ನವದೆಹಲಿ: ಸಚಿವ ಸಂಪುಟ ನಿರ್ಣಯಕ್ಕೆ ಸಹಿ ಹಾಕದ ಇಬ್ಬರು ಅಧಿಕಾರಿಗಳ ಅಮಾನತು ಖಂಡಿಸಿ ಇಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಐಎಎಸ್ ಅಧಿಕಾರಿಗಳು (ಡಿಎಎನ್‌ಐಸಿಎಸ್) ಬಿಜೆಪಿಯ ಬಿ ಟೀಮ್ ಇದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಂದು ಹೇಳಿದ್ದಾರೆ.
ಒಳ್ಳೆಯದು ಇಂತಹ ಅಧಿಕಾರಿಗಳಿಲ್ಲದೇ ಇದ್ದರೆ ದೆಹಲಿಗೆ ಉತ್ತಮ ಎಂದು ಕೇಜ್ರಿವಾಲ್ ಟ್ವೀಟರ್‌ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಕಚೇರಿಯ ವಿರುದ್ಧವೂ ಕಿಡಿಕಾರಿರುವ ದೆಹಲಿ ಸಿಎಂ, ಪಿಎಂಒ ದೆಹಲಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಪ್ರಧಾನಿ ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತಾರೆ ಎಂದು ದೂರಿದ್ದಾರೆ.
ಇನ್ನು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸಹ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಸೂಚನೆ ಮೀರಿ ರಜೆ ಹಾಕಿದ್ದೇ ಆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಯಾರೇ ಆದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಸಾಮೂಹಿಕ ರಜೆ ಮೇಲೆ ತೆರಳುವ ಅವಕಾಶವೇ ಇಲ್ಲ.ದೆಹಲಿ ಸಚಿವಾಲಯದ ಸೂಚನೆಯಂತೆ ಕೆಲಸ ಮಾಡಬೇಕು ,ಮೀರಿದ್ದೇ ಆದಲ್ಲಿ ಕ್ರಮ ಖಚಿತ ಎಂದು ಸಿಸೋಡಿಯಾ ಎಚ್ಚರಿಸಿದ್ದಾರೆ.
ಸಚಿವ ಸಂಪುಟದ ತೀರ್ಮಾನದ ಕಡತಕ್ಕೆ ಸಹಿ ಹಾಕಲು ನಿರಾಕರಿಸಿದ ಗೃಹ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ದೆಹಲಿ ಆಮ್ ಆದ್ಮಿ ಸರ್ಕಾರ ವಜಾಗೊಳಿಸಿದೆ. ಇದರಿಂದ ಅಕ್ರೋಶಗೊಂಡಿರುವ ಕೇಂದ್ರಾಡಳಿತ ಪ್ರದೇಶದ ಐಎಎಸ್ ಅಧಿಕಾರಿಗಳು (ಡಿಎಎನ್‌ಐಸಿಎಸ್) ಗುರುವಾರ ಸುಮಾರು 70 ಐಎಎಸ್ ಅಧಿಕಾರಿಗಳು ಅರ್ಧ ದಿನ ರಜೆ ಹಾಕುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಬಿಸಿ ಮುಟ್ಟಿಸಿದ್ದಾರೆ.