

ಲಖನೌ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಪುಂಡಾಟಿಕೆ ವಿರುದ್ಧ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಕ್ಕರ್, ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕ್ ಪುಂಡಾಟಿಕೆ ನಡೆಸುತ್ತಿದ್ದು, ಈ ಕೂಡಲೇ ಅದನ್ನು ನಿಲ್ಲಿಸಬೇಕು. ಇದೇ ರೀತಿ ಮುಂದುವರೆದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಒಂದು ವೇಳೆ ಪಾಕ್‌ಗೆ ಮುಸುಕಿನ ಯುದ್ಧ ಬೇಕಿದ್ದರೆ ಅದಕ್ಕೆ ನಾವು ಸಿದ್ಧ ಎಂದು ಪಾಕ್ ಸೇನೆಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ದುರುದ್ದೇಶದಿಂದಾಗಿ ಭಾರತದೊಳಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಇದು ಸಾಧ್ಯವಾಗದ ಕಾರ್ಯ ಎಂದರು.
ಭಾರತ ಇಲ್ಲಿಯವರೆಗೂ ಪಾಕಿಸ್ತಾನದ ಜತೆ ಶಾಂತಿ ಮಾತುಕತೆಗೆ ಮುಂದಾಗುತ್ತಿದ್ದರೆ ಅತ್ತ ಪಾಕ್ ಮಾತ್ರ ತನ್ನ ಪುಂಡಾಟಿಕೆಯನ್ನು ಮುಂದುವರೆಸಿದೆ ಎಂದು ಪರಿಕ್ಕರ್ ಹೇಳಿದ್ದಾರೆ.