

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಹರಿದು ಬಂದ ದೇಣಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಎಎಪಿಗೆ ಬುಧವಾರ ನೋಟೀಸ್ ನೀಡಿದೆ.
ಕಳೆದ ವರ್ಷ ನಕಲಿ ಸಂಸ್ಥೆಗಳಿಂದ ಎಎಪಿಗೆ ರು. 2 ಕೋಟಿ ದೇಣಿಗೆ ಹರಿದು ಬಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಎವಿಎಎಂ ಸ್ವಯಂಸೇವಕರು ರು. 2 ಕೋಟಿ ಹಣವನ್ನು ಏಪ್ರಿಲ್ 15ರಂದು ಮಧ್ಯರಾತ್ರಿ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆಂದು ಆರೋಪಿಸಿದ್ದರು.
ಎಎಪಿ ಖಾತೆಗೆ ನಾಲ್ಕು ನಕಲಿ ಸಂಸ್ಥೆಗಳು ತಲಾ ರು. 50 ಲಕ್ಷ ದೇಣಿಗೆ ನೀಡಿವೆ ಎಂದು ಎವಿಎಎಂನ ಕರಣ್‌ಸಿಂಗ್ ಮತ್ತು ಗೋಪಾಲ್ ಗೋಯಲ್ ಆರೋಪಿಸಿದ್ದರು.
ಆರೋಪವನ್ನು ಅಲ್ಲಗಳೆದಿದ್ದ ಎಎಪಿ ತಮ್ಮ ಪಕ್ಷದ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿತ್ತು. ಈ ಸಂಬಂಧ ತನಿಖೆ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆ ಎಎಪಿಗೆ ನೋಟೀಸ್ ನೀಡಿದ್ದು, ಫೆಬ್ರವರಿ 16ರೊಳಗೆ ನೋಟೀಸ್‌ಗೆ ಉತ್ತರಿಸುವಂತೆ ಸೂಚಿಸಿದೆ.