

ನವದೆಹಲಿ: ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗೂಢ ಪ್ರಕರಣಗಳು ಹೆಚ್ಚುತ್ತಿದ್ದು, ಸಚಿವೆಯಾಗಿದ್ದರು ನಾನು ಭಯಪಡುವಂತಹ ಸಂದರ್ಭ ಎದುರಾಗಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಮಂಗಳವಾರ ಹೇಳಿದ್ದಾರೆ.
ಉಮಾ ಭಾರತಿ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮೊದಲು ಆಗ್ರಹಿಸಿದ ಸಚಿವೆಯಾಗಿದ್ದು, ಪ್ರಕರಣ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಹೇಳಿದ್ದರು. ಮಧ್ಯಪ್ರದೇಶದಲ್ಲಿ ಇದೀಗ ನಿಗೂಢ ಸಾವು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವೆ ಸಹ ತಮ್ಮೊಳಗಿರುವ ಭೀತಿಯನ್ನು ಹೊರಹಾಕಿದ್ದು, ಯಾರು, ಯಾವಾಗ ಹೇಗೆ ಸಾಯುತ್ತಾರೆಂಬುದು ತಿಳಿಯುತ್ತಲೇ ಇಲ್ಲ. ನಾನು ಸಚಿವೆಯಾಗಿದ್ದೇನೆ ಸಾಕಷ್ಟು ಭದ್ರತೆಗಳಿದ್ದರೂ ನನಗೆ ಇದೀಗ ಭಯವಾಗುತ್ತಿದೆ. ಹೀಗಾಗಿ ಪ್ರಕರಣ ಸಂಬಂಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವ್ಯಾಪಂ ಹಗರಣದಲ್ಲಿ ಕೇಳಿಬರುತ್ತಿರುವ ನಿಗೂಢ ಸಾವು ಪ್ರಕರಣಗಳು ಒಂದು ವೇಳೆ ನಿಗೂಢವಾಗಿಲ್ಲದೆಯೂ ಇರಬಹುದು. ಮಾನಸಿಕ ಶಕ್ತಿಯಿಲ್ಲದವರು, ಮುಗ್ಧ ಜನರು ಕೆಲವೊಮ್ಮೆ ಈ ರೀತಿಯ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಾಗ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಭಯದಿಂದ ಅಥವಾ ಅವಮಾನವಾಗುವ ಭೀತಿಯಿಂದಲೂ ಕೆಲವರು ಆತ್ಮಹತ್ಯೆಗೆ ಶರಣಾಗಿರಬಹುದು.
ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ನಾನು ಸಹ ಹಗರಣದಲ್ಲಿ ಭಾಗಿದ್ದೇನೆಂದು ಹೇಳಿ ಪೊಲೀಸ್ ಠಾಣೆ ಎಫ್ಐಆರ್ ದಾಖಲಿಸಿದ್ದರು. ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆಂಬ ಅರೋಪ ಕೇಳಿ ಒಂದು ಕ್ಷಣ ಗಾಬರಿಯಾಯಿತು. ಈ ಆರೋಪದಿಂದ ಹಲವು ದಿನಗಳ ಕಾಲ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದೆ. ಆ ವೇಳೆ ಸ್ವಲ್ಪ ಧೃತಿಗೆಟ್ಟಿದ್ದರೂ ನಾನೂ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೋ ಏನೋ ಆ ವೇಳೆ ನನ್ನೊಳಗಿನ ಮಾನಸಿಕ ಸ್ಥೈರ್ಯ ನನ್ನನ್ನು ಕಾಪಾಡಿತು. ಸಾಮಾನ್ಯವಾಗಿ ಇಂತಹ ಸನ್ನಿವೇಶದಲ್ಲಿ ಮುಗ್ಧ ಜನರು ಆತ್ಮಹತ್ಯೆ ಶರಣಾಗುವುದು ಸಾಮಾನ್ಯವೇ ಎಂದು ಹೇಳಿದ್ದಾರೆ.