಧ ನಡೆದಿತ್ತು. ಈಗ ಏನಾಗುತ್ತೋ? ಎಂದು ಪ್ರಶ್ನಿಸಿದೆ.
ಮೋದಿಯ ಪಾಕ್ ಭೇಟಿಯನ್ನು ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮನಿಶ್ ತಿವಾರಿ, ಮೋದಿ ಪಾಕ್ ಭೇಟಿ ಅತ್ಯಂತ ಕೆಟ್ಟ ರಾಜತಾಂತ್ರಿಕತೆಯ ಪ್ರದರ್ಶನ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಕಳೆದ ಬಾರಿ ವಾಜಪೇಯಿ ಅವರು ಭೇಟಿ ನೀಡಿದಾಗ ಕಾರ್ಗಿಲ್ ಯುದ್ಧವಾಗಿತ್ತು. ಈಗ ಏನಾಗುತ್ತೋ? ಎಂದಿದ್ದಾರೆ.
ಅಫ್ಘಾನಿಸ್ತಾನ ಪ್ರವಾಸದ ಬಳಿಕ ಕಾಬೂಲ್‌ನಿಂದ ನೇರವಾಗಿ ಲಾಹೋರ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಇಂದು 66 ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಶುಭ ಕೋರಿದರು. ಅಲ್ಲದೆ ಅವರ ನಿವಾಸಕ್ಕೂ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.