

ಬೆಂಗಳೂರು: ಏರೋಸ್ಪೇಸ್ ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸುವಂತೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ಏರೋಸ್ಪೇಸ್ ವಿವಿ ಸ್ಥಾಪಿಸುವ ಬಗ್ಗೆ ಇತ್ತೀಚೆಗೆ ಎಚ್ಎಎಲ್‍ನಲ್ಲಿ ನಡೆದ ಸಭೆಯಲ್ಲಿ ಚರ್ಚೆನಡೆದಿದೆ. ಕೇಂದ್ರ ಸರ್ಕಾರವು ಸುಮಾರು ರು100 ಕೋಟಿ ಆರಂಭಿಕ ಬಂಡವಾಳದೊಂದಿಗೆ ವಿವಿ ಆರಂಭಿಸುವ ಪ್ರಸ್ತಾಪ ಮಾಡಿದೆ. ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಬೆಂಗಳೂರು ನಗರ ಮುಂಚುಣಿಯಲ್ಲಿರುವುದರಿಂದ ಈ ವಿವಿಯನ್ನು ರಾಜ್ಯದಲ್ಲಿಯೇ ಆರಂಬಿಸಬೇಕು.
ಇದಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ಕರ್ನಾಟಕ ಸರ್ಕಾರ ನೀಡಲು ಸಿದ್ಧವಿದೆ ಎಂದು ಇಬ್ಬರಿಗೂ ಬರೆದ ಪ್ರತ್ಯೇಖ ಪತ್ರದಲ್ಲಿ ದೇಶಪಾಂಡೆ ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಏರೋ ಸ್ಪೇಸ್‍ಗೆ ಸಂಬಂಧಿಸಿದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿವೆ. ದೇಶದ ಮೊದಲ ಏರೋ ಸ್ಪೇಸ್ ವಿಶೇಷ ಆರ್ಥಿಕ ವಲಯ ಬೆಳಗಾವಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂಥ ಪ್ರತಿಷ್ಠಿತ ವಿವಿಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಸೂಕ್ತ ಪರಿಸರವಿದೆ. ಈ ಸಂಬಂಧ ಈಗಾಗಲೇ ಎಚ್‍ಎಎಲ್‍ಗೆ ಮನವಿ ಸಲ್ಲಿಸಲಾಗಿದ್ದು, ವಿಶೇಷ ತಂಡವನ್ನು ಕಳುಹಿಸಿ ಜಾಗ ಗುರುತಿಸುವ ಪ್ರಕ್ರಿಯೆಗೆ ಮುಂದಾಗ ಬೇಕು. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಇದಕ್ಕೆ ಸಂಪೂರ್ಣ ನೆರವು ನೀಡಲಿದೆ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.
ಆರ್‍ವಿ ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನೆ
ಇತ್ತೀಚೆಗೆ ಜೆಮ್ ಶೆಡ್ ಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ವಾಹನ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಾಗಿರುವ ಆರ್.ವಿ.ಕಾಲೇಜಿನ ವಿದ್ಯಾರ್ಥಿಗಳಿಗೆ ಸಚಿವ ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಅವರಿಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಉಳಿದ ಸಂಸ್ಥೆಗಳಿಗೆ ಈ ಪ್ರಯತ್ನ ಮಾದರಿಯಾಗಲಿ ಎಂದು ಆಶಿಸಿದ್ದಾರೆ.