

ನವದೆಹಲಿ: ಸರ್ಕಾರದ ಮೇಕ್ ಇನ್ ಇಂಡಿಯಾ ಟ್ವೀಟರ್ ಖಾತೆಯಿಂದ ತಪ್ಪಾಗಿ ಅಪ್‌ಲೋಡ್ ಆದ ಟ್ವೀಟೊಂದು ಮಂಗಳವಾರ ಎಲ್ಲರ ಗೊಂದಲಕ್ಕೆ ಕಾರಣವಾಯಿತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಟ್ವಿಟರ್ ಖಾತೆಯಲ್ಲಿ ವಾಹನಗಳ ಮೇಲಿನ ಅಬಕಾರಿ ಸುಂಕ ಶೇ. 3ರಿಂದ 4ರಷ್ಟು ಕಡಿತ ಎಂದು ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲ, ಸಣ್ಣ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಶೇ. 8ರಿಂದ 12 ರಷ್ಟು ದೊಡ್ಡ ಕಾರುಗಳಿಗೆ ಶೇ. 24ರಿಂದ 27 ಹಾಗೂ ಮಧ್ಯಮ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಶೇ. 20ರಿಂದ 24 ರಷ್ಟು ಕಡಿತವಾಗಿದೆ ಎಂದೂ ಟ್ವೀಟ್ ಮಾಡಲಾಗಿತ್ತು.
ಇದಾದ 5 ಗಂಟೆಗಳ ನಂತರ ಟ್ವೀಟ್‌ಗೆ ತಿದ್ದುಪಡಿ ತಂದು, ಅಬಕಾರಿ ಸುಂಕ ಕಡಿತ 2014ರ ಡಿ.31ರವರೆಗೆ ಸೀಮಿತ ಎಂದು ಪ್ರಕಟಿಸಿತ್ತು. ಯುಪಿಎ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ವಾಹನಗಳ ಅಬಕಾರಿ ಸುಂಕ ಕಡಿತ ಘೋಷಿಸಿತ್ತು. ಜೂನ್‌ನಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಸುಂಕದಲ್ಲಿ ಕಡಿತವನ್ನೂ ಇನ್ನೂ 6 ತಿಂಗಳ ಕಾಲ ಮುಂದುವರಿಸುವಂತೆ ನಿರ್ಧರಿಸಿತ್ತು. ಕಳೆದ ವಾರ ಹಣಕಾಸು ಸಚಿವಾಲಯ ಈ ಕಡಿತವನ್ನು ಮುಂದುವರಿಸದಿರಲು ನಿರ್ಧರಿಸಿತ್ತು.